ಕಲಬುರಗಿ: ಒಂದೊಂದಾಗಿ ಹೊರ ಬರುತ್ತಿರುವ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಕ್ರಿಮಿನಲ್ ಕಾರ್ಯಗಳ ಬಗ್ಗೆ ಜಿಲ್ಲೆಯ ಸಚಿವರು ಹಾಗೂ ಆಡಳಿತಾರೂಢ ಕಾಂಗ್ರೆಸ್ ಶಾಸಕರು ಮಾತನಾಡಲಿ, ತುಟಿ ಬಿಚ್ಚಲಿ ಎಂದು ಬಿಜೆಪಿ ವಿಭಾಗೀಯ ಪ್ರಬಾರಿ ಹಾಗೂ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಡ್ರಗ್ಸ್ ಸಾಗಾಣಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೇ ಹಾಗೂ ಕಾರ್ಯಕರ್ತರು ಭಾಗಿ ಮಹಾರಾಷ್ಟ್ರದಲ್ಲಿ ಬಂಧನವಾಗಿರುವುದು ಹಾಗೂ ಕೆಲ ತಿಂಗಳುಗಳ ಹಿಂದೆ ಬಸವೇಶ್ವರ ಆಸ್ಪತ್ರೆ ಎದರುಗಡೆ ಡ್ರಗ್ಸ್ ದಾಸ್ತಾನು ಮಳಿಗೆಯಲ್ಲಿ ಡಗ್ಸ್ ಕಳ್ಳತನವಾಗಿದೆ ಎಂದು ವ್ಯಕ್ತಿಯನ್ನು ಕೊಂದಿದ್ದರ ಪ್ರಕರಣದಲ್ಲಿ ಕೆಲ ವರ್ಷಗಳ ಹಿಂದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮಗನೇ ಬಂಧನವಾಗಿರುವುದು ಹಾಗೂ ಸಚಿವರ ವಿಧಾನಸಭಾ ಕ್ಷೇತ್ರದಲ್ಲಿ ಅವರದ್ದೇ ಇಲಾಖಾಧಿಕಾರಿಗಳು ಎಲ್ಲರಿಗೂ ಕಮಿಷನ್ ಕೊಡಬೇಕೆಂದು ಹೇಳಿ ಇಂತಿಷ್ಟು ಲಂಚ ಕೊಡಲೇಬೇಕೆಂದು ಹೇಳಿರುವುದನ್ನು ನೋಡಿದರೆ ಜಿಲ್ಲೆಯಲ್ಲಿ ಏನಾಗುತ್ತಿದೆ ಎಂಬುದೇ ತಿಳಿಯದಂತಾಗಿದೆ.
ನಮ್ಮದೇ ಸರ್ಕಾರವಿದೆ ಏನ್ ಮಾಡಿದ್ರೂ ನಡೆಯುತ್ತದೆ. ನಮ್ಮ ರಕ್ಷಣೆ ಗೆ ನಾಯಕರು ಬರುತ್ತಾರೆಂದು ತಿಳಿದ ಪರಿಣಾಮ ಜತೆಗೆ ಇಂತಹ ಅನೇಕ ಪ್ರಕರಣಗಳನ್ನು ಮುಚ್ಚಿ ಹಾಕಿರುವುದೇ ಅಪರಾಧ ಪ್ರಕರಣಗಳಿಗೆ ಪ್ರೇರಣೆ ಎನ್ನಬಹುದಾಗಿದೆ. ಹೀಗಾಗಿ ಇನ್ಮುಂದೆಯಾದರೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಬಂಧಿತರಾಗಿರುವ ಕಾಂಗ್ರೆಸ್ ಮುಖಂಡ ಹಾಗೂ ಇನ್ನಿತರರು ತನಿಖೆಗೆ ಸಹಕರಿಸಬೇಕು. ಡ್ರಗ್ಸ್ ಯುವ ಪೀಳಿಗೆಯನ್ನೇ ಹಾಳು ಮಾಡುತ್ತಿದೆ. ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವಂತಾಗಬೇಕು ಜತೆಗೆ ಡ್ರಗ್ಸ್ ದಂಧೆಯನ್ನು ಬುಡ ಸಮೇತ ಕಿತ್ತು ಹಾಕಬೇಕೆಂದಿದ್ದಾರೆ.
ವ್ಯಾಪಕವಾಗುತ್ತಿರುವ ಡ್ರಗ್ಸ್ , ಮಟಕಾ, ಜೂಜಾಟ ಜತೆಗೆ ಇತರ ಅಪರಾಧ ಚಟುವಟಿಕೆಗಳು ಯಾರ ಭಯ ಇಲ್ಲದೇ ನಿರ್ಭಯವಾಗಿ ನಡೆಯುತ್ತಿವೆ. ಹಾಡು ಹಗಲೇ ಚಿನ್ನಾಭರಣ ಅಂಗಡಿಗಳು ಲೂಟಿಯಾಗುತ್ತಿವೆ. ಎಲ್ಲೆಂದರಲ್ಲಿ ಜನತೆ ಮೇಲೆ ಗುಂಡಿನ ದಾಳಿಗಳು ನಡೆಯುತ್ತಿವೆ. ಮನೆಗೆ ನುಗ್ಗಿ ದರೋಡೆ ಮಾಡಲಾಗುತ್ತಿದೆ. ಯಾರಿಗೂ ಯಾರ ಭಯ ಇಲ್ಲದಂತಾಗಿದೆ. ಕ್ರಮ ಕೈಗೊಳ್ಳಬೇಕಾದ ಪೊಲೀಸ್ ರ ಕೈ ಕಟ್ಟಿ ಹಾಕಲಾಗಿದೆ. ಇನ್ಮುಂದೆಯಾದರೂ ಪೊಲೀಸರು ಸ್ವಯಂದಿಂದ ಕಾರ್ಯನಿರ್ವಹಿಸಲು ಮುಕ್ತ ಅವಕಾಶ ಕಲ್ಪಿಸಬೇಕೆಂದಿದ್ದಾರೆ.
ಒಟ್ಟಾರೆ ಹೆಚ್ಚುತ್ತಿರುವ ಅಪರಾಧ ಪ್ರಕರಣ ಹತ್ತಿಕ್ಕುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೇ ಭಯಂಕರ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿವುದರ ಮೂಲಕ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎದ್ದು ತೇಲ್ಕೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.