ರಾಯಚೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ರಾಯಚೂರಿನ ಮಸ್ಕಿ ಪಟ್ಟಣದ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಮಸ್ಕಿ ತಾಲೂಕಿನ ಪಗಡದಿನ್ನಿ ಕ್ಯಾಂಪ್‌ನ ಶರಣಬಸವ (32) ಮೃತ ವ್ಯಕ್ತಿಯಾಗಿದ್ದು, ಎದೆನೋವಿನಿಂದ ನರಳುತ್ತಿದ್ದ ಶರಣಬಸವನನ್ನು ಆತನ ಸ್ನೇಹಿತರು ಚಿಕಿತ್ಸೆಗಾಗಿ ಬೈಕ್ ನಲ್ಲಿಯೇ ಮಸ್ಕಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಆದರೆ ಆ ಸಮಯದಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ. ಅಲ್ಲಿದ್ದ ನರ್ಸ್‌ಗಳು ಆತನಿಗೆ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಕೂಡ ಫಲಕಾರಿಯಾಗಿರಲಿಲ್ಲ.
ಪ್ರಾಣ ಉಳಿಸಲು ಆತನ ಸ್ನೇಹಿತರು, ಸಂಬಂಧಿಕರು ನಾನಾ ಪ್ರಯತ್ನಗಳನ್ನು ಮಾಡಿದ್ದು, ಬಳಿಕ ಆರೋಗ್ಯ ಕೇಂದ್ರದಿಂದ ಸಿಂಧನೂರು ತಾಲೂಕಾಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ನರಳಾಡಿ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ನಿನ್ನೆ ಒಂದೇ ದಿನ `ಹಾರ್ಟ್ ಅಟ್ಯಾಕ್’ ಗೆ 11 ಜನರು ಬಲಿ
ರಾಜ್ಯದಲ್ಲಿ ನಿನ್ನೆ ಒಂದೇ ದಿನ ಬರೋಬ್ಬರಿ 11 ಮಂದಿ ಹೃದಯಾಘಾತಕ್ಎಕ ಬಲಿಯಾಗಿದ್ದಾರೆ. ತುಮಕೂರಿನಲ್ಲಿ ಮೂವರು ನಿನ್ನೆ ಒಂದೇ ದಿನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತುಮಕೂರಿನ ಹನುಮಂತಪುರದ ನಿವಾಸಿಗಳಾದ ಜಯಂತ್ (31) ಹಾಗೂ ಶ್ರೀಧರ್ (52) ಸೋಮವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಶಾಂತವ್ವ ತೋಟಗೇರ (56) ಮಗಳನ್ನು ಗಂಡನ ಮನೆಯಿಂದ ಕರೆದುಕೊಂಡು ಬರಲು ಸಮೀಪದ ಹೆಬ್ಬಳ್ಳಿ ಗ್ರಾಮಕ್ಕೆ ಹೋದಾಗ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಹುಬ್ಬಳ್ಳಿ ಕೆಎಂಸಿಆರ್‌ಐ ಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನಲ್ಲಿ ಸೋಮವಾರ ಒಂದೇ ದಿನ ಮೂವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಪಟ್ಟಣದ ನಾರಾಯಣ ರಾಯ್ಕರ (52), ಬಸಪ್ಪ ಸತ್ಯಪ್ಪ ಬಾಗಲಕೋಟಿ (78) ತಾಲೂಕಿನ ಬಸಾಪೂರ ಗ್ರಾಮದ ಅಣ್ಣಪೂರ್ಣಮ್ಮ ಯಲ್ಲಪ್ಪ ಚವಡಿ (56) ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಪಗಡದಿನ್ನಿ ಕ್ಯಾಂಪ್ ನಿವಾಸಿ ಶರಣಬಸವ (30) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ
ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಮೆಣಸಮಕ್ಕಿ ಗ್ರಾಮದ ರೈತ ಲಕ್ಷ್ಮಣ (52) ಎನ್ನುವವರು ಸಾವನಪ್ಪಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮೆಣಸಮಕ್ಕಿ ಗ್ರಾಮದ ನಿವಾಸಿಯಾಗಿರುವ ರೈತ ಲಕ್ಷ್ಮಣ ಅವರು ನಿನ್ನೆ ಜಮೀನಿನಲ್ಲಿ ಕೆಲಸ ಮಾಡಿ ಮನೆಗೆ ಬಂದಿದ್ದಾಗ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಲಕ್ಷ್ಮಣ ಕುಟುಂಬಸ್ಥರು ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆಂಬುಲೆನ್ಸ್ ಬರುವಷ್ಟರಲ್ಲಿ ರೈತ ಲಕ್ಷ್ಮಣ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಕಳೆದ 46 ದಿನಗಳಲ್ಲಿ 38 ಮಂದಿ ಹೃದಯಾಘಾತದಿಂದ ಹಾಸನ ಜಿಲ್ಲೆ ಒಂದರಲ್ಲೇ ಸಾವನ್ನಪ್ಪಿದ್ದಾರೆ.