ಬೆಂಗಳೂರು : ಅಬಕಾರಿ ಸನ್ನದುಗಳ ನವೀಕರಣ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಲು ಮುಂದಾಗಿರುವ ಸರ್ಕಾರದ ಪ್ರಸ್ತಾವ ವಿರೋಧಿಸಿ ಮದ್ಯ ಮಾರಾಟಗಾರರು ಮೇ. 29 ರಿಂದ ಕರ್ನಾಟಕದಾದ್ಯಂತ ಮದ್ಯದಂಗಂಡಿ ಬಂದ್ ಮಾಡಲು ರಾಜ್ಯದ ಮದ್ಯ ಮಾರಾಟಗಾರರು ತೀರ್ಮಾನ ಮಾಡಿದ್ದಾರೆ.
ರಾಜ್ಯ ಸರ್ಕಾರವು ಮೂರು ಬಾರಿ ಮದ್ಯದ ದರ ಏರಿಕೆ ಮಾಡಿದೆ. ಇದರಿಂದ ಹಿಂದಿನ ರೀತಿಯಲ್ಲಿ ಮದ್ಯ ಮಾರಾಟ ಆಗುತ್ತಿಲ್ಲ. ಇದೇ ಸಂದರ್ಭದಲ್ಲಿ ಮದ್ಯ ಮಾರಾಟಗಾರರ ಲೈಸೆನ್ಸ್ ಶುಲ್ಕ ದುಪ್ಪಟ್ಟು ಏರಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ, ಮದ್ಯ ಮಾರಾಟಗಾರರ ಸಂಘ ಸಭೆ ಕರೆದು ಸಮಾಲೋಚನೆ ನಡೆಸಿದೆ. ಮದ್ಯ ಮಾರಾಟಗಾರರು ಈ ತಿಂಗಳು 29 ರಿಂದ ಬಾರ್ ಆ್ಯಂಡ್ ರೆಸ್ಟೋರೆಂಟ್, ವೈನ್ ಸ್ಟೋರ್ ಕ್ಲೋಸ್ ಮಾಡಲು ತೀರ್ಮಾನ ಮಾಡಿದ್ದಾರೆ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘದ ಉಪಾಧ್ಯಕ್ಷ ಕರುಣಾಕರ್ ಹೆಗ್ಡೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಜುಲೈನಿಂದ ಅಬಕಾರಿ ವರ್ಷ ಆರಂಭವಾಗಲಿದ್ದು, ಆಗ ರಾಜ್ಯದ ಎಲ್ಲಾ 13 ಸಾವಿರಕ್ಕೂ ಅಧಿಕ ಅಬಕಾರಿ ಸನ್ನದುದಾರರು ತಮ್ಮ ಲೈಸೆನ್ಸ್ ನವೀಕರಿಸಿಕೊಳ್ಳಬೇಕಿದೆ. ಇದನ್ನು ಗಮನಿಸಿಯೇ ಸರ್ಕಾರ ನಗರ ಮತ್ತು ಗ್ರಾಮೀಣ ಪ್ರದೇಶದ ಎಲ್ಲಾ ಲೈಸೆನ್ಸ್ ಗಳ ಶುಲ್ಕದಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಲು ಕರಡು ಅಧಿಸೂಚನೆ ಹೊರಡಿಸಿದೆ.
ಮೇ.26 ರಂದು ಮದ್ಯ ಮಾರಾಟಗಾರರ ಸಂಘದ ಜೊತೆಗೆ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ವೇಳೆ ಮದ್ಯ ಮಾರಾಟಗಾರರ ಬೇಡಿಕೆಗಳನ್ನು ಈಡೇರಿಸಲಿಲ್ಲ ಅಂದರೆ 29 ರಿಂದ ನಿರಂತರವಾಗಿ ಮದ್ಯದ ಅಂಗಡಿಗಳನ್ನು ಕ್ಲೋಸ್ ಮಾಡಲು ರಾಜ್ಯ ಮದ್ಯ ಮಾರಾಟಗಾರರು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.