ಬೆಂಗಳೂರು: ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ವರದಿ ಸಿದ್ಧವಾಗಿದ್ದು 2025-26ನೇ ಶೈಕ್ಷಣಿಕ ಸಾಲಿನಿಂದ ಉನ್ನತ ಶಿಕ್ಷಣದಲ್ಲಿ ಜಾರಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಶೀಘ್ರವೇ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ಎಸ್‌ಇಪಿ ಕರಡು ರಚನಾ ಸಮಿತಿ ನೀಡಿರುವ ಮಧ್ಯಂತರ ವರದಿ ಹಿನ್ನೆಲೆಯಲ್ಲಿ 2024-25ನೇ ಸಾಲಿನಿಂದಲೇ ಎನ್‌ಇಪಿ ಅಡಿ 4 ವರ್ಷಗಳಿಗೆ ಹೆಚ್ಚಿಸಲಾಗಿದ್ದ ಪದವಿ ವ್ಯಾಸಂಗದ ಅವಧಿಯನ್ನು ಮರಳಿ 3 ವರ್ಷಗಳಿಗೆ ಇಳಿಸಲಾಗಿದೆ. ಇದೀಗ ಇಂಗ್ಲೀಷ್‌ನಲ್ಲಿರುವ ಅಂತಿಮ ವರದಿಯನ್ನು ಕನ್ನಡಕ್ಕೆ ಭಾಷಾಂತರಿಸುವ ಪ್ರಕ್ರಿಯೆ ಬಹುತೇಕ ಅಂತಿಮ ಹಂತದಲ್ಲಿದ್ದು ಈ ತಿಂಗಳ ಕೊನೆಯ ವಾರದಲ್ಲಿ ರಾಜ್ಯ ಶಿಕ್ಷಣ ನೀತಿ ಆಯೋಗ ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ನಿರೀಕ್ಷೆಯಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಅವರು, ರಾಜ್ಯ ಶಿಕ್ಷಣ ನೀತಿ ಸಿದ್ದವಾಗಿದ್ದು 2025-26ರನೇ ಸಾಲಿನಿಂದ ಜಾರಿಗೆ ಚಿಂತನೆ ನಡೆದಿ ದೆ. ಮೇ 25ರಂದು ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.