ಬೆಂಗಳೂರು: ರಸ್ತೆ ಬೇಕಾದರೆ ಗ್ಯಾರಂಟಿ ಬೇಡ ಎಂದು ಬರೆದುಕೊಡಿ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಯ ರೆಡ್ಡಿ ನೀಡಿತು a ಹೇಳಿಕೆಯ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಅವರ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಗ್ಯಾರಂಟಿ ಕೊಡಿ ಎಂದು ಜನರೇನೂ ಕೇಳಿರಲಿಲ್ಲ. ಅವರಾಗಿಯೇ ಕೊಟ್ಟು ಅಧಿಕಾರಕ್ಕೆ ಬಂದಿದ್ದಾರೆ ಎಂದರು.
ರಾಯರೆಡ್ಡಿ ಅವರು ಹಲವಾರು ಬಾರಿ ಇಂತಹ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಆ ಹೇಳಿಕೆ ಬಗ್ಗೆ ಟೀಕೆ ಬಂದ ಮೇಲೆ ಮತ್ತೆ ಅದಕ್ಕೆ ಮತ್ತೊಂದು ಸ್ಪಷ್ಟನೆ ಕೊಡುತ್ತಾರೆ. ಶನಿವಾರ ಬಹಿರಂಗ ಸಭೆಯಲ್ಲಿ ‘ನಿಮಗೆ ರಸ್ತೆ ಬೇಕಾದರೆ ಅಕ್ಕಿ ಪಡೆಯುವುದನ್ನು ನಿಲ್ಲಿಸಿ’ ಎಂದು ಹೇಳುತ್ತಾರೆ. ಅಲ್ಲಿಗೆ ಸರ್ಕಾರದ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂಬುದನ್ನು ಅವರ ಹೇಳಿಕೆಯ ಮೂಲಕ ಅರ್ಥ ಮಾಡಿಕೊಳ್ಳಬಹುದು ಎಂದು ಕೇಂದ್ರ ಸಚಿವರು ಕಟುವಾಗಿ ಟೀಕಿಸಿದರು.
ಈ ಸರ್ಕಾರದಿಂದ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಾರು ನಿರೀಕ್ಷೆ ಮಾಡೋಕೆ ಆಗಲ್ಲ. ಇವರಿಗೆ ರಾಜ್ಯದ ಅಭಿವೃದ್ಧಿ ಬೇಕಿಲ್ಲ ಎಂದು ಕೇಂದ್ರ ಸಚಿವರು ಕಿಡಿಕಾರಿದರು.
ಹಣಕ್ಕೆ ಕೊರತೆ ಇಲ್ಲ. ಅಭಿವೃದ್ಧಿಗೆ ಕೊರತೆ ಇಲ್ಲ ಎನ್ನುತ್ತೀರಿ. ಯೋಜನೆಗಳನ್ನು ಘೋಷಣೆ ಮಾಡಿದ್ದೀರಿ, ಅದಕ್ಕೆ ಹಣವನ್ನು ನೀಡಿಲ್ಲ. 2024ರ ಬಜೆಟ್ ನಲ್ಲಿ ಒಂದು ಕಾರ್ಯಕ್ರಮ ಘೋಷಣೆ ಮಾಡಿ, ಆ ಕಾರ್ಯಕ್ರಮಕ್ಕೆ ದುಡ್ಡು ಇಲ್ಲ ಅಂತ ರದ್ದು ಮಾಡಿದ್ದಾರೆ. ಅದರಿಂದ ಈ ಸರ್ಕಾರದಲ್ಲಿ ಅಭಿವೃದ್ಧಿ ಎಂಬುದು ಕನಸಿನ ಮಾತು ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಮೇಕೆದಾಟು; ಸಚಿವ ಹೆಚ್.ಕೆ. ಪಾಟೀಲ್ ಗೆ ಹೆಚ್ಡಿಕೆ ತರಾಟೆ:
ಮೇಕೆದಾಟು ಯೋಜನೆಗೆ ತಮಿಳುನಾಡು ಒಪ್ಪಿಗೆ ಬೇಕಿಲ್ಲ ಎಂದು ಹೇಳಿಕೆ ನೀಡಿರುವ ಸಚಿವ ಹೆಚ್.ಕೆ. ಪಾಟೀಲ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಸಚಿವರು; ಪಾಟೀಲರು ಎಷ್ಟು ವರ್ಷದಿಂದ ಸಚಿವರಾಗಿದ್ದಾರೆ? ಅವರಿಗೆ ಅಂತಾರಾಜ್ಯ ನೀರಾವರಿ ಯೋಜನೆಗಳನ್ನು ಹೇಗೆ ಕಾರ್ಯಗತ ಮಾಡಲಾಗುತ್ತದೆ ಎನ್ನುವುದು ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು.
ಮೇಕೆದಾಟು ಯೋಜನೆಗೆ ಕೇಂದ್ರವು ಅನುಮತಿ ನೀಡದ ಬಗ್ಗೆ ಕೇಳಲಾದ ಪ್ರಶ್ನೆಗೆ; ಒಕ್ಕೂಟ ವ್ಯವಸ್ಥೆಯಲ್ಲಿ ಏಕಪಕ್ಷೀಯವಾಗಿ ತೀರ್ಮಾನ ಮಾಡುವುದಕ್ಕೆ ಆಗುವುದಿಲ್ಲ. ಹೆಚ್ ಕೆ ಪಾಟೀಲರು ಏನು ಹೇಳಿದ್ದಾರೆ ಎಂಬುದನ್ನು ಗಮನಿಸಿದ್ದೇನೆ. ಮೇಕೆದಾಟು ಯೋಜನೆಗೆ ತಮಿಳುನಾಡಿನ ಒಪ್ಪಿಗೆ ಯಾಕೆ ಬೇಕು ಅಂದಿದ್ದಾರೆ. ತಮಿಳುನಾಡಿನವರು ಕೋರ್ಟ್ ಗೆ ಹೋಗಿದ್ದಾರೆ. ಅವರ ವಿರೋಧ ನ್ಯಾಯಾಲಯದಲ್ಲಿ ಹೋರಾಟ ಮಾಡುವುದಕ್ಕೆ ವಕೀಲರನ್ನು ನೇಮಕಾದಬೇಕಲ್ಲವೇ? ಅದನ್ನ ಮಾಡಲು ಆಗದವರು ಇವರು ಕಾನೂನು ಸಚಿವರಾ? ಎಂದು ಸಚಿವ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಮೇಕೆದಾಟು ಯೋಜನೆಗೆ ತಮಿಳುನಾಡಿನ ಒಪ್ಪಿಗೆ ಆಗಬೇಕು. ಈ ಯೋಜನೆಯ ಸದುದ್ದೇಶವನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಹಲವಾರು ನೀರಾವರಿ ಯೋಜನೆಗಳ ಹೆಸರಿನಲ್ಲಿ ದುಡ್ಡು ಹರಿದಿದೆ, ನೀರು ಹರಿದಿಲ್ಲ. ಅದಕ್ಕೆ ಬೇಕಾದಷ್ಟು ಉದಾಹರಣೆ ಕೊಡಬಲ್ಲೆ. ಪರಿಸರ ಇಲಾಖೆ ಅನುಮತಿ ಸಿಗಬೇಕು. ಮಹಾದಾಯಿ ಯೋಜನೆಯಲ್ಲಿ ಒಂದಷ್ಟು ಅರಣ್ಯ ಭೂಮಿ ಬಳಕೆಗೆ ಇನ್ನೂ ಅನುಮತಿ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಏನು ಪ್ರಯತ್ನ ಮಾಡಿದೆ ಎಂಬುದನ್ನು ಹೇಳಬೇಕಲ್ಲವೆ? ಎಂದು ರಾಜ್ಯ ಸರ್ಕಾರವನ್ನು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.
ಸಿಎಂ ಸಿದ್ದರಾಮಯ್ಯ ಅವರನ್ನು ಎಐಸಿಸಿ ಒಬಿಸಿ ಸಲಹಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು; ಅವರ ಪಕ್ಷದಲ್ಲಿ ನೇಮಕ ಮಾಡಿಕೊಂಡಿದ್ದಾರೆ. ಅವರ ಪಕ್ಷದ ಬಗ್ಗೆ ನಾನು ಏನು ಹೇಳಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಉಚಿತ ಸುದ್ದಿ ಪಡೆದುಕೊಳ್ಳುವುದಕ್ಕೆ ನಮ್ಮ ವಾಟ್ಸ-ಪ್ ಸೇರಿಕೊಳ್ಳಿ