ಬಿಜಾಪುರ : ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್’ನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐದು ನಕ್ಸಲರ ಶವಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ನಡೆಯುತ್ತಿರುವ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ, ಕಳೆದ ನಾಲ್ಕು ದಿನಗಳಲ್ಲಿ ಭದ್ರತಾ ಪಡೆಗಳು ಇಬ್ಬರು ನಕ್ಸಲ್ ನಾಯಕರು ಸೇರಿದಂತೆ ಒಟ್ಟು ಏಳು ನಕ್ಸಲರನ್ನ ಕೊಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹತ್ಯೆಗೀಡಾದ ಎಲ್ಲಾ ಏಳು ನಕ್ಸಲರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೂನ್ 4 ಬುಧವಾರದಿಂದ ಬಿಜಾಪುರ ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ರಾಜ್ಯ ಪೊಲೀಸರ ವಿಶೇಷ ಕಾರ್ಯಪಡೆ (STF), ಜಿಲ್ಲಾ ಮೀಸಲು ಗಾರ್ಡ್ (DRG) ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ನ ವಿಶೇಷ ಘಟಕವಾದ ಕೋಬ್ರಾ ಬೆಟಾಲಿಯನ್ ಸೈನಿಕರು ಭಾಗವಹಿಸಿದ್ದಾರೆ.
ಜೂನ್ 5ರಂದು ಭದ್ರತಾ ಪಡೆಗಳು ಮಾವೋವಾದಿ ನಾಯಕ ಸುಧಾಕರ್ ಅಲಿಯಾಸ್ ಗೌತಮ್ ಅವರ ಮೃತದೇಹವನ್ನು ಆ ಪ್ರದೇಶದಿಂದ ವಶಪಡಿಸಿಕೊಂಡರು. ಇದಾದ ನಂತರ ಜೂನ್ 6 ರಂದು ತೆಲಂಗಾಣ ರಾಜ್ಯ ಸಮಿತಿ ಸದಸ್ಯ ಭಾಸ್ಕರ್ ಅವರ ಮೃತದೇಹವನ್ನು ವಶಪಡಿಸಿಕೊಳ್ಳಲಾಯಿತು ಎಂದು ಅವರು ಹೇಳಿದರು.