ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ರಾಷ್ಟ್ರೀಯ ಗೌರವವಾದ ‘ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ’ ನೀಡಿ ಗೌರವಿಸಲಾಗಿದೆ.
ಘಾನಾ ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮಾ ಅವರಿಂದ ಪ್ರಧಾನಿ ಮೋದಿ ಪ್ರಶಸ್ತಿ ಸ್ವೀಕರಿಸಿದರು.”ಘಾನಾದ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಪ್ರಶಸ್ತಿಗೆ ಭಾಜನರಾಗಿರುವುದು ಗೌರವದ ಸಂಗತಿ” ಎಂದು ಪ್ರಧಾನಿ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
“ಇದು ಭಾರತ-ಘಾನಾ ನಡುವಿನ ಆಳವಾದ ಮತ್ತು ದೀರ್ಘಕಾಲೀನ ಸಂಬಂಧಗಳಿಗೆ ಸಾಕ್ಷಿಯಾಗಿದೆ. ಘಾನಾದ ರಾಷ್ಟ್ರೀಯ ಪ್ರಶಸ್ತಿಯಾದ ‘ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ’ವನ್ನು ಅಧ್ಯಕ್ಷ ಪ್ರಧಾನಮಂತ್ರಿಯವರಿಗೆ ಪ್ರದಾನ ಮಾಡಿದರು, ಈ ಪ್ರಶಸ್ತಿಯನ್ನು ಭಾರತದ 1.4 ಶತಕೋಟಿ ಜನರಿಗೆ ಮತ್ತು ಐತಿಹಾಸಿಕ ಮತ್ತು ಆಳವಾಗಿ ಬೇರೂರಿರುವ ಭಾರತ-ಘಾನಾ ಸಂಬಂಧಗಳಿಗೆ ಸಮರ್ಪಿಸಿದರು. ಈ ಅಸಾಧಾರಣ ಗೌರವಕ್ಕಾಗಿ ಅವರು ಘಾನಾ ಸರ್ಕಾರ ಮತ್ತು ಜನರಿಗೆ ಧನ್ಯವಾದ ಅರ್ಪಿಸಿದರು” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
“ಪ್ರಧಾನಿ ಮೋದಿ ಅವರಿಗೆ ಘಾನಾದ ರಾಷ್ಟ್ರೀಯ ಗೌರವವಾದ ‘ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ’ ನೀಡಲಾಗಿದೆ. ಇದು ಜಾಗತಿಕ ದಕ್ಷಿಣದ ಧ್ವನಿಯನ್ನು ಬಲಪಡಿಸುವಲ್ಲಿ ಅವರ ದೃಢ ಪ್ರಯತ್ನಗಳಿಗೆ ದೊರೆತ ಮನ್ನಣೆಯಾಗಿದೆ. ಘಾನಾದೊಂದಿಗಿನ ನಮ್ಮ ಸಹಕಾರ ಮತ್ತು ಸ್ನೇಹಕ್ಕೆ ಇದು ಸಾಕ್ಷಿಯಾಗಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.