ಬೆಂಗಳೂರು: ಸರ್ವರ್ ನಲ್ಲಿ ಕಾಣಿಸಿಕೊಂಡಿದ್ದ ಸಮಸ್ಯೆಯು ಸಹಜ ಸ್ಥಿತಿಗೆ ಮರಳುತ್ತಿದ್ದರೂ ಯುಜಿಸಿಇಟಿ-25 ಅಭ್ಯರ್ಥಿಗಳ ಹಿತದೃಷ್ಟಿಯಿಂದ ಆಪ್ಷನ್ ಎಂಟ್ರಿ ದಿನಾಂಕವನ್ನು ಜುಲೈ 15ರಿಂದ ಜುಲೈ 18ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಶುಕ್ರವಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ವರ್ ಸಮಸ್ಯೆ ಕಾರಣಕ್ಕೆ ಲಾಗಿನ್ ಆಗಿ ಆಪ್ಷನ್ಸ್ ಎಂಟ್ರಿ ಮಾಡಲು ಕೊಂಚ ವಿಳಂಬವಾಗುತ್ತಿದ್ದುದನ್ನು ಪರಿಗಣಿಸಿ ಈ ವಿಸ್ತರಣೆ ಮಾಡಲಾಗಿದೆ. ಎಂಜಿನಿಯರಿಂಗ್, ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ, ಕೃಷಿ ವಿಜ್ಞಾನ, ಬಿ.ಪಿ.ಟಿ. ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳಿಗೆ ಸೀಟು ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದೆ ಈ ಪ್ರಕ್ರಿಯೆ ಪೂರೈಸಲು ಈ ಅವಕಾಶ ಬಳಸಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.
ಅಭ್ಯರ್ಥಿಗಳು ಕಾಲೇಜುಗಳು ಮತ್ತು ಕೋರ್ಸುಗಳ ಪಟ್ಟಿಯನ್ನು ಆದ್ಯತೆಯ ಕ್ರಮದಲ್ಲಿ (ಕಾಲೇಜ್ ಕೋಡ್ ಮತ್ತು ಕೋರ್ಸ್ ಕೋಡ್) ಬಿಳಿ ಕಾಗದದಲ್ಲಿ ಮುಂಚಿತವಾಗಿಯೇ ಬರೆದು ಸಿದ್ದಪಡಿಸಿಕೊಂಡು ನಂತರ ಪೋರ್ಟಲ್ ನಲ್ಲಿ ಆಪ್ಷನ್ ಎಂಟ್ರಿ ನಮೂದಿಸಬೇಕು. ಹೀಗೆ ಮಾಡುವುದರಿಂದ ಒಮ್ಮೆಗೇ ಅಧಿಕ ಸಂಖ್ಯೆಯ ಅಭ್ಯರ್ಥಿಗಳು ಪೋರ್ಟಲ್ ಅನ್ನು ದೀರ್ಘ ಸಮಯದವರೆಗೆ ಸಕ್ರಿಯ ಅವಸ್ಥೆಯಲ್ಲಿ ಇರಿಸುವುದು ತಪ್ಪುತ್ತದೆ; ಇತರ ಅಭ್ಯರ್ಥಿಗಳಿಗೆ ಪೋರ್ಟಲ್ ಲಭ್ಯತೆಯನ್ನು ಇದು ಸುಲಭಗೊಳಿಸುತ್ತದೆ ಎಂದು ಅವರು ವಿವರಿಸಿದ್ದಾರೆ.
ಆಯ್ಕೆ ನಮೂದು ಪೋರ್ಟಲ್ ಪುನರಾರಂಭದ ಬಗ್ಗೆ ಎಲ್ಲ ಅಭ್ಯರ್ಥಿಗಳಿಗೆ ಜ್ಞಾಪನ ಸಂದೇಶ ಕಳುಹಿಸಲಾಗುವುದು ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೊದಲ ಸುತ್ತಿನ ಸೀಟು ಹಂಚಿಕೆ ಪರಿಷ್ಕೃತ ವೇಳಾಪಟ್ಟಿಯನ್ನು ವೆಬ್ ಸೈಟ್ ಗೆ ಭೇಟಿ ನೀಡಿ ಗಮನಿಸಲು ತಿಳಿಸಲಾಗಿದೆ. ಜುಲೈ 21ರಂದು ಅಣಕು ಸೀಟು ಹಂಚಿಕೆ ಫಲಿತಾಂಶ ಹಾಗೂ ಜುಲೈ 28ರಂದು ಅಂತಿಮ ಫಲಿತಾಂಶ ಹೊರಬೀಳಲಿದೆ ಎಂದು ಹೇಳಿದರು.
ಗ್ರಾಮ ಪಂಚಾಯ್ತಿ ಅಭಿವೃದ್ದಿಯಾದರೆ, ದೇಶ ಅಭಿವೃದ್ದಿಯಾದಂತೆ: ಶಾಸಕ ಗೋಪಾಲಕೃಷ್ಣ ಬೇಳೂರು
ರಾಜ್ಯದ ಕಾರ್ಮಿಕರಿಗೆ ಸಿಹಿಸುದ್ದಿ : ನಾಳೆ `ಸ್ಮಾರ್ಟ್ ಕಾರ್ಡ್’ ವಿತರಣೆ