ಶಿವಮೊಗ್ಗ : ಸಾಗರ-ಹೊಸನಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅಪ್ರಬುದ್ದರಾಗಿ ಮಾತನಾಡುವುದನ್ನು ಬಿಡಬೇಕು. ಹಸಿರುಮಕ್ಕಿ ಸೇತುವೆ ಕಾಮಗಾರಿ ವಿಳಂಬವಾಗಲೂ ನಾನಾಗಲೀ, ಸಂಸದ ಬಿ.ವೈ.ರಾಘವೇಂದ್ರ ಆಗಲಿ ಕಾರಣವಲ್ಲ. ಆ ಯೋಜನೆ ರೂಪಿಸುವಾಗ ನೀರಿನ ಆಳ ಅಂದಾಜಿಸದೆ ಹೋಗಿರುವುದೇ ಕಾಮಗಾರಿ ವಿಳಂಬವಾಗಲು ಕಾರಣ ಎಂಬುದಾಗಿ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಸ್ಪಷ್ಟ ಪಡಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು ಹಸಿರುಮಕ್ಕಿ ಸೇತುವೆ ವೀಕ್ಷಣೆಗೆ ಹೋದಾಗ ಅನಗತ್ಯ ಪ್ರಲಾಪ ಮಾಡಿ ವಿಳಂಬಕ್ಕೆ ನಾವೇ ಕಾರಣ ಎಂದು ಹೇಳಿರುವುದು ಅವಿವೇಕನತಕ್ಕೆ ಸಾಕ್ಷಿಯಾಗಿದೆ ಎಂದರು.
2018ರಲ್ಲಿ ಕಾಗೋಡು ತಿಮ್ಮಪ್ಪ ಅವರು ಹಸಿರುಮಕ್ಕಿ ಸೇತುವೆಗೆ 115 ಕೋಟಿ ಬಿಡುಗಡೆ ಮಾಡಿಸಿದ್ದರು. ಯೋಜನೆ ರೂಪಿಸುವಾಗ 22 ಅಡಿ ನೀರು ನಿಲ್ಲುತ್ತದೆ ಎಂದು ತೋರಿಸಲಾಗಿತ್ತು. ಆದರೆ ಹಸಿರುಮಕ್ಕಿಯಲ್ಲಿ 62ರಿಂದ 72 ಅಡಿ ನೀರು ನಿಲ್ಲುತ್ತದೆ. ಕೆ.ಆರ್.ಐ.ಡಿ.ಎಲ್. ಯೋಜನೆ ಉಸ್ತುವಾರಿ ವಹಿಸಿದ್ದು ಗುತ್ತಿಗೆದಾರ ನೀರು ಹೆಚ್ಚು ನಿಲ್ಲುವುದರಿಂದ 115 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಅಸಾಧ್ಯ ಎಂದು ವಿಳಂಬ ಮಾಡಿದ್ದಾನೆ. ನಾನು ಶಾಸಕನಾದ ಆರಂಭದಲ್ಲಿ ಹಣ ಒದಗಿಸಲು ಸಾಧ್ಯವಾಗಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಗಳಾದ ಮೇಲೆ ಹಸಿರುಮಕ್ಕಿ ಸೇತುವೆಗೆ 10.07 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ. ಆದರೆ ಗುತ್ತಿಗೆ ಹಿಡಿದ ಕಂಪನಿ ತಾಂತ್ರಿಕವಾಗಿ ಅಷ್ಟೊಂದು ಗಟ್ಟಿಯಾಗಿಲ್ಲ. ಇದರಿಂದ ಕಾಮಗಾರಿ ವಿಳಂಬವಾಗಿದೆ. ಮೂರು ಬಾರಿ ಶಾಸಕರಾದವರು ಸ್ವಲ್ಪ ವಿವೇಚನೆ ಇರಿಸಿಕೊಂಡು ಮಾತನಾಡುವುದು ಸೂಕ್ತ ಎಂದು ವಾಗ್ಧಾಳಿ ನಡೆಸಿದರು.
ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ನಿರ್ಮಾಣಕ್ಕೆ ಹಾಲಿ ಶಾಸಕರ ಕೊಡುಗೆ ಏನೂ ಇಲ್ಲ. ಸೇತುವೆ ನಿರ್ಮಾಣಕ್ಕಾಗಿ ನದಿಯಿಂದ ನೀರನ್ನು ಹೊರಗೆ ಬಿಟ್ಟಿದ್ದಾರೆ ಎಂದು ಇದೇ ಶಾಸಕರು ಅಪಪ್ರಚಾರ ಮಾಡಿದ್ದರು. ಸೇತುವೆ ನಿರ್ಮಾಣ ವೇಗವಾಗಿ ನಡೆಯುತ್ತಿರುವುದನ್ನು ಅವರು ಸಹಿಸಿಕೊಂಡಿರಲಿಲ್ಲ. ಈಗ ಹಸಿರುಮಕ್ಕಿ ಸೇತುವೆ ವಿಳಂಬಕ್ಕೆ ನಾವೆ ಕಾರಣ ಎಂದು ಸುಳ್ಳು ಹೇಳುತ್ತಿದ್ದಾರೆ. ಕಾಗೋಡು ತಿಮ್ಮಪ್ಪ ಹಸಿರುಮಕ್ಕಿ, ಯಡಿಯೂರಪ್ಪ ಅಂಬಾರಗೋಡ್ಲು-ಕಳಸವಳ್ಳಿ, ನಾನು ಪಟಗುಪ್ಪೆ ಸೇತುವೆ, ಬಿ.ವೈ.ರಾಘವೇಂದ್ರ ಸುತ್ತಾ ಸೇರಿದಂತೆ ಅನೇಕ ಸೇತುವೆ ನಿರ್ಮಾಣ ಮಾಡಿದ್ದಾರೆ ಹಾಲಿ ಶಾಸಕರ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಹಿಂದಿನಿAದಲೂ ನಾನು ವಿರೋಧಿಸಿಕೊಂಡು ಬಂದಿದ್ದೇನೆ. ಈಗಲೂ ಸಹ ಯೋಜನೆ ಕೈಬಿಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆ ಪರವಾಗಿದೆ. ಸುಮಾರು 89 ಸಾವಿರ ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು ಹಿಂದಿನ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶೇ. 10 ಕಮೀಷನ್ ಪಡೆದಿದ್ದಾರೆ ಎನ್ನುವ ಮಾತುಗಳು ಇದೆ. ಒಟ್ಟಾರೆ ನಾನು ಪಂಪ್ಡ್ ಸ್ಟೋರೇಜ್‌ಗೆ ವೈಯಕ್ತಿಕವಾಗಿ ವಿರೋಧವಿದ್ದೇನೆ ಎಂದು ತಿಳಿಸಿದರು.
ಈ ವೇಳೆ ನಗರಸಭಾ ಸದಸ್ಯ ಟಿ.ಡಿ.ಮೇಘರಾಜ್, ಅಧ್ಯಕ್ಷೆ ಮೈತ್ರಿ ಪಾಟೀಲ್, ದೇವೇಂದ್ರಪ್ಪ, ಗಣೇಶಪ್ರಸಾದ್, ಮಲ್ಲಿಕಾರ್ಜುನ ಹಕ್ರೆ, ರಾಜಶೇಖರ ಗಾಳಿಪುರ, ಸುವರ್ಣ ಟೀಕಪ್ಪ, ಹು.ಬಾ.ಅಶೋಕ್, ಮುರಳಿ, ರೋಹಿತ್, ಆನಂದ್ ಜನ್ನೆಹಕ್ಲು, ಸವಿತಾ ವಾಸು, ಬಿ.ಟಿ.ರವೀಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯ್ತಿ ಅಭಿವೃದ್ದಿಯಾದರೆ, ದೇಶ ಅಭಿವೃದ್ದಿಯಾದಂತೆ: ಶಾಸಕ ಗೋಪಾಲಕೃಷ್ಣ ಬೇಳೂರು
ರಾಜ್ಯದ ಕಾರ್ಮಿಕರಿಗೆ ಸಿಹಿಸುದ್ದಿ : ನಾಳೆ `ಸ್ಮಾರ್ಟ್ ಕಾರ್ಡ್’ ವಿತರಣೆ