ಬೆಂಗಳೂರು : ಕಡ್ಡಾಯವಾಗಿ ಗ್ರಾಮೀಣ ಸೇವೆ ಸಲ್ಲಿಸದ ಹಾಗೂ 50 ವರ್ಷ ಮೀರದ ವೈದ್ಯಾಧಿಕಾರಿಗಳು ಹಾಗೂ ಇತರ ಸಿಬ್ಬಂದಿಯನ್ನು ಗುರುತಿಸಿ ತಕ್ಷಣವೇ ಗ್ರಾಮೀಣ ಪ್ರದೇಶದ ಸೇವೆಗೆ ವರ್ಗಾವಣೆ ಮಾಡಬೇಕೆಂದು ರಾಜ್ಯ ಸರ್ಕಾರ
ಮಹತ್ವದ ಆದೇಶ ಹೊರಡಿಸಿದೆ.
ಆರೋಗ್ಯ ಇಲಾಖೆಯ ಆದೇಶದ ಪ್ರಕಾರ, ಕನಿಷ್ಠ ಮೂರು ವರ್ಷ ಗ್ರೂಪ್ ‘ಎ’ ಹುದ್ದೆಯಲ್ಲಿ, ಕನಿಷ್ಠ ನಾಲ್ಕು ವರ್ಷ ಗ್ರೂಪ್ ‘ಬಿ’ ಹುದ್ದೆಯಲ್ಲಿ, ಗ್ರೂಪ್ ‘ಸಿ’ ಹುದ್ದೆಯಲ್ಲಿ ಕನಿಷ್ಠ ಐದು ವರ್ಷ ಹಾಗೂ ಗ್ರೂಪ್ ‘ಡಿ’ ಹುದ್ದೆಯಲ್ಲಿ ಕನಿಷ್ಠ 7 ವರ್ಷ ನಿರಂತರ ಸೇವೆಯನ್ನು ಸರಕಾರಿ ಆಸ್ಪತ್ರೆ ಮತ್ತು ಸರಕಾರಿ ಸಂಸ್ಥೆಯಲ್ಲಿ ಸಲ್ಲಿಸಿದ ಒಬ್ಬ ವೈದ್ಯಾಧಿಕಾರಿ ಅಥವಾ ಇತರ ಸಿಬ್ಬಂದಿಯನ್ನು ಅದೇ ಪ್ರದೇಶ ಅಥವಾ ವಲಯ, ಇತರ ವಲಯ ಅಥವಾ ಪ್ರದೇಶದ ಸರಕಾರಿ ಆಸ್ಪತ್ರೆ ಅಥವಾ ಸಂಸ್ಥೆಗೆ ವರ್ಗಾವಣೆ ಮಾಡಬಹುದು ಎಂದು ತಿಳಿಸಿದೆ.
ಅಲ್ಲದೆ, ವಿಶೇಷ ತಜ್ಞರು ಮತ್ತು ಹಿರಿಯ ವಿಶೇಷ ತಜ್ಞರು ಅವರ ವಿಶೇಷ ವಿದ್ಯಾರ್ಹತೆಗೆ ಗೊತ್ತುಪಡಿಸದ ಹುದ್ದೆಗಳಲ್ಲಿ ಕಾರ್ಯನಿರ್ವಸುತ್ತಿದ್ದಲ್ಲಿ ಅವರ ಸೇವೆಯನ್ನು ಕೂಡಲೇ ಹಿಂಪಡೆದು ವಿಶೇಷ ವಿದ್ಯಾರ್ಹತೆಗೆ ಗೊತ್ತುಪಡಿಸಿದ ಹುದ್ದೆಗಳಿಗೆ ವರ್ಗಾವಣೆ ಮಾಡಬೇಕು ಎಂದು ಸೂಚಿಸಲಾಗಿದೆ. ಗಣಕೀಕೃತ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ಮಾಡಬೇಕು. ಗಂಭೀರ ಕಾಯಿಲೆ ಹೊಂದಿರುವ ಸಿಬ್ಬಂದಿ, ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಇರುವ ಗರ್ಭಿಣಿ ಅಥವಾ ಮಹಿಳಾ ವೈದ್ಯಾಧಿಕಾರಿ ಅಥವಾ ಸಿಬ್ಬಂದಿ, 2 ವರ್ಷಗಳ ಒಳಗೆ ವಯೋನಿವೃತ್ತಿಯಾಗಲಿರುವ ಸಿಬ್ಬಂದಿ ವಿನಾಯಿತಿ ನೀಡಲಾಗಿದೆ.