ರಾಮನಗರ : ರಾಜ್ಯ ಸರ್ಕಾರದ ಇ-ಸ್ವತ್ತು ಸಾಫ್ಟ್ ವೇರ್ ಹ್ಯಾಕ್ ಮಾಡಿ 500 ಕ್ಕೂ ಹೆಚ್ಚು ಇ-ಸ್ವತ್ತು ದಾಖಲೆಗಳ ತಿದ್ದುಪಡಿ ಮಾಡಿದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಾಮನಗರ ಪೊಲೀಸರು ಶರತ್, ನದೀಮ್ ಹಾಗೂ ದೀಪಕ್ ಎಂಬುವರನ್ನು ಬಂಧಿಸಿದ್ದಾರೆ. ಜನರ ಅಗತ್ಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಳೆದ ಮಾರ್ಚ್ ನಲ್ಲಿ ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ತಂತ್ರಾಂಶದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ, ದಾಖಲಾತಿಗಳನ್ನು ತಿದ್ದುಪಡಿ ಮಾಡುತ್ತಿದ್ದ ಮೂವರ ತಂಡವನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.
ಇ-ಸ್ವತ್ತು ರಾಜ್ಯ ಸರ್ಕಾರ ಅಭಿವೃದ್ಧಿಪಡಿಸಿರುವ ಸಾಫ್ಟ್ ವೇರ್ ಆಗಿದ್ದು, ಹಳ್ಳಿಗಳಲ್ಲಿ ಆಸ್ತಿ ವಂಚನೆಯನ್ನು ಕಡಿಮೆ ಮಾಡಲು ಮತ್ತು ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲು ಉದ್ದೇಶವನ್ನು ಹೊಂದಿದೆ.