ಮಂಡ್ಯ : ಪ್ರಸಕ್ತ ಸಾಲಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದ, ಮದ್ದೂರು ಪಟ್ಟಣದ ಶಿವಪುರದ ಪೂರ್ಣಪ್ರಜ್ಞಾ ಶಾಲೆಯ ಸಿ.ಪುನೀತ ಮರು ಮೌಲ್ಯಮಾಪನದಲ್ಲಿ ಒಂದು ಅಂಕ ಹೆಚ್ಚು ಗಳಿಸುವುದರೊಂದಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾಳೆ.
ಮದ್ದೂರು ಪಟ್ಟಣದ ಶಿವಪುರದ ಪೂರ್ಣ ಶಾಲೆಯಲ್ಲಿ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದ ಸಿ.ಪುನೀತಾ ಕಡಿಮೆ ಅಂಕ ಬಂದಿದೆ ಎಂದು ವಿಚಲಿತರಾಗಿದ್ದರು. ಹೀಗಾಗಿ ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರು ಇನ್ನೂ ಹೆಚ್ಚಿನ ಅಂಕ ಬರಬೇಕೆಂದು ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು.
ಮರು ಮೌಲ್ಯಮಾಪನ ಮಾಡಿಸಿದ ಪರಿಣಾಮ ಸಮಾಜ ವಿಜ್ಞಾನ ವಿಷಯದಲ್ಲಿ 1 ಅಂಕಗಳು ಲಭಿಸಿದ್ದು, ಈ ಮೂಲಕ 625 ಕ್ಕೆ 625 ಅಂಕಗಳನ್ನು ಪಡೆದುಕೊಂಡು ರಾಜ್ಯಕ್ಕೆ ಪ್ರಥಮ ಸ್ಥಾನ, ಜಿಲ್ಲೆಗೆ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ ಪ್ರಶಂಸೆ ವ್ಯಕ್ತಪಡಿಸಿದರು.
ಕಳೆದ 2020 – 21 ನೇ ಸಾಲಿನಲ್ಲಿ ಇದೇ ಶಾಲೆಯ ಮಹಮದ್ ಸುಲೇಮಾನ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಈ ವರ್ಷವೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಹಾಗೂ ಉತ್ತಮ ಫಲಿತಾಂಶಕ್ಕೆ ಶ್ರಮಿಸಿದ ಶಿಕ್ಷಕ ವೃಂದದವರಿಗೆ ಇದೇ ವೇಳೆ ಸನ್ಮಾನಿಸಲಾಯಿತು.
ಈ ಮೂಲಕ ಶಾಲೆಗೆ ಕೀರ್ತಿ ತಂದ ಸಿ.ಪುನೀತಾ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ, ಸಂಸ್ಥಾಪಕ ಅಧ್ಯಕ್ಷರಾದ ಕಸ್ತೂರಿ ಅನಂತೇಗೌಡ, ಮುಖ್ಯ ಶಿಕ್ಷಕ ಅನಂತೇಗೌಡ, ಇಸಿಓ ಲೋಕೇಶ್ ಹಾಗೂ ಪೂರ್ಣ ಪ್ರಜ್ಞಾ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಅಭಿನಂದಿಸಿತು.
ವರದಿ : ಗಿರೀಶ್ ರಾಜ್, ಮಂಡ್ಯ
ಉದ್ಯೋಗವಾರ್ತೆ: 51,000 ಅತಿಥಿ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರದಿಂದ ಆದೇಶ , ಇಲ್ಲಿದೆ ಸಂಪೂರ್ಣ ಮಾಹಿತಿ..!