ಬೆಂಗಳೂರು: ಬಿಜೆಪಿಯ 18 ಶಾಸಕರನ್ನು ವಿಧಾನಸಭೆಯ ಕಲಾಪದಿಂದ 6 ತಿಂಗಳು ಅಮಾನತು ಮಾಡಿದ್ದಂತ ಆದೇಶವನ್ನು ಸ್ಪೀಕರ್ ಯು.ಟಿ ಖಾದರ್ ಅವರು ಹಿಂಪಡೆದಿದ್ದಾರೆ. ಈ ಸಂಬಂಧ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ. ಹಾಗಾದ್ರೇ ಯಾರನ್ನೆಲ್ಲ ಅಮಾನತುಗೊಳಿಸಲಾಗಿತ್ತು.? ಅಧಿಕೃತ ಆದೇಶದಲ್ಲಿ ಏನಿದೆ ಅಂತ ಮುಂದೆ ಓದಿ.
ಇಂದು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷಿಯವರು ಅಧಿಕೃತ ಆದೇಶ ಹೊರಡಿಸಿದ್ದು, ಕಳೆದ ಅಧಿವೇಶನದ ಅವಧಿಯಲ್ಲಿ ದಿನಾಂಕ: 21.03.2025ರಂದು ಸದನದಲ್ಲಿ ಪೀಠದ ಆದೇಶವನ್ನು ಲೆಕ್ಕಿಸದೇ ಸದನದ ಕಾರ್ಯಕಲಾಪಗಳಿಗೆ ಅಡ್ಡಿಯುಂಟು ಮಾಡುತ್ತಾ, ಅಶಿಸ್ತಿನಿಂದ ಹಾಗೂ ಅಗೌರವದಿಂದ ನಡೆದುಕೊಂಡಿದ್ದರಿಂದ ಮಾನ್ಯ ವಿಧಾನಸಭಾ ಸದಸ್ಯರುಗಳಾದಂತಹ ದೊಡ್ಡನಗೌಡ ಹೆಚ್. ಪಾಟೀಲ್, (ವಿರೋಧ ಪಕ್ಷದ ಮುಖ್ಯ ಸಚೇತಕರು), ಡಾ: ಅಶ್ವಥ್‌ನಾರಾಯಣ್ ಸಿ.ಎನ್.. ಎಸ್.ಆರ್. ವಿಶ್ವನಾಥ್, ಬಿ.ಎ. ಬಸವರಾಜ, ಎಂ.ಆರ್. ಪಾಟೀಲ್, ಚನ್ನಬಸಪ್ಪ (ಚೆನ್ನಿ), ಬಿ. ಸುರೇಶ್‌ಗೌಡ, ಉಮಾನಾಥ್ ಎ. ಕೋಟ್ಯಾನ್, ಶರಣು ಸಲಗರ, ಡಾ: ಶೈಲೇಂದ್ರ ಬೆಲ್ದಾಳೆ, ಸಿ.ಕೆ. ರಾಮಮೂರ್ತಿ, ಯಶಪಾಲ್ ಎ. ಸುವರ್ಣ, ಬಿ.ಪಿ. ಹರೀಶ್, ಡಾ: ಭರತ್‌ಶೆಟ್ಟಿ ವೈ., ಮುನಿರತ್ನ, ಬಸವರಾಜ್ ಮತ್ತಿಮೂಡ್, ಧೀರಜ್ ಮುನಿರಾಜು ಮತ್ತು ಡಾ: ಚಂದ್ರು ಲಮಾಣಿ ಅವರುಗಳನ್ನು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳ ನಿಯಮ 348ರ ಮೇರೆಗೆ ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮಂಡಿಸಿದ ಹಾಗೂ ಸದನವು ಅಂಗೀಕರಿಸಿದ ಪ್ರಸ್ತಾವದಂತೆ ತಕ್ಷಣದಿಂದ ಜಾರಿಗೆ ಬರುವಂತೆ 6 ತಿಂಗಳುಗಳ ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತ್ತುಗೊಳಿಸಿದ್ದ ನಿರ್ಣಯವನ್ನು ಹಿಂತೆಗೆದುಕೊಳ್ಳುವಂತೆ ವಿರೋಧ ಪಕ್ಷದ ನಾಯಕರು ಹಾಗೂ ಅಮಾನತ್ತುಗೊಂಡ ಸದಸ್ಯರು ಸಲ್ಲಿಸಿದ್ದ ಮನವಿಯನ್ನು ಮಾಡಿದ್ದರು ಎಂದಿದ್ದಾರೆ.
ದಿನಾಂಕ: 25.05.2025ರಂದು ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಯವರು, ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು, ಉಪ ಸಭಾಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರೊಂದಿಗೆ ಸನ್ಮಾನ್ಯ ಸಭಾಧ್ಯಕ್ಷರು ಸಭೆ ನಡೆಸಿರುತ್ತಾರೆ ಎಂದು ಹೇಳಿದ್ದಾರೆ.
ಸದರಿ ಸಭೆಯಲ್ಲಿ, ಅಮಾನತ್ತಿನ ಅವಧಿಯಲ್ಲಿ ಈಗಾಗಲೇ 2 ತಿಂಗಳು ಕಳೆದಿದ್ದು, ಸದರಿ ಅವಧಿಯಲ್ಲಿ ಅಮಾನತ್ತುಗೊಂಡಿರುವ ಸದಸ್ಯರುಗಳು ತಮ್ಮ ನಡೆಯ ಬಗ್ಗೆ ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದು ಹಾಗೂ ಇನ್ನುಮುಂದೆ ಸಂವಿಧಾನಾತ್ಮಕವಾಗಿ ಸದನದ ಕಾರ್ಯಕಲಾಪಗಳಲ್ಲಿ ಸಂಯಮದಿಂದ ನಡೆದುಕೊಳ್ಳುವುದಾಗಿ ತಿಳಿಸಿರುವುದನ್ನು ಪರಿಗಣಿಸಿ ಆಡಳಿತ ಪಕ್ಷದ ಶಾಸಕಾಂಗ ನಾಯಕರಾದ ಮಾನ್ಯ ಮುಖ್ಯಮಂತ್ರಿಯವರು, ಮಾನ್ಯ ಉಪ ಮುಖ್ಯಮಂತ್ರಿಯವರು, ಮಾನ್ಯ ವಿರೋಧ ಪಕ್ಷದ ನಾಯಕರು, ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಒಮ್ಮತ ಸೂಚಿಸಿದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮಾನ್ಯ ಸದಸ್ಯರುಗಳು ಸಂವಿಧಾನತ್ಮಕವಾಗಿ ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಅಮಾನತ್ತುಗೊಳಿಸಲಾಗಿರುವ ಮಾನ್ಯ ವಿಧಾನಸಭಾ ಸದಸ್ಯರುಗಳಾದಂತಹ ದೊಡ್ಡನಗೌಡ ಹೆಚ್. ಪಾಟೀಲ್, (ವಿರೋಧ ಪಕ್ಷದ ಮುಖ್ಯ ಸಚೇತಕರು), ಡಾ: ಅಶ್ವಥ್‌ನಾರಾಯಣ್ ಸಿ.ಎನ್., ಎಸ್.ಆರ್. ವಿಶ್ವನಾಥ್, ಬಿ.ಎ. ಬಸವರಾಜ, ಎಂ.ಆರ್. ಪಾಟೀಲ್, ಚನ್ನಬಸಪ್ಪ (ಚೆನ್ನಿ), ಬಿ. ಸುರೇಶ್‌ಗೌಡ, ಉಮಾನಾಥ್ ಎ. ಕೋಟ್ಯಾನ್, ಶರಣು ಸಲಗರ, ಡಾ: ಶೈಲೇಂದ್ರ ಬೆಲ್ದಾಳೆ, ಸಿ.ಕೆ. ರಾಮಮೂರ್ತಿ, ಯಶಪಾಲ್ ಎ. ಸುವರ್ಣ, ಬಿ.ಪಿ. ಹರೀಶ್, ಡಾ: ಭರತ್‌ಶೆಟ್ಟಿ ವೈ, ಮುನಿರತ್ನ, ಬಸವರಾಜ್ ಮತ್ತಿಮೂಡ್, ಧೀರಜ್ ಮುನಿರಾಜು ಮತ್ತು ಡಾ: ಚಂದ್ರು ಲಮಾಣಿ ಅವರುಗಳನ್ನು ಅಮಾನತ್ತುಗೊಳಿಸಲಾಗಿದ್ದ ನಿರ್ಣಯವನ್ನು ಹಿಂತೆಗೆದುಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಸದರಿಯವರುಗಳ ಅಮಾನತ್ತು ಅವಧಿಯಲ್ಲಿ ವಿಧಿಸಿದ್ದ ಈ ಕೆಳಕಂಡ ಪರಿಣಾಮಗಳು ತಕ್ಷಣದಿಂದ ರದ್ದುಗೊಳ್ಳುತ್ತವೆ:
1. ಅವರುಗಳು ವಿಧಾನಸಭೆಯ ಸಭಾಂಗಣ, ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸುವಂತಿಲ್ಲ.
2. ಅವರು ಸದಸ್ಯರಾಗಿರುವ ವಿಧಾನಮಂಡಲದ ವಿಧಾನ ಸಭೆಯ ಸ್ಥಾಯಿ ಸಮಿತಿಗಳ ಸಭೆಗಳಲ್ಲಿಯೂ ಭಾಗವಹಿಸುವಂತಿಲ್ಲ.
3. ವಿಧಾನ ಸಭೆಯ ಕಾರ್ಯಕಲಾಪಗಳ ಪಟ್ಟಿಯಲ್ಲಿ ಅವರುಗಳ ಹೆಸರಿನಲ್ಲಿ ಯಾವುದೇ ವಿಷಯವನ್ನು ನಮೂದು ಮಾಡತಕ್ಕದಲ್ಲ.
4. ಅಮಾನತ್ತಿನ ಅವಧಿಯಲ್ಲಿ ಅವರುಗಳು ನೀಡುವ ಯಾವುದೇ ಸೂಚನೆಗಳನ್ನು ಸ್ವೀಕರಿಸಲಾಗುವುದಿಲ್ಲ. 5. ಅಮಾನತ್ತಿನ ಅವಧಿಯಲ್ಲಿ ನಡೆಯುವ ಸಮಿತಿಗಳ ಚುನಾವಣೆಯಲ್ಲಿ ಅವರುಗಳು ಮತದಾನ ಮಾಡುವಂತಿಲ್ಲ.
6. ಅಮಾನತ್ತಿನ ಅವಧಿಯಲ್ಲಿ ಅವರುಗಳು ಯಾವುದೇ ದಿನಭತ್ಯೆಯನ್ನು ಪಡೆಯಲು ಅರ್ಹರಿರುವುದಿಲ್ಲ.
ಈ ಮೇಲ್ಕಂಡ ಅಮಾನತ್ತು ನಿರ್ಣಯವನ್ನು ಹಿಂಪಡೆದ ಬಗ್ಗೆ ಮುಂದಿನ ಅಧಿವೇಶನದಲ್ಲಿ ಸದನದ ಘಟನೋತ್ತರ ಅನುಮೋದನೆ ಪಡೆಯಲು ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ ಎಂದು ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ತಿಳಿಸಿದ್ದಾರೆ.