ಬೆಂಗಳೂರು: ನಗರದಲ್ಲಿ ಕಸದ ಮಾಫಿಯಾವನ್ನು ತಡೆಗಟ್ಟಲು ಪ್ರಯತ್ನ ಮಾಡಲಾಗುತ್ತಿದೆ. ನಗರದಲ್ಲಿ ಏನೂ ಕೊರತೆಯಾಗದಂತೆ ಯೋಜನೆ ರೂಪಿಸಲಾಗುತ್ತಿದೆ. 60 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳುವಂತಹ ನೂತನ ಸ್ಟೇಡಿಯಂ ನಿರ್ಮಾಣ ಮಾಡಲಾಗುವುದು ಇದಕ್ಕಾಗಿ 50 ಎಕರೆ ಜಾಗ ಗುರುತಿಸಲಾಗಿದೆ. ಕಾವೇರಿ 5ನೇ ಹಂತದ ಯೋಜನೆ ಪೂರ್ಣಗೊಳಿಸಿ 110 ಹಳ್ಳಿಗಳಿಗೆ ನೀರು ನೀಡುತ್ತಿದ್ದೇವೆ. 6ನೇ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಬೆಂಗಳೂರಿನ ಅಭಿವೃದ್ಧಿಗೆ ಬೇಕಾದಷ್ಟು ಶ್ರಮ ಪಡುತ್ತಿದ್ದೇವೆ. ಸಿಕ್ಕಿರುವ ಅವಕಾಶದಲ್ಲಿ ಸಾಕ್ಷಿಗುಡ್ಡೆ ನಿರ್ಮಾಣ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಬಾಬು ಜಗಜೀವನ್ ರಾಮ್ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯ ಅಂಗವಾಗಿ ನಡೆದ ನೂತನ ʼಕೆಂಪೇಗೌಡ ಭವನʼ ಭೂಮಿಪೂಜೆ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.
“ನಾವು ಮೂರು ʼಕೆʼಗಳನ್ನು ಮರೆಯಬಾರದು ಬೆಂಗಳೂರು ಕಟ್ಟಿದ ಕೆಂಪೇಗೌಡರು, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಅವರು, ವಿಕಾಸ ಸೌಧ ಕಟ್ಟಿದ ಎಸ್.ಎಂ.ಕೃಷ್ಣ ಅವರು. ಬೆಂಗಳೂರು ಎಲ್ಲರಿಗೂ ಸೇರಿದ್ದು” ಎಂದು ಹೇಳಿದರು.
“ಕೆಂಪೇಗೌಡರ ಭವನ ನಿರ್ಮಾಣಕ್ಕೆ ಐದು ಎಕರೆ ಜಮೀನನ್ನು ಒಂದೇ ವಾರದಲ್ಲಿ ಕ್ಯಾಬಿನೆಟ್ ಮುಂದೆ ತಂದು ಒಪ್ಪಿಗೆ ಪಡೆಯಲಾಯಿತು. ಸಮಾಜಕಲ್ಯಾಣ ಇಲಾಖೆಗೆ ಸೇರಿದ ಜಾಗವನ್ನು ಸಚಿವರಾದ ಮಹದೇವಪ್ಪ ಅವರಿಂದ ಒಪ್ಪಿಗೆ ಪಡೆದು ಈಗ ಭವ್ಯ ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸುಮನಹಳ್ಳಿಯಲ್ಲಿ ಮೆಟ್ರೋ ಮಾರ್ಗ ಕೂಡ ಹಾದು ಹೋಗಲಿದೆ” ಎಂದು ಹೇಳಿದರು.
“ಬೆಂಗಳೂರು ವಿವಿ ವ್ಯಾಪ್ತಿಯಲ್ಲಿ 100 ಕೋಟಿ ವೆಚ್ಚದಲ್ಲಿ ಸಂಶೋಧನಾ ಕೇಂದ್ರ ಕೂಡ ನಿರ್ಮಾಣ ಮಾಡಲಾಗುತ್ತಿದೆ. ಕೆಂಪೇಗೌಡರ ಹೆಸರಿನಲ್ಲಿ ಭವ್ಯ ಕಟ್ಟಡ ನಿರ್ಮಾಣಕ್ಕೆ ಜಿಬಿಸಿಯಿಂದ 100 ಕೋಟಿ ಮೀಸಲಿಟ್ಟಿದ್ದೇವೆ. ಮೂರ್ನಾಲ್ಕು ಜನ ಕಟ್ಟಡ ವಾಸ್ತುಶಿಲ್ಪಿಗಳು ವಿನ್ಯಾಸ ನೀಡಿದ್ದಾರೆ. ಇದರ ಬಗ್ಗೆ ನಿರ್ಮಲಾನಂದನಾಥ ಶ್ರೀಗಳ ಗಮನಕ್ಕೂ ತರಲಾಗುವುದು” ಎಂದರು.
“ಕೆಂಪೇಗೌಡರ ಹೆಸರಿನಲ್ಲಿ ಇರುವ ನಮ್ಮ ವಿಮಾನ ನಿಲ್ದಾಣ ವಿಶ್ವಕ್ಕೆ ಮಾದರಿ. ಕೆಂಪೇಗೌಡರ ಹೆಸರಿನಲ್ಲಿ ಸ್ಥಾಪನ ಮಾಡಿ ಅವರ ಹೆಸರನ್ನು ಉಳಿಸಿದ್ದೇವೆ. ಕೆಂಪೇಗೌಡರ ಹೆಸರಿನಲ್ಲಿ ಸಂಘಸಂಸ್ಥೆಗಳಿಗೆ ಪ್ರಶಸ್ತಿ ನೀಡುವ ವೇಳೆ ನಾನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೂ ನೀಡಿ ಎಂದು ಹೇಳಿದ್ದೆ. ಅದರಂತೆ ಅವರನ್ನು ಅಭಿನಂದಿಸಲಾಗಿದೆ” ಎಂದು ತಿಳಿಸಿದರು.
“ಈ ಹಿಂದೆ ನಾನು ಇಂಧನ ಸಚಿವನಾಗಿದ್ಧಾಗ ಕೆಂಪೇಗೌಡರ ಜಯಂತಿಯ ಬಗ್ಗೆ ರೂಪುರೇಷೆಗಳನ್ನು ತಯಾರಿಸಲಾಯಿತು. ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿವರಿಗೆ ಕೆಂಪೇಗೌಡರ ಜನನದ ದಿನಾಂಕದ ಬಗ್ಗೆ ಇರುವ ಗೊಂದಲವನ್ನು ತಿಳಿಸಿದಾಗ ಅವರು ಜೂನ್ 27 ಎಂದು ಸೂಚನೆ ನೀಡಿದರು. ಈ ವಿಚಾರವನ್ನು ಸಾರ್ವಜನಿಕವಾಗಿ ಪ್ರಕಟಣೆ ಮಾಡಿ ಕೆಂಪೇಗೌಡರ ಜಯಂತಿಗೆ ಮುನ್ನುಡಿ ಬರೆಯಲಾಯಿತು. ಕೆಂಪೇಗೌಡರ ಜಯಂತಿ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಬಾರದು ಇಡೀ ರಾಜ್ಯದೆಲ್ಲೆಡೆ ಆಚರಿಸುವಂತಾಗಬೇಕು ಎಂಬುದು ನಮ್ಮ ಅಭಿಲಾಷೆಯಾಗಿತ್ತು. ಬಿಬಿಎಂಪಿಯಿಂದ ಜಯಂತಿ ಆಚರಣೆಗೆ ಅನುದಾನ ನೀಡಲಾಗುತ್ತಿದೆ” ಎಂದು ಹೇಳಿದರು.
ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ಈ ಖಡಕ್ ಸೂಚನೆ ಕೊಟ್ಟ ‘ಗೃಹ ಸಚಿವ ಜಿ.ಪರಮೇಶ್ವರ್’








