ಯುವ ಜನತೆಯಲ್ಲಿ ಆಧುನಿಕ ಜೀವನ ಶೈಲಿಯಿಂದ, ಮಧ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಹೃದಯಘಾತಗಳು ಸಂಭವಿಸುವ ಅವಕಾಶಗಳು ಹೆಚ್ಚಾಗಿವೆ ಇದರ ಕುರಿತು ಶಾಲಾ , ಕಾಲೇಜುಗಳು, ವಿಶ್ವವಿದ್ಯಾಲಯ ಹಾಗೂ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಇತ್ತೀಚೆಗೆ ಹೃದಯಾಘಾತದಿಂದ ಸಾವು ಸಂಭವಿಸುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗುತ್ತಿರುವ ಹಿನ್ನೆಲೆಯಲ್ಲಿ ಸಭೆ ನಡೆಸಿ ಮಾತನಾಡಿದ ಅವರು ಅತಿ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತಕ್ಕೆ ಕಾರಣವೇನು ಎಂಬುದರ ಬಗ್ಗೆ ಗಮನಹರಿಸಿ ಪರಿಶೀಲನೆ ಮಾಡಿ ಎಂದು ವೈದ್ಯರುಗಳಿಗೆ ಸೂಚಿಸಿದರು.
ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸುವುದರ ಜೊತೆಗೆ ಆಹಾರ ಸೇವನೆ, ಜೀವನ ಶೈಲಿಯಲ್ಲಿ ಬದಲಾವಣೆ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯುವಜನತೆಗೆ ಮನವರಿಕೆ ಮಾಡುವಂತೆ ತಿಳಿಸಿದರು.
ಹೃದಯಾಘಾತ ಸಂಭವಿಸಿ ಆಸ್ಪತ್ರೆಗೆ ಆಗಮಿಸಿದ ಸಂದರ್ಭದಲ್ಲಿ ತುರ್ತಾಗಿ ಎಚ್ಚರಿಕೆವಹಿಸಿ ತಕ್ಷಣ ಚಿಕಿತ್ಸೆ ನೀಡಿ ಜೀವ ಉಳಿಸಲು ಎಲ್ಲಾ ತಾಲ್ಲೂಕುಗಳಲ್ಲಿರುವ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳಿರುವಂತೆ ನೋಡಿಕೊಳ್ಳಲು ತಿಳಿಸಿದರಲ್ಲದೆ, ಖಾಸಗಿ ಆಸ್ಪತ್ರೆಗಳಲ್ಲಿಯೂ ಔಷಧಿಗಳು ಲಭ್ಯವಿರುವಂತೆ ನೋಡಿಕೊಳ್ಳಲು ವೈದ್ಯರಿಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಆಕಸ್ಮಿಕ ಸಾವು ಸಂಭವಿಸಿದಾಗ ಸರ್ಕಾರದ ಮಾರ್ಗಸೂಚಿ ಅನ್ವಯ (ಪೋಸ್ಟ್ ಮಟಮ್) ಮರಣೋತ್ತರ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿ ಯಾವ ಕಾರಣಕ್ಕೆ ಸಾವು ಸಂಭವಿಸಿದೆ ಎಂಬುದನ್ನು ನಿಖರವಾಗಿ ನಮೂದಿಸಲು ಸೂಚಿಸಿದರು.
ಮೇ.20 ರಿಂದ ಜೂನ್ 20 ವರೆಗೆ ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ದಿಂದ ಸಾವಾಗಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿರುವ 18 ಪ್ರಕರಣಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ವರದಿ ನೀಡಲು ಒಂದು ತಂಡ ರಚನೆ ಮಾಡಿ ಸಮಗ್ರ ವರದಿ ಪಡೆದು ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೆ ಸೂಚಿಸಿದರು.
ಅತ್ಯಂತ ಗಂಭೀರವಾದ ವಿಷಯ 14 ಜನ ಮನೆಯಲ್ಲಿ, ಇಬ್ಬರು ಆಸ್ಪತ್ರೆಯಲ್ಲಿ ಹಾಗೂ ಇಬ್ಬರು ಕೆಲಸ ಮಾಡುವ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಪ್ರತಿಯೊಬ್ಬರ ಸಾವಿನ ವರದಿ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಪರಿಶೀಲಿಸಿ ವರದಿ ನೀಡುವಂತೆ ನಿರ್ದೇಶನ ನೀಡಿದರು.
30 ,40, 50, 60 ವರ್ಷದೊಳಗಿನವರ ಸಾವಿಗೆ ಕಾರಣವೇನು ಎಂಬುದರ ಬಗ್ಗೆ ಹೆಚ್ಚಿನ ಗಮನಹರಿಸಿ ಸೂಕ್ತ ಮಾಹಿತಿ ನೀಡುವಂತೆ ತಿಳಿಸಿದರು.
ಹಿಮ್ಸ್ ನಿರ್ದೇಶಕರಾದ ಡಾ|| ರಾಜಣ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಅನಿಲ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ನಾಗಪ್ಪ ಮತ್ತಿತರ ವೈದ್ಯರು ಸಭೆಯಲ್ಲಿ ಹಾಜರಿದ್ದರು.