ತಿರುವನಂತಪುರಂ: ಯೆಮನ್ ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಮಲಯಾಳಿ ನರ್ಸ್ ನಿಮಿಷಾ ಪ್ರಿಯಾ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ನಿಮಿಷಾ ಪ್ರಿಯಾ ಅವರನ್ನು ಜುಲೈ 16 ರಂದು ಗಲ್ಲಿಗೇರಿಸಲು ನಿರ್ಧರಿಸಲಾಗಿದೆ ಎಂದು ಮಾಧ್ಯಮಗಳಿಂದ ತಿಳಿದುಬಂದಿದೆ ಎಂದು ಮುಖ್ಯಮಂತ್ರಿ ಭಾನುವಾರ ಪ್ರಧಾನಿಗೆ ಕಳುಹಿಸಿದ ಪತ್ರದಲ್ಲಿ ತಿಳಿಸಿದ್ದಾರೆ.
“ಇದು ಸಹಾನುಭೂತಿಗೆ ಅರ್ಹವಾದ ಪ್ರಕರಣ ಎಂಬ ಅಂಶವನ್ನು ಪರಿಗಣಿಸಿ, ನಿಮಿಷಾ ಪ್ರಿಯಾ ಅವರ ಜೀವವನ್ನು ಉಳಿಸಲು ಈ ವಿಷಯವನ್ನು ಕೈಗೆತ್ತಿಕೊಂಡು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಧ್ಯಪ್ರವೇಶಿಸುವಂತೆ ನಾನು ಪ್ರಧಾನಿಗೆ ಮನವಿ ಮಾಡುತ್ತೇನೆ” ಎಂದು ಪಿಣರಾಯಿ ವಿಜಯನ್ ಹೇಳಿದರು.
ದೆಹಲಿಯಲ್ಲಿನ ಕೇರಳ ಸರ್ಕಾರದ ಪ್ರತಿನಿಧಿ ಮತ್ತು ಮಾಜಿ ಕೇಂದ್ರ ಸಚಿವ ಕೆ.ವಿ.ಥಾಮಸ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮಧ್ಯಪ್ರವೇಶಿಸುವಂತೆ ಕೋರಿದ್ದರು.
ಪಾಲಕ್ಕಾಡ್ ಜಿಲ್ಲೆಯವರಾದ 37 ವರ್ಷದ ಪ್ರಿಯಾ, 2017 ರಲ್ಲಿ ವಿವಾದದ ನಂತರ ಯೆಮೆನ್ ವ್ಯವಹಾರ ಪಾಲುದಾರ ತಲಾಲ್ ಅಬ್ದುಲ್ ಮಹ್ದಿ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಮರಣದಂಡನೆ ಶಿಕ್ಷೆಯನ್ನು ಎದುರಿಸುತ್ತಿದ್ದಾರೆ