ಮೈಸೂರು : ಜಗತ್ತಿನಲ್ಲಿ ಹೆಣ್ಣಿಗಾಗಿ, ಹೊನ್ನಿಗಾಗಿ, ಮಣ್ಣಿಗಾಗಿ ಕ್ರಾಂತಿಗಳು ನಡೆದಿವೆ ಆದರೆ, ಸಮಾನತೆಗಾಗಿ, ಸಮಸಮಾಜದ ನಿರ್ಮಾಣಕ್ಕಾಗಿ ಕ್ರಾಂತಿ ನಡೆದಿದ್ದು ಕಲ್ಯಾಣದಲ್ಲಿ ಮಾತ್ರ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಮೈಸೂರು ಕಲಾಮಂದಿರದಲ್ಲಿಂದು ಆಯೋಜಿಸಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೌಢ್ಯ, ಅಸ್ಪೃಶ್ಯತೆ, ಶ್ರೇಣಿರಹಿತ, ಜಾತಿ ರಹಿತ ಸಮಾಜ ಬಸವಾದಿ ಶರಣರ ಕಲ್ಪನೆಯಾಗಿತ್ತು. 800 ವರ್ಷಗಳು ಕಳೆದರೂ ಅದು ಸಾಕಾರವಾಗಿಲ್ಲ ಎಂದರು.
ಮಹಿಳೆಯರಿಗೆ ಸಮಾನತೆ ನೀಡಿದ್ದೇ ಬಸವಾದಿ ಶರಣರು. ಅಕ್ಕನಿಗೆ ಮಹಾದೇವಿ ಎಂದು ಹೇಳುವ ಮೂಲಕ ಸರಿಸಮಾನವಾದ ಸ್ಥಾನ ಮಾನ ನೀಡಿದರು. ಮಹಿಳಾ ಸ್ವಾತಂತ್ರ್ಯ, ಮಹಿಳಾ ಸಮಾನತೆಗೆ 12ನೇ ಶತಮಾನದಲ್ಲೇ ನಾಂದಿ ಹಾಡಿದರು ಎಂದರು.
ವಚನಗಳಲ್ಲಿ ಎಲ್ಲಸಮಸ್ಯೆಗೂ ಪರಿಹಾರ:
ಇಂದು ಸಮಾಜದಲ್ಲಿನ ಎಲ್ಲ ಸಮಸ್ಯೆಗಳಿಗೂ ವಚನಗಳಲ್ಲಿ ಪರಿಹಾರವಿದೆ. ಇಂದು ಯುವಜನರು ಮದ್ಯ, ಮಾದಕವಸ್ತುಗಳ ದಾಸರಾಗುತ್ತಿದ್ದಾರೆ. ಇಂತಹ ಯುವಕರಿಗೆ ವಚನಗಳು ಮಾರ್ಗದರ್ಶನ ಮಾಡುತ್ತವೆ. ಸರಿದಾರಿಗೆ ತರುತ್ತವೆ ಎಂದರು.
ವೃತ್ತಿ ಗೌರವ ಅತಿ ಮುಖ್ಯ:
ಬಸವಾದಿ ಶರಣರು ಕಾಯಕವೇ ಕೈಲಾಸ ಎಂದು ಭಾವಿಸಿದ್ದರು. ಎಲ್ಲ ವೃತ್ತಿಗಳನ್ನೂ, ಎಲ್ಲ ರೀತಿಯ ವೃತ್ತಿ ಮಾಡುವವರನ್ನೂ ಸಮಾನವಾಗಿ ಕಾಣುತ್ತಿದ್ದರು. ಹೀಗಾಗಿಯೇ ಈಗ 700 ಕೋಟಿ ರೂಪಾಯಿ ವೆಚ್ಚದಲ್ಲಿ ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ಅನುಭವ ಮಂಟಪದಲ್ಲಿ ಎಲ್ಲ 770 ಅಮರಗಣಂಗಳ ವೃತ್ತಿಗೆ ಗೌರವ ನೀಡಿ, ಅವರ ವಚನಗಳನ್ನು ಕೆತ್ತಿಸಲಾಗುತ್ತಿದೆ. ಶರಣ ಗ್ರಾಮದಲ್ಲಿ ವೃತ್ತಿ ಗೌರವಕ್ಕೆ ಪ್ರತಿಷ್ಠೆ ತರುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಅನುಭವ ಮಂಟಪಕ್ಕೆ 120 ಕೋಟಿ ರೂ. ಬಿಡುಗಡೆ :
ಹಣಕಾಸು ಸಚಿವರೂ ಆದ ಸಿದ್ದರಾಮಯ್ಯನವರು ಆಧುನಿಕ ಅನುಭವ ಮಂಟಪ ನಿರ್ಮಾಣಕ್ಕೆ 120 ಕೋಟಿ ರೂ. ನೀಡಿದ್ದು, ಇನ್ನೂ 400 ಕೋಟಿ ರೂ. ವೆಚ್ಚದೊಂದಿಗೆ ಮುಂದಿನ ವರ್ಷದೊಳಗೆ ಅನುಭವ ಮಂಟಪ ಪೂರ್ಣಗೊಳಿಸುವುದು ತಮ್ಮ ಗುರಿಯಾಗಿದೆ ಎಂದರು.
ಇಂದು ಸಮಾಜ ದ್ವೇಷ, ಅಸೂಯೆಗಳಿಂದ ತುಂಬಿದೆ, ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ಒಳಕು ಮೂಡಿಸಿ ಸ್ವಾರ್ಥ ಸಾಧನೆಗೆ ಕೆಲವರು ಪ್ರಯತ್ನಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಸಮಾಜವನ್ನು ಒಗ್ಗೂಡಿಸುವ ಅಗತ್ಯವಿದ್ದು, ಅದಕ್ಕೆ ಬಸವಾದಿ ಶರಣರ ತತ್ವಾದರ್ಶಗಳ ಪಾಲನೆ ಪರಿಹಾರವಾಗುತ್ತದೆ ಎಂದರು.
ಸಮಾಜ ತಮಗೆ ಎಲ್ಲವನ್ನೂ ನೀಡಿದ್ದು, ಸಮಾಜಕ್ಕೆ ತಾವು ಕೂಡ ಏನಾದರೂ ನೀಡಬೇಕು ಎಂಬುದು ತಮ್ಮ ತಂದೆಯಿಂದ ಕಲಿತ ಪಾಠವಾಗಿದ್ದು, ತಾವು ವೀರಶೈವ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ತಾವು ಸಮಾಜದ ಕಾರ್ಯಕ್ಕೆ ಸಮಯ ಮೀಸಲಿಟ್ಟಿರುವುದಾಗಿ ಹೇಳಿದರು.
ಮಲೆ ಮಹದೇಶ್ವರ ಬೆಟ್ಟದ ಸ್ಮೃತಿ ವನಕ್ಕೆ 1 ಕೋಟಿ ರೂ. :
ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಪೀಠಾಧ್ಯಕ್ಷರ ಮನವಿಗೆ ಸರ್ಕಾರ ಸ್ಪಂದಿಸಿದ್ದು, ಬೆಟ್ಟದಲ್ಲಿ ಸ್ಮೃತಿವನ ನಿರ್ಮಾಣಕ್ಕಾಗಿ 1 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಈಶ್ವರ ಖಂಡ್ರೆ ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕರುಗಳಾದ ಬಿ.ವೈ. ವಿಜಯೇಂದ್ರ, ಶ್ರೀವತ್ಸ ಸಂಸತ್ ಸದಸ್ಯ ಯಧುವೀರ ಒಡೆಯರ್ ಹಾಗೂ ಹರಚರ ಗುರುಮೂರ್ತಿಗಳು ಪಾಲ್ಗೊಂಡಿದ್ದರು.
BREAKING: ಭಾರಿ ಮಳೆಯಿಂದ ಕುಸಿದು ಬಿದ್ದ ಅಂಗಡಿಯ ಗೋಡೆ: ನಾಲ್ವರಿಗೆ ಗಂಭೀರ ಗಾಯ