ಚಿತ್ರದುರ್ಗ : ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಟ್ರ್ಯಾಕ್ಟರ್ ಮಧ್ಯೆ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಹೊಳಲ್ಕರೆ ಮೂಲದವರು ಎಂದು ಗುರುತಿಸಲಾಗಿದ್ದು, ಈ ಪೈಕಿ ಪುಟಾಣಿ ಕಂದಮ್ಮ ಸೇರಿ ಇಬ್ಬರು ಮಕ್ಕಳು ಕೂಡ ಮೃತಪಟ್ಟಿವೆ.ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಕೂಡಲೇ ಹೊಳಲ್ಕೆರೆ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ.
ಅರೇಹಳ್ಳಿಯ ಉದ್ಯಮಿ ಯಶವಂತ್ ಅವರ ಪತ್ನಿ ಕಾವ್ಯಾ (30), ಅತ್ತೆ ಗಂಗಮ್ಮ (50) ಹಾಗೂ ಪುತ್ರಿಯರಾದ ಹನ್ಸಿಕಾ (4), ಮನಸ್ವಿ (2) ಮೃತ ದುರ್ದೈವಿಗಳು. ಯಶವಂತ್ ಹಾಗೂ ಕುಟುಂಬ ಸದಸ್ಯರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರು-ಟ್ರ್ಯಾಕ್ಟರ್ ನಡುವೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಚಿತ್ರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಸ್ಥಳಕ್ಕೆ ಎಸ್ಪಿ ರಂಜಿತ್ ಕುಮಾರ್ ಬಂಡಾರು, ಡಿವೈಎಸ್ಪಿ ದಿನಕರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.