ಶಿವಮೊಗ್ಗ : ಗ್ರಾಮ ಪಂಚಾಯ್ತಿ ಒಂದು ಮಿನಿ ವಿಧಾನಸೌಧವಿದ್ದಂತೆ. ವಿಧಾನಸೌಧದಲ್ಲಿ ಏನೆಲ್ಲಾ ನಿರ್ಧಾರ ಆಗುತ್ತೋ ಗ್ರಾಮ ಪಂಚಾಯ್ತಿಗಳಲ್ಲೂ ಹಾಗೆಯೇ ಆಗುತ್ತವೆ. ಗ್ರಾಮ ಪಂಚಾಯ್ತಿ ಅಭಿವೃದ್ದಿಯಾದರೆ, ದೇಶ ಅಭಿವೃದ್ದಿಯಾದಂತೆಯೇ ಸರಿ. ಪಂಚಾಯ್ತಿ ಸದಸ್ಯರು ಒಟ್ಟಾಗಿ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಪಡವಗೋಡು ಗ್ರಾಮದಲ್ಲಿ ಎಂಜಿಎನ್‌ಆರ್‌ಇಜಿಎ ಯೋಜನೆಯಡಿ ಶೆಡ್ ಮತ್ತು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅನುದಾನದಲ್ಲಿ ನವೀಕೃತ ಗ್ರಾಮ ಪಂಚಾಯ್ತಿ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದಂತ ಅವರು, ಗ್ರಾಮಸ್ಥರು ಗ್ರಾಮಸಭೆಗೆ ಹಾಜರಾಗಿ ಸರ್ಕಾರದಿಂದ ಬಂದ ಅನುದಾನದ ಮಾಹಿತಿಯನ್ನು ಪಡೆಯುತ್ತಿರುಬೇಕು. ಗ್ರಾಮ ಸಭೆಗೆ ಹಾಜರಾಗದೆ ತಮಗೆ ಸೌಲಭ್ಯವೆ ಸಿಗುತ್ತಿಲ್ಲ ಎಂದು ನನ್ನ ಬಳಿ ದೂರು ತೆಗೆದುಕೊಂಡು ಬರಬೇಡಿ ಎಂದು ತಿಳಿಸಿದರು.
ಗ್ರಾಮ ಸಭೆಗಳಿಗೆ ಎಲ್ಲಾ ಅಧಿಕಾರಿಗಳು ಕಟ್ಟುನಿಟ್ಟಾಗಿ ಹಾಜರಾಗಬೇಕು. ಸರ್ಕಾರದ ಅನುದಾನ ತಳಮಟ್ಟದಿಂದ ಸದ್ವಿನಿಯೋಗವಾಗಬೇಕಾದರೆ ಗ್ರಾಮ ಪಂಚಾಯ್ತಿಗಳು ಸಶಕ್ತವಾಗಬೇಕು. ರಾಜ್ಯ ಸರ್ಕಾರ ಮಹಿಳಾ ಗ್ರಾಮ ಸಭೆಯನ್ನು ನಡೆಸುವ ಮೂಲಕ ಮಹಿಳೆಯರ ಸಮಸ್ಯೆಗಳಿಗೆ ಧ್ವನಿಯಾಗುತ್ತಿದೆ. ಉದ್ಯೋಗಖಾತ್ರಿ ಯೋಜನೆ ಮೂಲಕ ಗ್ರಾಮಗಳನ್ನು ಅಭಿವೃದ್ದಿಪಡಿಸಲು ಸಾಧ್ಯವಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಅಧಿಕಾರ ವಿಕೇಂದ್ರೀಕರಣವಾದಂತೆ ಅನುದಾನ ಸಹ ವಿಕೇಂದ್ರೀಕರಣವಾಗಬೇಕು. ಗ್ರಾಮ ಪಂಚಾಯ್ತಿಗಳಿಗೆ ಹೆಚ್ಚಿನ ಅನುದಾನ ನೀಡಿದಾಗ ಉತ್ತಮ ಅಭಿವೃದ್ದಿ ನಡೆಸಲು ಸಾಧ್ಯವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಬಯಲುಮುಕ್ತ ಶೌಚಾಲಯ ಕರೆ ಕೊಟ್ಟ ತಕ್ಷಣ ಜನರು ಜಾಗೃತರಾಗಿದ್ದಾರೆ. ಇದೀಗ ದೇಶದಲ್ಲಿ 7.80 ಕೋಟಿ ಶೌಚಾಲಯ ನಿರ್ಮಾಣವಾಗಿದೆ. ಸ್ವಚ್ಛಭಾರತ್ ಅಭಿಯಾನದಡಿ ದೇಶದಲ್ಲಿ ಸ್ವಚ್ಚತೆ ಕುರಿತು ಜಾಗೃತೆ ಮೂಡಿಸಲಾಗಿದೆ ಎಂದರು.
ಭೂಮಿಗೆ ಬಂಗಾರದ ಬೆಲೆ ಬಂದಿರುವುದಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಒತ್ತುವರಿ ಜಾಸ್ತಿಯಾಗುತ್ತದೆ. ನಮ್ಮ ಗ್ರಾಮ ಠಾಣಾ, ಸ್ಮಶಾನ ಭೂಮಿಯನ್ನು ಉಳಿಸಿಕೊಳ್ಳುವ ಜೊತೆಗೆ ಗ್ರಾಮ ಪಂಚಾಯ್ತಿ ಅಭಿವೃದ್ದಿ ಕಾರ್ಯಗಳಿಗೆ ಭೂಮಿ ಕಾಯ್ದಿರಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದರು.
ಅಂದಹಾಗೇ ಎನ್ ಜು ಎನ್ ಆರ್ ಇಜಿಎ ಅಡಿಯಲ್ಲಿ 13.50 ಲಕ್ಷ, ಪರಿಷತ್ ಸದಸ್ಯ ಡಿ.ಎಸ್ ಅರುಣ್ ಅವರ ಕ್ಷೇತ್ರಾಭಿವೃದ್ಧಿ ಅನುದಾನಡಿ 5 ಲಕ್ಷ ಸೇರಿದಂತೆ ಇತರೆ ಯೋಜನೆಗಳಡಿ ಒಟ್ಟಾರೆ 22.50 ಲಕ್ಷದಿಂದ ಪಡವಗೋಡು ಗ್ರಾಮ ಪಂಚಾಯ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಪಡವಗೋಡು ಗ್ರಾಮ ಪಂಚಾಯ್ತಿಯ ನೆಲಹಾಸಿಗೆ ಟೈಲ್ಸ್, ಕೊಠಡಿಗಳ ಪಾರ್ಟೀಷನ್, ಕಟ್ಟಡದ ಮೇಲೆ ಸಭೆ ನಡೆಸಲು ಶೀಟಿನ ಹೊದಿಕೆ ಸೇರಿದಂತೆ ಇತರೆ ಕಾಮಗಾರಿಗೆ ಈ ಅನುದಾನ ಉಪಯೋಗಿಸಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶೋಭಾ ಹರೀಶ್, ಸಾಗರ ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಕಲಸೆ ಚಂದ್ರಪ್ಪ, ಪಡವಗೋಡು ಗ್ರಾಮ ಪಂಚಾಯ್ತಿ ಸದಸ್ಯೆ ಸ್ಮಿತಾ ದಯಾನಂದ್, ಸುಶೀಲಮ್ಮ, ವೀರೇಂದ್ರ, ಶಾರದಾ, ನಿರ್ಮಲಾ, ಸಚಿನ್, ಶ್ರೀನಿವಾಸ್, ಗೀತಮ್ಮ, ಗುರುಕೃಷ್ಣ ಶೆಣೈ ಇನ್ನಿತರರು ಹಾಜರಿದ್ದರು.
ಈ ವೇಳೆ ಗಾಯತ್ರಿ ಪ್ರಾರ್ಥಿಸಿದರು. ಪಡವಗೋಡು ಪಿಡಿಒ ಉಲ್ಲಾಶ್ ಕೆ.ಎಸ್. ಸ್ವಾಗತಿಸಿದರು. ಗ್ರಾಮ ಪಂಚಾಯ್ತಿ ಸದಸ್ಯ ಹರೀಶ್ ಎ. ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ ಕುಮಾರ್ ನಿರೂಪಿಸಿದರು.
ಮುಖ್ಯಮಂತ್ರಿ ಕಾರ್ಯಕ್ರಮವನ್ನು ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ವಿಗೊಳಿಸಿ: ಶಾಸಕ ಕೆ.ಎಂ.ಉದಯ್
ರಾಜ್ಯದ ಕಾರ್ಮಿಕರಿಗೆ ಸಿಹಿಸುದ್ದಿ : ನಾಳೆ `ಸ್ಮಾರ್ಟ್ ಕಾರ್ಡ್’ ವಿತರಣೆ