ಹಾಸನ : ಹಾಸನದ ಬೆನ್ನಲ್ಲೇ ಇದೀಗ ಧಾರವಾಡದಲ್ಲಿ ಒಂದೇ ದಿನ ಹೃದಯಾಘಾತಕ್ಕೆ ಇಬ್ಬರು ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, ಧಾರವಾಡ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಒಂದೇ ದಿನ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಜಿಲ್ಲೆಯ ನವಲಗುಂದ ಪಟ್ಟಣದ ನಿವಾಸಿ ಮುತ್ತುಪ್ಪ ಶಂಕ್ರಪ್ಪ ಪೂಜಾರ (44) ಹಾಗೂ ನವಲಗುಂದದ ಯಮನೂರ ಗ್ರಾಮದ ನಿವಾಸಿ ಕೇಬಲ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಫಕಿರಪ್ಪ ಬಣಗಾರ (45) ಎಂದು ಗುರುತಿಸಲಾಗಿದೆ.
ಸೋಮವಾರ ರಾತ್ರಿ ಇಬ್ಬರು ಕೂಡ ಮಲಗಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸದ್ಯ ಹಾಸನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.
ಅಧ್ಯಯನ ನಡೆಸಿ 10 ದಿನಗಳಲ್ಲಿ ವರದಿಗೆ ಸೂಚನೆ
ಇತ್ತಿಚೆಗೆ ಹೃದಯಾಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೃದಯಾಘಾತಗಳನ್ನು ಅಧಿಸೂಚಿತ ಕಾಯಿಲೆ ಎಂದು ಪರಿಗಣಿಸುವ ಕುರಿತಂತೆ ಹಾಸನ ಪ್ರಕರಣಗಳ ವರದಿ ಬಂದ ಬಳಿಕ ಚರ್ಚೆ ನಡೆಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, ತಜ್ಞರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಹಾಸನ ಜಿಲ್ಲೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ 18 ಹೃದಯಾಘಾತಗಳು ಸಂಭವಿಸಿವೆ. ಈ ಬಗ್ಗೆ ಹಾಸನ ಆರೋಗ್ಯ ಅಧಿಕಾರಿಗಳ ಜೊತೆ ಸಂಪರ್ಕಿಸಿ, ಹೃದಯಾಘಾತಗಳ ಬಗ್ಗೆ ವರದಿ ನೀಡುವಂತೆ ತಜ್ಞರ ಸಮಿತಿಗೆ ತಿಳಿಸಲಾಗಿದೆ. ಜಯದೇವ ಎದೆರೋಗ ಸಂಸ್ಥೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಈಗಾಗಲೇ ಕೋವಿಡ್ ಅಡ್ಡ ಪರಿಣಾಮದಿಂದ ಆಗಿರುವ ಸಾವುಗಳು, ಹೃದಯಾಘಾತಗಳ ಕುರಿತಂತೆ ಸಂಶೋಧನೆ ನಡೆಸಿ ವರದಿ ನೀಡಲು ಸಮಿತಿ ರಚಿಸಲಾಗಿತ್ತು. ಇದೀಗ ಹಾಸನ ಹೃದಯಾಘಾತ ಪ್ರಕರಣಗಳ ಕುರಿತು ವರದಿ ನೀಡಲು ಇದೇ ಸಮಿತಿಗೆ ಜವಾವ್ದಾರಿ ವಹಿಸಲಾಗಿದೆ. 10 ದಿನಗಳ ಒಳಗಾಗಿ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು.
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತಗಳು ಹೆಚ್ಚಾಗುತ್ತಿವೆ ಎಂಬುದರ ಬಗ್ಗೆ ಸಂಶೋಧನೆ ನಡೆಯಬೇಕಿದೆ. ರಾಜ್ಯದ ಆರೋಗ್ಯ ಇಲಾಖೆಯಿಂದ ಈ ಮಟ್ಟದ ಸಂಶೋಧನೆ ನಡೆಸುವುದು ಕಷ್ಟ. WHO, ICMR, ನಂತಹ ಸಂಸ್ಥೆಗಳು ಈ ಬಗ್ಗೆ ವಿಸ್ತೃತವಾದ ಸಂಶೋಧನ ನಡೆಸಲು ಶಕ್ತವಾಗಿವೆ. ಸದ್ಯಕ್ಕೆ ಹಾಸನದಲ್ಲಿ ನಡೆದ ಹೃದಯಾಘಾತಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ವರದಿ ನೀಡುವಂತೆ ತಜ್ಞರ ಸಮಿತಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ತಜ್ಞರ ತಂಡದೊಂದಿಗೆ ಚರ್ಚಿಸಿ ಮುಂದೆ ಏನು ಮಾಡಬೇಕು ಎಂಬುದನ್ನ ತೀರ್ಮಾನಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಹೃದಯಾಘಾತಗಳು ಹೆಚ್ಚಾಗಲು, ಬದಲಾದ ಜೀವನಶೈಲ, ಆಹಾರ, ಅಸಾಂಕ್ರಾಮಿಕ ರೋಗಗಳು ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೆ ಹೆಚ್ಚಿನ ಅಂಕಿ ಅಂಶಗಳನ್ನ ಕಲೆ ಹಾಕಿ ಹೆಚ್ಚಿನ ಸಂಶೋಧನೆ ನಡೆಸಬೇಕಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ಪ್ರಕರಣಗಳ ಅಂಕಿ ಅಂಶಗಳು ಮಾತ್ರ ಇದೆ. ಖಾಸಗಿ ಆಸ್ಪತ್ರೆಗಳಿಂದಲೂ ನಮಗೆ ಅಂಕಿ ಅಂಶಗಳ ಬೇಕಾಗುತ್ತದೆ. ಹೃದಯಾಘಾತವನ್ನು ಅಧಿಸೂಚಿತ ರೋಗ ಎಂದು ಪರಿಗಣಿಸಿದಾಗ ಮಾತ್ರ ಖಾಸಗಿ ಆಸ್ಪತ್ರೆಗಳಿಂದಲೂ ಅಂಕಿ ಅಂಶಗಳು ದೊರೆಯುತ್ತವೆ. ಆದರೆ ಈ ಬಗ್ಗೆ ಆತುರದಲ್ಲಿ ನಿರ್ಧಾರ ಕೈಗೊಳ್ಳುವುದಿಲ್ಲ.