ವಸಂತ ಬಿ ಈಶ್ವರಗೆರೆ.., ಸಂಪಾದಕರು
ಶಿವಮೊಗ್ಗ: ಜಿಲ್ಲೆಯ ಸಾಗರ ಹಾಗೂ ಸೊರಬ ಮಾರ್ಗದ ಭದ್ರಾಪುರ-ಹೊಳೆಕೊಪ್ಪ ಮಾರ್ಗದ ರಸ್ತೆ ಮಧ್ಯೆ ಅಕೇಶಿಯ ಮರ ಬಿದ್ದು ಸಂಚಾರ ಬಂದ್ ಆಗಿದೆ. ಮಳೆಗಾಲ ಆರಂಭಕ್ಕೆ ಮುನ್ನವೇ ಬೀಳುವಂತಿರುವ ಅಕೇಶಿಯ ಮರ ಕಡಿತಲೆ ಮಾಡಬೇಕಿದ್ದಂತ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ – ಸೊರಬ ಮಾರ್ಗದ ಭದ್ರಾಪುರ-ಹೊಳೆಕೊಪ್ಪದ ಮಧ್ಯದಲ್ಲಿ ಅಕೇಶಿಯ ಮರಗಳ ಸಾಲಿದೆ. ಕಳೆದ ಒಂದು ವರ್ಷಗಳ ಹಿಂದೆ ರಸ್ತೆಗೆ ಬಾಗಿರುವ, ಕೆಲವು ಒಣಗಿರುವಂತ ಅಕೇಶಿಯ ಮರಗಳನ್ನು ಕಡಿತಲೆ ಮಾಡಿ, ಮುಂದಾಗಲಿರುವಂತ ಅನಾಹುತ ತಪ್ಪಿಸುವಂತೆ ದೂಗೂರು ಗ್ರಾಮ ಪಂಚಾಯ್ತಿ ಪಿಡಿಓ ಪತ್ರ ಬರೆದು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಆದರೇ ಇಲ್ಲಿಯವರೆಗೆ ತೆರವನ್ನೇ ಮಾಡಿಲ್ಲ.
ರಸ್ತೆಗೆ ಬಿದ್ದ ಮರ, ವಾಹನ ಸಂಚಾರ ಅರ್ಧಗಂಟೆ ಬಂದ್
ಇಂದು ಭದ್ರಾಪುರ-ಹೊಳೆಕೊಪ್ಪ ಮಾರ್ಗದಲ್ಲಿ ಅಕೇಶಿಯ ಮರವೊಂದು ಭಾರೀ ಗಾಳಿ ಸಹಿಯ ಮಳೆಯಿಂದಾಗಿ ರಸ್ತೆಗೆ ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕಿಲೋಮೀಟರ್ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಲ್ಲುವಂತೆ ಆಗಿತ್ತು. ಹೀಗಿದ್ದರೂ ಉಪ ವಲಯ ಅರಣ್ಯಾಧಿಕಾರಿ ಮುತ್ತಣ್ಣ, ಸೊರಬ ವಲಯ ಅರಣ್ಯಾಧಿಕಾರಿ ಜಾವೆದ್ ಅಕ್ತರ್ ಆಗಲೀ ಬಾರದೇ ಇದ್ದದ್ದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು.
ಕನಿಷ್ಠ ಓರ್ವ ಫಾರೆಸ್ಟ್ ಗಾರ್ಡ್ ಕೂಡ ಸ್ಥಳಕ್ಕೆ ಆಗಮಿಸದೇ, ಮರ ಕಟಾವು ಮಾಡುವಂತ ವ್ಯಕ್ತಿಯನ್ನು ಕರೆಸಿದಂತ ಸ್ಥಳೀಯರೇ ರಸ್ತೆಗೆ ಬಿದ್ದಿದ್ದಂತ ಮರ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸುಮಾರು ಮುಕ್ಕಾಲು ಗಂಟೆಗಳ ಕಾಲ ವಾಹನ ಸಂಚಾರ ಬಂದ್ ಆಗಿ, ಟ್ರಾಫಿಕ್ ಜಾಮ್ ಆಗಿತ್ತು..
ಒಂದು ವರ್ಷವೇ ಆದರೂ ಕಡಿತಲೆ ಮಾಡದೇ ಅರಣ್ಯ ಇಲಾಖೆ ನಿರ್ಲಕ್ಷ್ಯ
ದೂಗೂರು ಗ್ರಾಮ ಪಂಚಾಯ್ತಿ ಪಿಡಿಒ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ಒಂದು ವರ್ಷವೇ ಕಳೆದರು ಮುಂಗಾರು ಮಳೆ ಆರಂಭಕ್ಕೆ ಮುನ್ನ ವಾಹನ ಸಾವರರ ಮೇಲೆ ಮುರಿದು ಬೀಳುವಂತೆ ಇರುವಂತ ಅಕೇಶಿಯ ಮರಗಳ ಕಡಿತಲೆ ಮಾತ್ರ ಮಾಡಿಯೇ ಇಲ್ಲ. ಕೆಲವು ಅಕೇಶಿಯ ಮರಗಳು ಒಣಗಿ ಈಗಲೋ ಆಗಲೋ ಮುರಿದು ಬೀಳುವಂತಿದ್ದರೇ, ಮತ್ತೆ ಕೆಲವು ಮರಗಳು ರಸ್ತೆಗೆ ಬಾಗಿ ಯಾವುದೇ ಕ್ಷಣದಲ್ಲಿ ಬಿದ್ದು ವಾಹನದ ಸವಾರರ ಪ್ರಾಣಹಾನಿಯನ್ನುಂಟು ಮಾಡುವಂತಿವೆ. ಹೀಗಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಮಾತ್ರ ಈವರೆಗೆ ಮರ ಕಡಿತಲೆ ಮಾಡಿಲ್ಲ. ಯಾರಾದ್ರೂ ಪ್ರಾಣ ಹೋದಾಗ ತೆರವು ಮಾಡ್ತೀರಾ ಅಂತ ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇಂದು ರಸ್ತೆಗೆ ಉರುಳಿ ಬಿದ್ದ ಮರ, ಕೂದಲೆಳೆಯ ಅಂತರದಲ್ಲಿ ಪಾರಾದ ಪ್ರಯಾಣಿಕರು
ಇಂದು ಭದ್ರಾಪುರ-ಹೊಳೆಕೊಪ್ಪ ಮಾರ್ಗದಲ್ಲಿ ಬೃಹತ್ ಗಾತ್ರದ ಅಕೇಶಿಯಾ ಮರವೊಂದು ಉರುಳಿ ಬಿದ್ದಿದೆ. ಇನ್ನೇನು ಟ್ರ್ಯಾಕ್ಟರ್ ಮೇಲೆ ಬೀಳಬೇಕು ಎನ್ನುವಷ್ಟರಲ್ಲಿ ದಿಢೀರ್ ಚಾಲಕ ನಿಲ್ಲಿಸಿದ ಪರಿಣಾಮ ಪ್ರಾಣಹಾನಿ, ವಾಹನ ಜಖಂಗೊಳ್ಳೋದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಈ ಮಾಹಿತಿ ಅರಣ್ಯ ಇಲಾಖೆಗೆ ನೀಡಿದರೂ ತೆರವು ಸ್ಥಳಕ್ಕೆ ಆಗಮಿಸದೇ ಇದ್ದದ್ದೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಇನ್ನೂ ಯಾವಾಗ ತೆರವು ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳೇ..?
ಮುಂಗಾರು ಪೂರ್ವ ಮಳೆ ಆರಂಭಗೊಂಡಿದೆ. ಮುಂಗಾರು ಇನ್ನೇನು ಆರಂಭಗೊಳ್ಳಬೇಕಿದೆ. ಹೀಗಿರುವಾಗ ಇನ್ನೂ ಬೀಳುವಂತಿರುವಂತ ಅಕೇಶಿಯ ಮರ ತೆರವು ಕಾರ್ಯಾಚರಣೆ ಯಾವಾಗ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಕಳೆದ ಮಾರ್ಚ್ ನಲ್ಲಿ ನಿಮ್ಮ ಕನ್ನಡ ನ್ಯೂಸ್ ನೌ ‘ವಾಹನ ಸವಾರ’ರ ಬಲಿಗಾಗಿ ಕಾದಿವೆ ‘ಒಣ ಮರ’: ಕಡಿತಲೆಗೆ ‘ಸೊರಬ ಅರಣ್ಯಾಧಿಕಾರಿ’ಗಳ ನಿರ್ಲಕ್ಷ್ಯ ಎಂಬುದಾಗಿ ವರದಿಯನ್ನು ಪ್ರಕಟಿಸಿತ್ತು. ಆ ಬಳಿಕ ಒಣಗಿ ಬೀಳುವಂತಿದ್ದಂತ ನಾಲ್ಕೈದು ಮರಗಳನ್ನು ಮಾತ್ರವೇ ಅರಣ್ಯ ಇಲಾಖೆಯಿಂದ ಕಡಿತಲೆ ಮಾಡಿ ತೆರವುಗೊಳಿಸಿತ್ತು. ಆದರೇ ಗಾಳಿಗೆ ಬೀಳುವಂತಿರುವಂತ ಇನ್ನೂ ಅನೇಕ ಅಕೇಶಿಯಾ ಮರಗಳನ್ನು ಹಾಗೆಯೇ ಬಿಟ್ಟು, ವಾಹನ ಸವಾರರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದೆ ಅರಣ್ಯ ಇಲಾಖೆಯವರು ಎಂಬುದು ಜನರ ಕಿಡಿ ನುಡಿಯಾಗಿದೆ.
ಅದೇನೇ ಆಗಲೀ ಆದಷ್ಟು ಬೇಗ ಸೊರಬ-ಸಾಗರ ಮಾರ್ಗದ ಭದ್ರಾಪುರ-ಹೊಳೆಕೊಪ್ಪ ಮಧ್ಯದ ರಸ್ತೆ ಬದಿಯಲ್ಲಿ ಬೀಳುವಂತೆ ಇರುವಂತ ಅಕೇಶಿಯಾ ಮರಗಳನ್ನು ತೆರವುಗೊಳಿಸಲಿ. ಈ ಮೂಲಕ ವಾಹನ ಸವಾರರ ಪ್ರಾಣಹಾನಿಗೂ ಮುನ್ನವೇ ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
BIG NEWS : ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಉಚ್ಚಾಟನೆ ಮಾಡಲಾಗಿದೆ : ಬಿವೈ ವಿಜಯೇಂದ್ರ ಫಸ್ಟ್ ರಿಯಾಕ್ಷನ್