ಬೆಂಗಳೂರು: NHM ಸಿಬ್ಬಂದಿಗಳ ಗುತ್ತಿಗೆ ಅವಧಿಯನ್ನು ಒಂದೊಂದೇ ತಿಂಗಳು ಮುಂದುವರೆಸುತ್ತಿದ್ದು ಇದರಿಂದ ಆತಂಕದಲ್ಲಿ ಸಿಬ್ಬಂದಿಗಳಿಗೂ ಸಹ ಹೃದಯಾಘಾತ ಆಗುವ ಮುನ್ನ ಎಲ್ಲಾ ಸಿಬ್ಬಂದಿಗಳನ್ನು ಮುಂದುವರೆಸಿದ ಆದೇಶ ನೀಡುವಂತೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ-ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀಕಾಂತ್ ಸ್ವಾಮಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದ್ದು ಇದರಲ್ಲಿ ಯುವಕ ಯುವತಿಯರು ಹಾಗೂ ಮದ್ಯ ವಯಸ್ಕರರ ಸಂಖ್ಯೆ ಜಾಸ್ತಿ ಇದೆ. ಈ ಸಮಯದಲ್ಲಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡುವುದು ಆರೋಗ್ಯ ಇಲಾಖೆಯ ಜವಾಬ್ದಾರಿ ಆಗಿರುತ್ತದೆ. ಆದರೇ ಸಾರ್ವಜನಿಕರ ಮಧ್ಯದಲ್ಲಿ ಇದ್ದು ಕೆಲಸ ಮಾಡುವ ನಮಗೂ ಆತಂಕವಿದೆ ಅದೇನೆಂದರೆ ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸುಮಾರು 30000 ನೌಕರರು ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಇವರನ್ನು ಹಿಂದಿನ ಸರಕಾರಗಳು 17-18 ವರ್ಷಗಳ ಕಾಲ ಯಾವುದೇ ಅಡೆತಡೆಗಳು ಇಲ್ಲದೇ ಮುಂದುವರೆಸಿದ್ದು, ಈಗ ಮೌಲ್ಯಮಾಪನದ ಹೆಸರಲ್ಲಿ ಕೆಲಸದಿಂದ ತೆಗೆದುಹಾಕುವ ಬಗ್ಗೆ ಊಹಾಪೋಹಗಳು ಇದ್ದು, ಸಿಬ್ಬಂದಿಗಳಲ್ಲಿ ಕೆಲಸ ಕಳೆದುಕೊಳ್ಳುವ ಆತಂಕ ಹೆಚ್ಚಾಗಿದೆ, ಈ ಬಗ್ಗೆ ಶಾಸಕರು, ಸಚಿವರೂ, ಮಠಾಧೀಶರುಗಳು ಮಾನ್ಯಮುಖ್ಯ ಮಂತ್ರಿಗಳು ಹಾಗೂ ಮಾನ್ಯ ಆರೋಗ್ಯ ಸಚಿವರಿಗೆ ಸಿಬ್ಬಂದಿಗಳನ್ನು ಯಥಾವತ್ತಾಗಿ ಮುಂದುವರೆಸುವ ಬಗ್ಗೆ ಪತ್ರ ಬರೆದಿದ್ದು, ದೂರವಾಣಿ ಮೂಲಕ ಸಹ ಮಾತನಾಡಿರುತ್ತಾರೆ. ಆದರೆ ಈ ಬಗ್ಗೆ ಮಾನ್ಯ ಆರೋಗ್ಯ ಸಚಿವರು ಎಲ್ಲೂ ಕೂಡ ಸ್ಪಷ್ಟನೆ ನೀಡದಿರುವುದರಿಂದ ಸಿಬ್ಬಂದಿಗಳು ಆತಂಕಕ್ಕೆ ಒಳಗಾಗಿರುತ್ತಾರೆ ಎಂದಿದ್ದಾರೆ.
NHM ಅಡಿ 17-18 ವರ್ಷಗಳಿಂದ ಸೇವೆ ನೀಡಿದ ಆಶಾ ಮೆಂಟರ್ಸ್ ರವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದ್ದು, 24 RBSK ತಂಡಗಳನ್ನು ಕೈ ಬಿಡಲು ಆದೇಶ ಹೊರಡಿಸಿದ್ದು, ಆರ್.ಬಿ.ಎಸ್.ಕೆ ಕಾರ್ಯಕ್ರಮದಡಿಯಲ್ಲಿ ಫಾರ್ಮಾಸಿಸ್ಟರವರನ್ನು, ಕೆಲಸದಿಂದ ತೆಗೆದಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಎಲ್ಲ ವೃಂದದ ಸಿಬ್ಬಂದಿಗಳು ಆತಂಕದಲ್ಲಿ ಕೆಲಸ ಮಾಡುತ್ತಿದ್ದು, ಆತಂಕದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು ಇದರಿಂದ ಹೃದ್ಯಯಾಘಾತ ಆಗುವ ಸಂಭವ ಹೆಚ್ಚಾಗಿದೆ.
ಕಳೆದ 17 ರಿಂದ 18 ವರ್ಷದಿಂದ ಪ್ರಾಮಾಣಿಕವಾಗಿ ಕಡಿಮೆ ವೇತನಕ್ಕೆ ಹಾಗೂ ಯಾವುದೇ ಸೌಲಭ್ಯಗಳು ಇಲ್ಲದೇ ಸೇವೆ ಸಲ್ಲಿಸಿ ಈಗ ಕೆಲಸ ಕಳೆದುಕೊಂಡರೆ ಈ 48-50 ನೆ ವಯಸ್ಸಿನಲ್ಲಿ ಕುಟುಂಬದ ಜವಾಬ್ದಾರಿ ಹೇಗೆ? ನಮ್ಮ ಮುಂದಿನ ಭವಿಷ್ಯ ಹೇಗೆ? ಕುಟುಂಬದ ನಿರ್ವಹಣೆ ಹೇಗೆ? ಅನ್ನೋ ಚಿಂತೆ ಶುರುವಾಗಿದೆ.
ಲಕ್ಷಾಂತರ ರೂಪಾಯಿ ವೇತನ ಪಡೆಯುವ ಸರಕಾರಿ ಸಿಬ್ಬಂದಿಗಳಿಗೆ, ದೊಡ್ಡ ದೊಡ್ಡ ಹುದ್ದೆಯಲ್ಲಿ ಇರುವ ಅಧಿಕಾರಿಗಳಿಗೆ ಇರದ ಇಷ್ಟೊಂದು ದೊಡ್ಡ ಪ್ರಮಾಣದ ಹಾಗೂ ಇಷ್ಟೊಂದು ಸುದೀರ್ಘ ಮೌಲ್ಯಮಾಪನ ನಮಗೇಕೆ ಎಂದು ನೌಕರರು ಆತಂಕದಲ್ಲಿ ಇದ್ದಾರೆ, ಮೌಲ್ಯಮಾಪನದ ಮೂಲಕ ನಮ್ಮನ್ನು ಬೆದರಿಸುವ ತಂತ್ರ ಆಗಿದೆ ಅನಿಸ್ತಾ ಇದೇ, ಅಥವಾ ಗ್ಯಾರಂಟಿಗಾಗಿ ಅನುದಾನ ಹೊಂದಿಸಲು ಈ ರೀತಿಯ ಕ್ರಮ ಆಗುತ್ತಿದೆಯೇ ಅನ್ನೋ ಅನುಮಾನ ಶುರುವಾಗಿದೆ.
ಇಷ್ಟು ವರ್ಷಗಳ ಕಾಲ ಸೇವೆ ನೀಡಿ, ತೋಳಲ್ಲಿ ಬಲ ಇದ್ದಾಗ ದುಡಿಸಿಕೊಂಡು ಈ ವಯಸ್ಸಲ್ಲಿ ಬೀದಿಗೆ ತಳ್ಳಿದರೆ ಹೇಗೆ.? ಅಂತ ಭಯದಿಂದ ದಿನ ಎಣಿಸುತ್ತಿರುತ್ತಾರೆ. ಇದನ್ನು ಅರಿತು ಆರೋಗ್ಯ ಸಚಿವರು ಕೂಡಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಒಂದೊಂದೇ ತಿಂಗಳಿಗೆ ಈ ಸಿಬ್ಬಂದಿಗಳನ್ನು ಮುಂದುವರೆಸುವಂತಹ ಆದೇಶಕ್ಕೆ ತಡೆ ನೀಡಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಸಿಬ್ಬಂದಿಗಳನ್ನು ಮುಂದುವರೆಸಲು ಆದೇಶ ಹೊರಡಿಸಲು ಸೂಚನೆ ನೀಡಬೇಕು. ಮತ್ತಷ್ಟು ವಿಳಂಬ ಮಾಡಿ ಆತಂಕದಿಂದ ಸಿಬ್ಬಂದಿಗಳಿಗೆ ಆರೋಗ್ಯದಲ್ಲಿ ಏರಿಳಿತ ಆಗಿ ಹೆಚ್ಚು ಕಮ್ಮಿ ಆದಲ್ಲಿ ಜವಾಬ್ದಾರಿ ಯಾರೂ? ಎಂದು ಸಂಘದ ರಾಜ್ಯಾಧ್ಯಕ್ಷರಾದ ಶ್ರೀಕಾಂತ ಸ್ವಾಮಿರವರು ಆರೋಗ್ಯ ಸಚಿವರಿಗೆ, ಸರಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಮುಂದೆ ಆಗುವ ಅನಾಹುತಗಳನ್ನು ತಡೆಯಲು ಮುನ್ಸೂಚನೆ ನೀಡಿದ್ದು, ಕೂಡಲೇ ಎಲ್ಲಾ ಸಿಬ್ಬಂದಿಗಳನ್ನು ಯಥಾವತ್ತಾಗಿ ಮುಂದುವರೆಸಿದ ಆದೇಶ ಹೊರಡಿಸಲು ಮನವಿ ಮಾಡಿದ್ದಾರೆ.