ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದೇ ಜುಲೈ 28ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿಗೆ ಭೇಟಿ ನೀಡಲಿದ್ದು, ₹1300 ಕೋಟಿಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಸೇರಿದಂತೆ 10ಕ್ಕೂ ಹೆಚ್ಚು ಸಚಿವರು ಭಾಗವಹಿಸಲಿದ್ದಾರೆ ಎಂದು ಶಾಸಕ ದಿನೇಶ್ ಗೂಳಿಗೌಡ ತಿಳಿಸಿದರು.
ಶಂಕುಸ್ಥಾಪನೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶಾಸಕ ದಿನೇಶ್ ಗೂಳಿಗೌಡ, ಮೈಸೂರು ಸಂಸ್ಥಾನದಲ್ಲಿ 1952ರಲ್ಲಿ ಚುನಾವಣಾ ರಾಜಕಾರಣ ಪ್ರಾರಂಭವಾದಾಗಿನಿಂದ ಮದ್ದೂರು ಕ್ಷೇತ್ರಕ್ಕೆ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು, ಸಚಿವರು ಒಟ್ಟಾಗಿ ಭೇಟಿ ನೀಡಿ ಇಷ್ಟೊಂದು ದೊಡ್ಡ ಪ್ರಮಾಣದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವುದು ಇದೇ ಮೊದಲ ಬಾರಿಗೆ ಎಂದು ಸಂತಸ ವ್ಯಕ್ತಪಡಿಸಿದರು. ಪ್ರಸಕ್ತ ಶಾಸಕರಾದ ಉದಯ್ ಗೌಡ ಅವರು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮದ್ದೂರು ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಮೌಲ್ಯದ ಕಾಮಗಾರಿಗಳನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು. ಕಾವೇರಿ ನಿಗಮ, ಚಾಮುಂಡೇಶ್ವರಿ ವಿದ್ಯುತ್ ನಿಗಮ, ಸಣ್ಣ ನೀರಾವರಿ ನಿಗಮ, ಗ್ರಾಮೀಣ ಮತ್ತು ಪಂಚಾಯತಿ ಇಲಾಖೆ ಸೇರಿದಂತೆ ವಿವಿಧ ಮೂಲಗಳಿಂದ ಅನುದಾನ ತರುವಲ್ಲಿ ಉದಯ್‌ಗೌಡರ ಪರಿಶ್ರಮ ಅಪಾರ ಎಂದರು.
ಇದು ಕೇವಲ ಸಾಧನಾ ಸಮಾವೇಶ ಮಾತ್ರವಲ್ಲದೆ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ, ಅಂದರೆ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಸಿದ್ಧತೆಯೂ ಆಗಿದೆ. ಮದ್ದೂರಿನಲ್ಲಿ ಸ್ಪರ್ಧಿಸುವ ಎಲ್ಲಾ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದು, ಶಾಸಕ ಉದಯ್‌ಗೌಡರಿಗೆ ಶಕ್ತಿ ತುಂಬಬೇಕು ಎಂದು ದಿನೇಶ್ ಗೂಳಿಗೌಡ ಕರೆ ನೀಡಿದರು.
ಉದಯ್‌ಗೌಡರಿಂದ ಬ್ಲಾಕ್ ಕಾಂಗ್ರೆಸ್ ಕಟ್ಟಡಕ್ಕೆ ನಿವೇಶನ ಉಡುಗೊರೆ
ರಾಜ್ಯದಲ್ಲಿ 100 ಬ್ಲಾಕ್ ಕಾಂಗ್ರೆಸ್ ಕಚೇರಿಗಳು ಸ್ವಂತ ಕಟ್ಟಡದಲ್ಲಿರಬೇಕೆಂಬ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಸಂಕಲ್ಪದ ಭಾಗವಾಗಿ, ಮದ್ದೂರು ಶಾಸಕ ಉದಯ್‌ಗೌಡ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಸಕ ದಿನೇಶ್ ಗೂಳಿಗೌಡ ಅಭಿನಂದಿಸಿದರು. ರಾಜ್ಯದಲ್ಲಿ ಕೇವಲ 8 ಶಾಸಕರು ಮಾತ್ರ ತಮ್ಮ ಸ್ವಂತ ನಿವೇಶನವನ್ನು ಕಾಂಗ್ರೆಸ್ ಟ್ರಸ್ಟ್‌ಗೆ ಬರೆದುಕೊಟ್ಟಿದ್ದು, ಅವರಲ್ಲಿ ಉದಯಗೌಡರೂ ಒಬ್ಬರು. ಅವರು 6000 ಚದರ ಅಡಿ ವಿಸ್ತೀರ್ಣದ, ಕೋಟಿಗಟ್ಟಲೆ ಬೆಲೆಬಾಳುವ ಆಸ್ತಿಯನ್ನು ಕೆಪಿಸಿಸಿಗೆ ಕೊಡುಗೆಯಾಗಿ ನೀಡಿದ್ದಾರೆ. ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಈ ನಿವೇಶನವನ್ನು ಕಾಂಗ್ರೆಸ್ ಪಕ್ಷದ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ ಎಂದು ದಿನೇಶ್ ಗೂಳಿಗೌಡ ತಿಳಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಸುಮಾರು 140 ವರ್ಷಗಳ ಇತಿಹಾಸವಿದ್ದು, ರಾಜ್ಯದಲ್ಲಿ 480 ಬ್ಲಾಕ್ ಕಾಂಗ್ರೆಸ್ ಕಚೇರಿಗಳ ಪೈಕಿ ಬಹುತೇಕ ಬಾಡಿಗೆ ಕಟ್ಟಡದಲ್ಲಿವೆ. ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ 100 ಬ್ಲಾಕ್ ಕಾಂಗ್ರೆಸ್ ಕಚೇರಿಗಳನ್ನು ಸ್ವಂತ ಕಟ್ಟಡದಲ್ಲಿ ನಿರ್ಮಿಸುವಂತೆ ಸೂಚನೆ ನೀಡಿದ್ದರು. ಈ ನಿಟ್ಟಿನಲ್ಲಿ ಉದಯ್‌ಗೌಡರ ಕೊಡುಗೆ ಅತ್ಯಂತ ಮಹತ್ವದ್ದು ಎಂದು ದಿನೇಶ್ ಗೂಳಿಗೌಡ ಹೇಳಿದರು.
ಗ್ಯಾರಂಟಿಗಳ ಯಶಸ್ವಿ ಅನುಷ್ಠಾನಕ್ಕೆ ಬಿಜೆಪಿ-ಜೆಡಿಎಸ್ ಟೀಕೆಗಳಿಗೆ ಉತ್ತರ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಮಂಡ್ಯ ಜಿಲ್ಲೆಯೊಂದರಲ್ಲೇ 4,48,000 ಮಹಿಳೆಯರಿಗೆ 21 ತಿಂಗಳು ತಲಾ ₹2000 ಹಣ ಜಮೆ ಮಾಡಲಾಗಿದ್ದು, ಒಬ್ಬ ಮಹಿಳೆಗೆ ಸುಮಾರು ₹42,000 ಸಂದಾಯವಾಗಿದೆ. ಇನ್ನು ಮಂಡ್ಯ ಜಿಲ್ಲೆಯ ಮಹಿಳೆಯರು 15.5 ಕೋಟಿಗೂ ಹೆಚ್ಚು ಉಚಿತ ಟಿಕೆಟ್ ಪಡೆದು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ. ಅಲ್ಲದೆ, ಜಿಲ್ಲೆಯ 4.84 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್ ನೀಡಲಾಗಿದೆ ಎಂದು ದಿನೇಶ್ ಗೂಳಿಗೌಡ ಮಾಹಿತಿ ನೀಡಿದರು. ನಮ್ಮ ಸರ್ಕಾರ ಯಶಸ್ವಿಯಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದ್ದರೂ, ಬಿಜೆಪಿ ಮತ್ತು ಜೆಡಿಎಸ್‌ನವರು ವಿಧಾನಸೌಧದ ಒಳಗೆ ಮತ್ತು ಹೊರಗೆ ಟೀಕೆ ಮಾಡುತ್ತಿವೆ. ಆದರೆ, ಅದಕ್ಕೆಲ್ಲ ನಮ್ಮ ಯೋಜನೆಗಳೇ ಉತ್ತರ ನೀಡುತ್ತಿದೆ ಎಂದು ದಿನೇಶ್ ಗೂಳಿಗೌಡ ಹೇಳಿದರು.
GOOD NEWS: ಯಜಮಾನಿಯರಿಗೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಗುಡ್ ನ್ಯೂಸ್: ಪ್ರತಿ ತಿಂಗಳು ಗೃಹಲಕ್ಷ್ಮೀ ಯೋಜನೆ ಹಣ ಜಮಾ
ರಾಜ್ಯದ ಕಾರ್ಮಿಕರಿಗೆ ಸಿಹಿಸುದ್ದಿ : ನಾಳೆ `ಸ್ಮಾರ್ಟ್ ಕಾರ್ಡ್’ ವಿತರಣೆ