ಹುಬ್ಬಳ್ಳಿ: ದೇಶದ ದುಡಿಯುವ ವರ್ಗದಲ್ಲಿ ಶೇ.90 ರಷ್ಟು ಕಾರ್ಮಿಕರು ಅಸಂಘಟಿತ ವಲಯದಲ್ಲಿದ್ದಾರೆ. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಪಂಚ ಗ್ಯಾರಂಟಿ ಯೋಜನೆಗಳಿಂದ ಜನರ ಜೀವನ ಉತ್ತಮವಾಗಿದೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್. ಲಾಡ್ ಹೇಳಿದರು.
ಬೆಂಗೇರಿಯ ಸಂತೆ ಮೈದಾನದಲ್ಲಿ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ, ಧಾರವಾಡ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಧಾರವಾಡ ಜಿಲ್ಲೆಯ ವಿವಿಧ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣಾ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಅಸಂಘಟಿತ ಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಜನರಿಗೆ ಯೋಜನೆಗಳನ್ನು ತಲುಪಿಸಲು ಕಳೆದ 2 ವರ್ಷಗಳಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಇ – ಶ್ರಮ ಪೋರ್ಟಲ್ನಲ್ಲಿ ಸುಮಾರು 1.80 ಕೋಟಿಗೂ ಅಧಿಕ ಜನರು ನೋಂದಣಿಯಾಗಿದ್ದಾರೆ. ಸರಿಸುಮಾರು 1.60 ಕೋಟಿ ಅಸಂಘಟಿತ ವಲಯದ ಕುಟುಂಬಗಳು ನೋಂದಣಿಯಾಗಿವೆ. ಅದರಲ್ಲಿ ಸುಮಾರು 35 ರಿಂದ 40 ಲಕ್ಷ ಕಾರ್ಮಿಕರು ಕಟ್ಟಡ ಕಾರ್ಮಿಕರಿದ್ದಾರೆ. ಸಾರಿಗೆ ಕಾರ್ಮಿಕರನ್ನು ಸಹ ಅಸಂಘಟಿತ ವಲಯಕ್ಕೆ ಸೇರ್ಪಡೆ ಮಾಡಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯಡಿ ಚಾಲಕರು, ನಿರ್ವಾಹಕರು ಮತ್ತು ಕ್ಲೀನರಗಳು ನೋಂದಣಿ ಮಾಡಿಕೊಳ್ಳಬಹುದು. ಧಾರವಾಡ ಜಿಲ್ಲೆಯಲ್ಲಿ ಈವರೆಗೆ 43 ಅಪಘಾತ ಪ್ರಕರಣಗಳಲ್ಲಿ ಒಟ್ಟು ರೂ.1.82 ಲಕ್ಷ ಪರಿಹಾರ ವಿತರಿಸಲಾಗಿದೆ. ಅಲ್ಲದೇ 29 ವಿದ್ಯಾರ್ಥಿಗಳಿಗೆ ರೂ.2.90 ಲಕ್ಷ ಶೈಕ್ಷಣಿಕ ಧನಸಹಾಯ ಪಾವತಿ ಮಾಡಲಾಗಿದೆ. ಸಿನಿ ಬಿಲ್ ಸಹ ಸಿದ್ಧವಾಗಿದೆ. 4 ಕೋಟಿಗೂ ಅಧಿಕ ಸಿನಿಮಾ ಟಿಕೆಟ್ ಗಳು ಮಾರಾಟವಾಗುತ್ತವೆ. ಸಿನಿಮಾ ಟಿಕೆಟ್ ಮೇಲೆ ಶೇ.1ರಿಂದ 2 ರಷ್ಟು ಸೆಸ್ ಹಾಕುವ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದರು.
ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ
ಈ ಯೋಜನೆಯಡಿ ಚಾಲಕ, ನಿರ್ವಾಹಕ, ಕ್ಲೀನರ್, ನಿಲ್ದಾಣ ಸಿಬ್ಬಂದಿ, ಮಾರ್ಗ ಪರಿಶೀಲನಾ ಸಿಬ್ಬಂದಿ, ಬುಕಿಂಗ್ ಗುಮಾಸ್ತ, ನಗದು ಗುಮಾಸ್ತ, ಡಿಪೋ ಗುಮಾಸ್ತ, ಸಮಯ ಪಾಲಕ, ಕಾವಲುಗಾರ ಅಥವಾ ಪರಿಚಾರಕ, ಮೋಟಾರು ಗ್ಯಾರೇಜುಗಳಲ್ಲಿ ಟೈರ್ ಜೋಡಿಸುವ ಮತ್ತು ಬೇರ್ಪಡಿಸುವ ಘಟಕಗಳಲ್ಲಿ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರು, ಪಂಚರ್ ದುರಸ್ತಿ ಮಳಿಗೆಗಳಲ್ಲಿ, ವೀಲ್ ಬ್ಯಾಲೆನ್ಸಿಂಗ್ ಮತ್ತು ಅಲೈನ್ವೆಂಟ್ ಘಟಕಗಳಲ್ಲಿ, ನೀರಿನಿಂದ ಸ್ವಚ್ಛಗೊಳಿಸುವ ಘಟಕಗಳಲ್ಲಿ ಕೆಲಸ ಮಾಡುವವರು, ಮೋಟಾರು ವಾಹನ ಹೊರಕವಚ ನಿರ್ಮಾಣ ಘಟಕಗಳಲ್ಲಿ, ಟಿಂಕರಿಂಗ್, ಎಲೆಕ್ನಿಕಲ್ ಹಾಗೂ ಎಸಿ ಘಟಕ ಇತ್ಯಾದಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸುಮಾರು 40 ಲಕ್ಷ ಕಾರ್ಮಿಕರು ಒಳಗೊಂಡಿರುತ್ತಾರೆ. ಈವರೆಗೆ ರಾಜ್ಯಾದ್ಯಂತ 10,50,095 ಕಾರ್ಮಿಕರು ನೋಂದಣಿಯಾಗಿದ್ದು, ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ 1,51,675 ಕಾರ್ಮಿಕರನ್ನು ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ
ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ 33 ಸಭೆಗಳನ್ನು ಮಾಡಲಾಗಿದೆ. ಸ್ವಿಗ್ಗಿ, ಜೊಮ್ಯಾಟೊ, ರ್ಯಾಪಿಡೋ ಸೇರಿದಂತೆ ವಿವಿಧ ಇ ಕಾಮರ್ಸ್ ವಲಯದ ಕಾರ್ಮಿಕರಿಗೆ ಯೋಜನೆ ರೂಪಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆಯಡಿ ಇ-ಕಾಮರ್ಸ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ತಲಾ ರೂ. 2 ಲಕ್ಷ ಅಪಘಾತ ಪರಿಹಾರ ಹಾಗೂ ಜೀವ ವಿಮಾ ಸೌಲಭ್ಯ ಸೇರಿದಂತೆ ಒಟ್ಟು ರೂ. 4 ಲಕ್ಷ ವಿಮಾ ಸೌಲಭ್ಯ ಒದಗಿಸಲಾಗುವುದು. ಗಿಗ್ ಕಾರ್ಮಿಕರು ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಈವರೆಗೆ 30,266 ಕಾರ್ಮಿಕರನ್ನು ನೋಂದಾಯಿಸಲಾಗಿದ್ದು, ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ 1,377 ಕಾರ್ಮಿಕರನ್ನು ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ ಎಂದು ಅವರು ಬಣ್ಣಿಸಿದರು.
ಕಂಪನಿಗಳು ನೌಕರರಿಗೆ ಗ್ರ್ಯಾಚುಯಿಟಿ ನೀಡುವುದು ಕಡ್ಡಾಯ
20 ಕ್ಕೂ ಅಧಿಕ ನೌಕರರನ್ನು ಹೊಂದಿರುವ ಕಂಪನಿಗಳು ಗ್ರ್ಯಾಚುಯಿಟಿ ನೀಡುವುದು ಕಡ್ಡಾಯವಾಗಿದೆ. ಈಗಾಗಲೇ 6 ಸಾವಿರ ಕಂಪನಿಗಳು ನೋಂದಣಿಯಾಗಿವೆ. ಸುಮಾರು 65 ಲಕ್ಷ ಕಾರ್ಮಿಕರಿಗೆ ಉಪಯೋಗವಾಗಿದೆ. ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯಡಿ 91 ಅಸಂಘಟಿತ ವರ್ಗಗಳ ಕಾರ್ಮಿಕರನ್ನು ಗುರುತಿಸಲಾಗಿದೆ. ಸುಮಾರು 40 ಲಕ್ಷ ಕಾರ್ಮಿಕರಿದ್ದಾರೆ ಎಂದು ಅಂದಾಜಿಸಲಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 25,45,607 ಕಾರ್ಮಿಕರು ನೋಂದಣಿಯಾಗಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 1,12,295 ಕಾರ್ಮಿಕರು ನೋಂದಣಿಯಾಗಿದ್ದು, ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಆಶಾದೀಪ ಯೋಜನೆಯನ್ನು ಜಾರಿ
ಖಾಸಗಿ ವಲಯದ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಉದ್ಯೋಗ ದೊರಕಿಸುವ ಉದ್ದೇಶದಿಂದ ಆಶಾದೀಪ ಯೋಜನೆಯನ್ನು ಜಾರಿಗೆ ತರಲಾಗಿದೆ. ಪರಿಶಿಷ್ಟ ಜಾತಿ, ಪಂಗಡಗಳ ಜನರಿಗೆ ಸಾಮಾಜಿಕ ಮತ್ತು ಆರ್ಥಿಕ ಜೀವನ ಮಟ್ಟವನ್ನು ಸುಧಾರಿಸಲು ಈ ಯೋಜನೆ ಸಹಾಯಕಾರಿಯಾಗಿದೆ. ಇಎಸ್ಐ, ಇಪಿಎಫ ವಂತಿಕೆ ಮರುಪಾವತಿ, ಅಪ್ರೆಂಟಿಸ್ ತರಬೇತಿ ಪಡೆಯುವವರಿಗೆ ಶಿಷ್ಯವೇತನ, ಖಾಯಂಗೊಂಡ ನಂತರ ವೇತನ ಮರುಪಾವತಿ ಸೌಲಭ್ಯಗಳು ಈ ಯೋಜನೆಯಲ್ಲಿವೆ. ಮಹಿಳೆಯರ ರಕ್ಷಣೆ ಹಿತದೃಷ್ಟಿಯಿಂದ ಡೊಮೆಸ್ಟಿಕ್ ಬಿಲ್ ಸಿದ್ಧವಾಗಿದೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳಿಗೆ 60 ಸಾವಿರ ಕೋಟಿ ವ್ಯಯ
ಪಂಚ ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳು ರಾಜ್ಯದಲ್ಲಿ ಸಮರ್ಥವಾಗಿ ಜಾರಿಗೆ ಬಂದಿವೆ. ಈ ಯೋಜನೆಗಳಿಗಾಗಿ ಪ್ರತಿ ವರ್ಷ ಸುಮಾರು 60 ಸಾವಿರ ಕೋಟಿ ಹಣವನ್ನು ವ್ಯಯಿಸಲಾಗುತ್ತಿದೆ. 5 ವರ್ಷಕ್ಕೆ 3 ಕೋಟಿ ಹಣ ಬಳಕೆಯಾಗಲಿದೆ. ಅಂಗವಿಕಲರ ಮಾಸಾಶನ, ವೃದ್ಧಾಪ್ಯ ವೇತನ ಸಹ ಒದಗಿಸಲಾಗುತ್ತಿದೆ. ಈ ಯೋಜನೆಗಳಿಂದ ಪ್ರತಿ ಮನೆಗೆ 8 ರಿಂದ 10 ಸಾವಿರ ಹಣ ತಲುಪಲಿದೆ. ಕರ್ನಾಟಕವು ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ವಿವರಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಿದೆ. ಅಂಬೇಡ್ಕರ್ ಅವರು ಸಾಮಾಜಿಕ ಪ್ರಜಾಪ್ರಭುತ್ವ, ಭ್ರಾತೃತ್ವ ಬಗ್ಗೆ ತಿಳಿ ಹೇಳಿದ್ದಾರೆ. ನಮ್ಮೆಲ್ಲರ ಮೇಲೆ ಸಾಕಷ್ಟು ಜವಾಬ್ದಾರಿಗಳಿವೆ. ಪ್ರಶ್ನೆ ಕೇಳುವ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ನಮ್ಮ ಹಕ್ಕುಗಳಿಗಾಗಿ ಹೋರಾಡಬೇಕಿದೆ. ರಾಷ್ಟ್ರ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು. ಬಡತನ ನಿರ್ಮೂಲನೆ ಮಾಡಲು ಮುಂದಾಗಬೇಕಿದೆ ಎಂದು ತಿಳಿಸಿದರು.