ವಿಜಯಪುರ: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹತ್ತು ಮಹಾನಗರ ಪಾಲಿಕೆಗಳಿಗೆ ಕಾಂಗ್ರೆಸ್ ಸರ್ಕಾರ ತಲಾ 200 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ವಿಜಯಪುರದಲ್ಲಿ ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಹಾನಗರ ಪಾಲಿಕೆಗಳ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿಗೆಂದು ಒಟ್ಟು 2000 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ ಎಂದು ತಿಳಿಸಿದರು.
ವಿಜಯಪುರ ನಗರದ ಚಿತ್ರಣವನ್ನು ಬದಲಿಸಲು ಯೋಜನೆಗಳನ್ನು ರೂಪಿಸಲಾಗಿದ್ದು, ಅಭಿವೃದ್ಧಿಗೆ ಪೂರಕವಾದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಸಾಧಕ-ಭಾದಕಗಳನ್ನು ನೋಡಿಕೊಂಡು ಖಾಸಗಿ ಜಮೀನನ್ನು ಖರೀದಿಸಿ ನಾಗರಿಕರಿಗೆ ಹೊಸ ಬಡಾವಣೆ ನಿರ್ಮಾಣ ಮಾಡುವತ್ತ ಗಮನಹರಿಸಬೇಕು ಮತ್ತು ಇದಕ್ಕೆ ಕ್ರಿಯಾಯೋಜನೆಯನ್ನು ಸಿದ್ಧಪಡಿಸಬೇಕೆಂದು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಾಕಿ ಇರುವ ಯೋಜನೆಗಳನ್ನು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಪರಿಶೀಲಿಸುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಬೇಕು ಎಂದು ಆದೇಶ ನೀಡಿದರು.
ಪ್ರತಿ ವಾರ್ಡಿಗೆ 4 ಕೋಟಿ ರೂಪಾಯಿ
ಇದೇ ಮೊದಲ ಬಾರಿಗೆ ವಿಜಯಪುರದ ಎಲ್ಲಾ ವಾರ್ಡ್‍ಗಳಿಗೆ ತಲಾ 4 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಹಾಗೂ ನಾಮನಿರ್ದೇಶಿತ ಸದಸ್ಯರಿಗೂ ಅನುದಾನ ಬಿಡುಗಡೆ ಮಾಡಬೇಕೆಂದು ಆದೇಶ ನೀಡಿದ ಸಚಿವರು, ಯಾವುದೇ ವಿಳಂಬವಿಲ್ಲದೇ ಪ್ರತಿ ವಾರ್ಡ್‍ಗಳಲ್ಲಿಯೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಹೇಳಿದರು.
ನೀರಿನ ಸಮಸ್ಯೆ ಪರಿಹರಿಸಿ
ಕೆಲವು ಕಾರ್ಪೋರೇಟರ್ ಗಳು ಕುಡಿಯುವ ನೀರಿನ ಸಮಸ್ಯೆ ಇದೆ. ಹದಿನೈದು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮನವಿ ಮಾಡಿದರು.
ಇದಕ್ಕೆ ಸ್ಥಳದಲ್ಲೇ ಪ್ರತಿಕ್ರಿಯೆ ನೀಡಿದ ಸಚಿವರು, ತಕ್ಷಣವೇ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರದಿಂದ ಬಿಡುಗಡೆಯಾಗಿರುವ ಹಣವನ್ನು ವೆಚ್ಚಮಾಡದೇ ಉಳಿಸಿಕೊಂಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಕೂಡಲೇ ನಗರಾಭಿವೃದ್ಧಿ ವ್ಯಾಪ್ತಿಗೆ ಬರುವ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಸಮನಾಗಿ ಅನುದಾನವನ್ನು ಹಂಚಿಕೆ ಮಾಡಿ ರಸ್ತೆ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕೆಂದು ಸೂಚಿಸಿದರು.
ಲಂಚಕ್ಕೆ ಬೇಡಿಕೆ ಇಟ್ಟರೆ ಕೂಡಲೇ ಸಸ್ಪೆಂಡ್
ಖಾತೆ ಸೇರಿದಂತೆ ಇನ್ನಿತರೆ ದಾಖಲಾತಿ ಮತ್ತು ನೋಂದಣಿ ಮಾಡಿಕೊಡಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪವನ್ನು ಆಲಿಸಿದ ಸಚಿವ ಬೈರತಿ ಸುರೇಶ್ ಅವರು, ಯಾವುದೇ ಕಾರಣಕ್ಕೂ ಇಂತಹ ಪ್ರಕರಣಗಳನ್ನು ಸಹಿಸುವುದಿಲ್ಲ. ಯಾವ ಅಧಿಕಾರಿ ಅಥವಾ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟರೆ ಅಂತಹವರನ್ನು ಕೂಡಲೇ ಸಸ್ಪೆಂಡ್ ಮಾಡುವ ಕೆಲಸವನ್ನು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಪಿಎದಾರರಿಗೂ ಬಿ-ಖಾತಾ
ಬಿ-ಖಾತಾ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕೆಲವು ಕಾರ್ಪೋರೇಟರ್ ಗಳಿಗೆ ಸಮಜಾಯಿಷಿ ನೀಡಿದ ಸಚಿವರು, ಜಿಪಿಎ ಅಥವಾ ಅಗ್ರೀಮೆಂಟ್ ಹೊಂದಿದವರಿಗೂ ಬಿ-ಖಾತಾ ಮಾಡಿಕೊಡಲಾಗುತ್ತದೆ. ಈ ಸಂಬಂಧ ಕಾನೂನು ಇಲಾಖೆಯ ಅಭಿಪ್ರಾಯವನ್ನೂ ಪಡೆಯಲಾಗಿದೆ ಎಂದೂ ತಿಳಿಸಿದರು.
ಕ್ರಿಮಿನಲ್ ಕೇಸ್
ವಿಜಯಪುರದಲ್ಲಿ ಇರುವ ಸರ್ಕಾರಕ್ಕೆ ಸೇರಿದ ಖಾಲಿ ಜಾಗಕ್ಕೆ ಕೂಡಲೇ ಫೆನ್ಸಿಂಗ್ ಅಳವಡಿಸಬೇಕು. ಒಂದು ವೇಳೆ ಸರ್ಕಾರಕ್ಕೆ ಸೇರಿದ ಒಂದಿಂಚು ಜಾಗ ಖಾಸಗಿಯವರಿಂದ ಒತ್ತುವರಿಯಾದರೆ ಒತ್ತುವರಿ ಮಾಡಿಕೊಂಡ ಮತ್ತು ಅದಕ್ಕೆ ಕುಮ್ಮಕ್ಕು ನೀಡಿದ ಸರ್ಕಾರಿ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.