ತುಮಕೂರು : ಕಂದಾಯ ಪ್ರಗತಿಗೆ ಸಂಬಂಧಿಸಿದಂತೆ ಅಧಿಕಾರಿಗಳು ನೀಡುತ್ತಿರುವ ಮಾಹಿತಿ ಒಂದಕ್ಕೊಂದು ತಾಳೆಯಾಗುತ್ತಿಲ್ಲವೆಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ನಗರ ಕೇಂದ್ರ ಗ್ರಂಥಾಲಯದಲ್ಲಿ ಸೋಮವಾರ ಜಿಲ್ಲೆಯ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಎಲ್ಲಾ ತಾಲ್ಲೂಕು ಕಂದಾಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ವರದಿಯನುಸಾರ ಜಿಲ್ಲೆಯಲ್ಲಿ ದಾಖಲೆಗಳಿಲ್ಲದ 522 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳೆಂದು ಗುರುತಿಸಿರುವುದು ಅಭಿನಂದನಾರ್ಹ. ಆದರೆ ಕೈಬಿಟ್ಟು ಹೋಗಿರುವ ಹಟ್ಟಿ, ತಾಂಡಾಗಳಲ್ಲದೆ ಸಾಮಾನ್ಯ ರೈತರು ವಾಸಿಸುವ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಗುರುತಿಸಿ ಕಂದಾಯ ಗ್ರಾಮಗಳನ್ನಾಗಿಸಲು ಪ್ರಸ್ತಾವನೆ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಾಖಲೆಗಳಿಲ್ಲದ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳೆಂದು ಗುರುತಿಸುವುದರಿಂದ ಅಲ್ಲಿನ ನಿವಾಸಿಗಳು ತಮ್ಮ ಸ್ವತ್ತಿನ ದಾಖಲೆಗಳನ್ನು ಹೊಂದುವುದರೊಂದಿಗೆ ಅವರ ಅತಂತ್ರ ಬದುಕಿನಿಂದ ಮುಕ್ತರಾಗಿ ನೆಮ್ಮದಿ ಜೀವನ ನಡೆಸಲು ಅನುವಾಗುತ್ತದೆ ಎಂದು ಹೇಳಿದರು.
ಕಂದಾಯ ಇಲಾಖೆಯಲ್ಲಿ ಎಷ್ಟು ಕೆಲಸ ಮಾಡಿದರೂ ಕಡಿಮೆಯೇ! ಜನಸಾಮಾನ್ಯರಿಗೆ ಕಂದಾಯ ಸೌಲಭ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳಿಗೆ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಅಧಿಕಾರಿಗಳು ಸಕಾಲದಲ್ಲಿ ಜನಸಾಮಾನ್ಯರ ಕೆಲಸ ಮಾಡಿಕೊಟ್ಟಲ್ಲಿ ಇಲಾಖೆಯ ಬಗ್ಗೆ ಅವರಿಗೆ ಸದಾಭಿಪ್ರಾಯ ಬರುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳ ಡಿಜಿಟಲ್ ಸಹಿ
ದುರುಪಯೋಗವಾಗಿರುವ ಬಗ್ಗೆ ಮಾತನಾಡಿದ ಸಚಿವರು, ಇಲಾಖೆಯಲ್ಲಿ ಇಂತಹ ವಂಚನೆ ಪ್ರಕರಣಗಳನ್ನು ಎಸಗುವ ಅಧಿಕಾರಿ/ಸಿಬ್ಬಂದಿಯನ್ನು ಬೇರು ಬಿಡದಂತೆ ಮೂಲದಲ್ಲಿಯೇ ಕಿತ್ತು ಹಾಕಬೇಕು. ವಂಚನೆ ಪ್ರಕರಣಗಳಲ್ಲಿ ಭಾಗಿಯಾದ ಯಾರೇ ಆಗಲಿ ತನಿಖೆ ನಡೆಸಿ ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಭೂಮಿ ಪೆಂಡೆನ್ಸಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲಿಸಿದ ಸಚಿವರು, ಭೂಮಿ ತಂತ್ರಾಂಶದಲ್ಲಿ ಈವರೆಗೆ ಸ್ವೀಕೃತವಾದ ಒಟ್ಟು 28629 ಅರ್ಜಿಗಳ ಪೈಕಿ 21045 ಅರ್ಜಿಗಳು ತಿರಸ್ಕೃತಗೊಂಡಿವೆ. ಜಿಲ್ಲೆಯ ಇತರೆ ತಾಲ್ಲೂಕುಗಳಿಗೆ ಹೋಲಿಸಿದರೆ ಕುಣಿಗಲ್ ತಾಲ್ಲೂಕಿನಲ್ಲಿ ಅತಿ ಹೆಚ್ಚು ಭೂಮಿ ಪೆಂಡೆನ್ಸಿ ಅರ್ಜಿಗಳು ಬಾಕಿ ಇವೆ. ಬಾಕಿಯಿರುವ 777 ಅರ್ಜಿಗಳನ್ನು ವಿಲೇ ಮಾಡಲು ವಿಳಂಬಕ್ಕೆ ಕಾರಣವೇನು ಎಂದು ಕುಣಿಗಲ್ ತಹಶೀಲ್ದಾರ್ ರಶ್ಮಿ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು ಎಲ್ಲಾ ಅರ್ಹ ಅರ್ಜಿಗಳ ನೈಜತೆ ಪರಿಶೀಲಿಸಿ ಸಕಾಲದಲ್ಲಿ ವಿಲೇವಾರಿ ಮಾಡಬೇಕು ಎಂದು ನಿರ್ದೇಶಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಕಂದಾಯ ಗ್ರಾಮಗಳೆಂದು ಗುರುತಿಸಿರುವ 522 ಗ್ರಾಮಗಳ ನಿವಾಸಿಗಳಿಗೆ 7653 ಹಕ್ಕುಪತ್ರಗಳನ್ನು ವಿತರಿಸಲು ಅಂತಿಮ ಅಧಿಸೂಚನೆ ಮಾಡಲಾಗಿದೆ. ಈಗಾಗಲೇ ಗುರುತಿಸಿರುವ ಉಪ ಗ್ರಾಮ/ಕಂದಾಯ ಗ್ರಾಮಗಳನ್ನು ಹೊರತುಪಡಿಸಿ ಹೊಸದಾಗಿ 683 ದಾಖಲೆ ರಹಿತ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಗುರುತಿಸಲಾಗಿದೆ. ಬಗರ್ ಹುಕುಂಗಾಗಿ 6 (2) ಅಡಿ ಸ್ವೀಕೃತವಾದ 147478 ಅರ್ಜಿಗಳ ಪೈಕಿ ೫,೦೮೯ ಅರ್ಜಿಗಳು ಮಾತ್ರ ಅರ್ಹವಾಗಿವೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಸಚಿವರು ಮುಂದುವರೆದು ಮಾತನಾಡಿ, ಜಿಲ್ಲೆಯಲ್ಲಿ ಈವರೆಗೂ ಆರ್‌ಟಿಸಿಗಳಿಗೆ ೧೫,೫೨,೭೦೩ ಆಧಾರ್ ಲಿಂಕ್ ಮಾಡಲಾಗಿದ್ದು, ಶೇ.86.7 ರಷ್ಟು ಪ್ರಗತಿ ಸಾಧಿಸಿರುವುದು ಸ್ವಲ್ಪ ಸಮಾಧಾನ ತಂದಿದೆ. ತುರುವೇಕೆರೆಯಲ್ಲಿ ಇನ್ನು ಶೇ.೧೬.೨ರಷ್ಟು ಆಧಾರ್ ಸೀಡಿಂಗ್ ಬಾಕಿಯಿದ್ದು, ಶೀಘ್ರ ಪೂರ್ಣಗೊಳಿಸಲು ಸೂಚನೆ ನೀಡಿದರು.
ಪ್ರತಿ ದಿನ ಗ್ರಾಮ ಲೆಕ್ಕಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಭೂ ಮಂಜೂರಿದಾರರಿಗೆ ಆರ್‌ಟಿಸಿ ನೀಡಲು ಗುರಿ ನಿಗಧಿಗೊಳಿಸಬೇಕು. ಬಾಕಿ ಅರ್ಜಿಗಳನ್ನು ಕಾನೂನು ಪ್ರಕಾರವೇ ವಿಲೇ ಮಾಡಬೇಕು. ಯಾವುದೇ ಗೊಂದಲಕ್ಕೆ ಆಸ್ಪದ ನೀಡಬಾರದು.
ಅರ್ಜಿಗಳನ್ನು ಬಾಕಿ ಇಟ್ಟುಕೊಂಡಲ್ಲಿ ಸಮಸ್ಯೆಗಳು ಇನ್ನಷ್ಟು ಜಟಿಲವಾಗುತ್ತವೆ. ಕಂದಾಯ ಸೇವೆಗಳನ್ನು ಒದಗಿಸುವ ಮೂಲಕ ಅಧಿಕಾರಿ/ಸಿಬ್ಬಂದಿಗಳು ಬಡ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದರಲ್ಲದೆ, ಕಂದಾಯ ಪ್ರಗತಿಯಲ್ಲಿ ಹಿನ್ನಡೆಗೆ ಕಾರಣವಾಗಿರುವ ಸಿಬ್ಬಂದಿಗಳ ವರ್ಗಾವಣೆಗೆ ಶಿಫಾರಸ್ಸು ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಜನವರಿಯಿಂದ ದರಖಾಸ್ತು ಪ್ರಗತಿಯಿಲ್ಲದೆ ನಿರೀಕ್ಷಿತ ಸಾಧನೆಯಾಗಿಲ್ಲ. ಜನರಿಗೆ, ಮುಖ್ಯಮಂತ್ರಿಗಳಿಗೆ, ವಿಧಾನಸಭೆಗೆ ಏನೆಂದು ಉತ್ತರ ನೀಡಬೇಕು? ಎಂದು ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸಿದ ಸಚಿವರು, ರಾಜ್ಯದಲ್ಲಿ ಬಗರ್ ಹುಕುಂ ಅರ್ಜಿಗಳನ್ನು 3 ತಿಂಗಳೊಳಗೆ ವಿಲೇವಾರಿ ಮಾಡಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿ 1 ತಿಂಗಳು ಕಳೆದಿದೆ. ಉಳಿದಿರುವ ಇನ್ನೆರಡು ತಿಂಗಳೊಳಗಾಗಿ ಬಗರ್ ಹುಕುಂ ಅರ್ಜಿಗಳ ವಿಲೇವಾರಿಯನ್ನು ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.
ಭೂ ಸುರಕ್ಷಾ ಯೋಜನೆಯಡಿ ಹಳೆಯ ದಾಖಲೆಗಳನ್ನು ಸ್ಕಾö್ಯನಿಂಗ್ ಮಾಡುತ್ತಿರುವ ಕಾರ್ಯದಲ್ಲಿ ಈವರೆಗೆ ಶಿರಾ ತಾಲ್ಲೂಕು ಹೊರತುಪಡಿಸಿ ಜಿಲ್ಲೆಯಲ್ಲಿ ೮೩,೫೯,೭೬೪ ಕಡತ ಹಾಗೂ ವಹಿಗಳ ಪುಟಗಳನ್ನು ಗಣಕೀಕರಣಗೊಳಿಸಲಾಗಿದೆ. ಅನಗತ್ಯ ದಾಖಲೆಗಳನ್ನು ಸ್ಕಾö್ಯನಿಂಗ್ ಮಾಡುತ್ತಿರುವುದರಿಂದಲೇ ಕಂದಾಯ ಪ್ರಗತಿ ವಿಳಂಬಕ್ಕೆ ಕಾರಣವೆಂದ ಅವರು, ಇನ್ನಾರು ತಿಂಗಳೊಳಗೆ ಹಳೆಯ ದಾಖಲೆಗಳ ಗಣಕೀಕರಣ ಕಾರ್ಯ ಪೂರ್ಣಗೊಳಿಸಬೇಕೆಂದು ತಾಕೀತು ಮಾಡಿದರು.
ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿಯಿದ್ದ 1395 ಪ್ರಕರಣಗಳ ಪೈಕಿ 1185 ಆರ್‌ಪಿ, ಆರ್‌ಎ ಮತ್ತು ಪಿಟಿಸಿಎಲ್ ಪ್ರಕರಣಗಳನ್ನು ವಿಲೇ ಮಾಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ಅದೇ ರೀತಿ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರ ನ್ಯಾಯಾಲಯಗಳಲ್ಲಿಯೂ ಪ್ರಕರಣಗಳನ್ನು ಬಾಕಿ ಉಳಿಸಿಕೊಳ್ಳದೆ ಶೀಘ್ರ ವಿಲೇವಾರಿ ಮಾಡಬೇಕೆಂದು ಸೂಚಿಸಿದರು.
ಲ್ಯಾಂಡ್ ಬೀಟ್, ಭೂ ದಾಖಲೆಗಳ ನ್ಯಾಯಾಲಯ ಪ್ರಕರಣ, ಭೂ ಪರಿವರ್ತನೆ, ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ, ಇ-ಆಫೀಸ್ ಅನುಷ್ಠಾನ ಸೇರಿದಂತೆ ಮತ್ತಿತರ ಕಂದಾಯ ವಿಷಯಗಳ ಪ್ರಗತಿಯನ್ನು ಸಚಿವರು ಪರಿಶೀಲಿಸಿದರು.
ಸಭೆಯಲ್ಲಿ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ಹಾಗೂ ಬಿ.ಸುರೇಶ್ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಕಂದಾಯ ಆಯುಕ್ತ ಮಂಜುನಾಥ್ ಸೇರಿದಂತೆ ಜಿಲ್ಲೆಯ ವಿವಿಧ ಅಧಿಕಾರಿಗಳು ಭಾಗಿಯಾಗಿದ್ದರು.
ಯಾರದ್ದೋ ಹೇಳಿಕೆ ಮೇಲೆ ಸುರೇಶ್ ವಿಚಾರಣೆಗೆ ಕರೆದಿದ್ದಾರೆ, ಇದನ್ನು ವೈಭವೀಕರಿಸುವ ಅಗತ್ಯವಿಲ್ಲ: DKS
ನೀವು ‘ಮಲೆನಾಡಿನ ದೃಶ್ಯ ವೈಭವ’ವನ್ನು ಕಣ್ ತುಂಬಿಕೊಳ್ಳಬೇಕೇ? ತಪ್ಪದೇ ಈ ವೀಡಿಯೋ ಸಾಂಗ್ ನೋಡಿ | Malnad Yana