ಬೆಂಗಳೂರು : ಸಾರ್ವಜನಿಕರು ಪೊಲೀಸ್ ಠಾಣೆಗೆ ಬಂದಾಗ ಅವರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವ ಕುರಿತು ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಮಾನ್ಯ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಆದೇಶದಲ್ಲಿ ಹೆಚ್ಆರ್ಸಿ ಸಂಖ್ಯೆ: 2313/10/31/2023(ಬಿ-2)ಕ್ಕೆ ಸಂಬಂಧಿಸಿದಂತೆ, ಮಾನ್ಯ ಆಯೋಗವು ಯಾವುದೇ ಸಾರ್ವಜನಿಕರು ಠಾಣೆಗೆ ಬಂದಾಗ, ಅವರ ಜೊತೆ ಅನುಚಿತವಾಗಿ ವರ್ತಿಸದಂತೆ, ಹಾಗೂ ಅವರ ಮಾನವ ಹಕ್ಕುಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುವಂತೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಬೇಕೆಂದು ಆದೇಶಿಸಲಾಗಿರುತ್ತದೆ. (ಪ್ರತ ಲಗತ್ತಿಸಿದೆ) ಆದ್ದರಿಂದ, ಮಾನ್ಯ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಆದೇಶದಂತೆ ಇನ್ನು ಮುಂದೆ ಯಾವುದೇ ಸಾರ್ವಜನಿಕರು ಪೊಲೀಸ್ ಠಾಣೆಗೆ ಬೇಟಿ ನೀಡಿದಾಗ ಅವರ ಜೊತೆ ಅನುಚಿತವಾಗಿ ವರ್ತಿಸದಂತೆ, ಹಾಗೂ ಅವರ ಮಾನವ ಹಕ್ಕುಗಳಿಗೆ ಧಕ್ಕೆಯಾಗದಂತೆ ಸೌಜನ್ಯದಿಂದ ನಡೆದುಕೊಳ್ಳುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ಯೋಗೇಶ್ ಗೌಡ ಎನ್ನುವವರು, ಈ ಆಯೋಗಕ್ಕೆ, ದೂರು ಸಲ್ಲಿಸಿ, ಆ ದೂರಿನಲ್ಲಿ, Grievance ಂಗಳೂರಿನ, ಬಸವನಗುಡಿ ಪೊಲೀಸ್ ಠಾಣೆಯ ಸಿಪಿಐ ಸುಬ್ರಹ್ಮಣ್ಯ ರವರು, ಅಧಿಕಾರ ದುರುಪಯೋಗ ಪಡಿಸಿಕೊಂಡು, ದೂರುದಾರರಿಗೆ ಹಾಗೂ ಅವರ ಸ್ನೇಹಿತೆ ಕುಮಾರಿ ವಿನುತಾ ರವರಿಗೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಅನುಚಿತವಾಗಿ ವರ್ತಿಸಿ, ಸುಳ್ಳು ಪ್ರಕರಣ ದಾಖಲಿಸುವ ಬೆದರಿಕೆ ಹಾಕಿ, ರೂ.2,00,000/- ಲಂಚದ ಹಣ ಕೇಳಿದ್ದಾರೆಂದು ಆರೋಪಿಸಿ, ಅವರ ಮೇಲೆ, ಸೂಕ್ತ ಕ್ರಮ ಕೈಗೊಳ್ಳಲು, ವಿನಂತಿಸಿಕೊಂಡಿರುತ್ತಾರೆ.
ಸದರಿ ದೂರನ್ನು ದಾಖಲು ಮಾಡಿಕೊಂಡ ನಂತರ, ದೂರಿನ ಪ್ರತಿಯನ್ನು, ಪೊಲೀಸ್ ಮಹಾನಿರೀಕ್ಷಕರು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಬೆಂಗಳೂರು ಇವರಿಗೆ ಕಳುಹಿಸಿ, ಸದರಿಯವರು, ಆಯೋಗದ ಪೊಲೀಸ್ ಉಪಾಧೀಕ್ಷಕರ ಮೂಲಕ, ದೂರಿನ ಬಗ್ಗೆ ವಿಚಾರಣೆ ನಡೆಸಿ, ವರದಿಯನ್ನು ಸಲ್ಲಿಸುವಂತೆ, ಆದೇಶ ಮಾಡಲಾಗಿತ್ತು. ಆ ಪ್ರಕಾರ, ಪೊಲೀಸ್ ಮಹಾನಿರೀಕ್ಷಕರು, ಕರಾಮಾಹ ಆಯೋಗ, ಬೆಂಗಳೂರು ರವರು, ಆಯೋಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಸುಧೀರ್ ಎಂ ಹೆಗಡೆ ಇವರಿಂದ ದೂರರ್ಜಿ ಬಗ್ಗೆ, ವಿಚಾರಣೆ ಮಾಡಿಸಿ, ವರದಿ ಪಡೆದುಕೊಂಡು, ತಮ್ಮ ಅಭಿಪ್ರಾಯ ವರದಿಯನ್ನು, ಆಯೋಗಕ್ಕೆ ಸಲ್ಲಿಸಿರುತ್ತಾರೆ. ಸದರಿ ವರದಿಯನ್ನು ಗಮನಿಸಲಾಗಿ, ಆಯೋಗದ ಪೊಲೀಸ್ ಉಪಾಧೀಕ್ಷಕರವರು ದೂರುದಾರರು ಹಾಗೂ ಕುಮಾರಿ ವಿನುತಾ ರವರ, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರ ವಿಚಾರಣಾ ಹೇಳಿಕೆಗಳನ್ನು ಪಡೆದುಕೊಂಡದ್ದು, ಕಂಡುಬರುತ್ತದೆ. ಬಸವನಗುಡಿ ಪೊಲೀಸ್ ಠಾಣೆಯ ದಾಖಲೆಗಳನ್ನು ಸಹ, ಪರಿಶೀಲಿಸಿದ್ದು, ಕಂಡುಬರುತ್ತದೆ. ಬಸವನಗುಡಿ ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ದೂರುದಾರರನ್ನು ದಿ.6.7.2023ರಂದು ಪೊಲೀಸ್ ಸಿಬ್ಬಂದಿಯವರು ಠಾಣೆಗೆ ಕರೆದುಕೊಂಡು ಬಂದು ಕೂರಿಸಿದ್ದು, ಹಾಗೂ ಅವರ ಕಾರಿನ ಕೀ ಪಡೆದು, ಎಸ್ ಹೆಚ್ಓ ಇವರಿಗೆ ಕೊಟ್ಟಿರುವುದು ಕಂಡುಬಂದಿರುತ್ತದೆಂದು, ವರದಿ ಮಾಡಿರುತ್ತಾರೆ. ಆ ದಿನ ರಾತ್ರಿ 23.10 ಗಂಟೆಗೆ, ದೂರುದಾರರ ಹತ್ತಿರವಿರುವ, ಏರ್ಗನ್ ಅನ್ನು ಪಡೆದು, ಅವರಿಗೆ ನೋಟೀಸ್ ನೀಡಿ, ಠಾಣೆಯಿಂದ ಕಳುಹಿಸಿಕೊಟ್ಟಿರುವುದು ಕಂಡುಬರುತ್ತದೆಂದು, ವರದಿ ಮಾಡಿರುತ್ತಾರೆ. ಆ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿ, ದಿ.7.7.2023 ಅಂದರೆ, ಮರು ದಿನ ಬೆಳಿಗೆ 11.57 ಗಂಟೆಗೆ, ದೂರುದಾರರು, ಪೊಲೀಸ್ ಇನ್ಸ್ಪೆಕ್ಟರ್ ಸುಬ್ರಹ್ಮಣ್ಯಸ್ವಾಮಿ ರವರ ಕೊಠಡಿಗೆ ಬಂದಿದ್ದು, ಅವರು ಕುರ್ಚಿಯಲ್ಲಿ ಕೂರಲು ಮುಂದಾದಾಗ, ಅವರಿಗೆ ಕೂರದಂತೆ ತಿಳಿಸಿರುವುದು, ಹಾಗೂ ಅವರ ಜೊತೆ, ಮಾತುಕತೆ ಮಾಡಿರುವುದು ಕಂಡುಬಂದಿರುತ್ತದೆಂದು, ವರದಿ ಮಾಡಿರುತ್ತಾರೆ. ಅದೇ ದಿನ ಮಧ್ಯಾಹ್ನ 12.01 ಗಂಟೆಗೆ, ಯೋಗೇಶ್ ರವರು ಪೊಲೀಸ್ ಇನ್ಸ್ಪೆಕ್ಟರ್ ಇವರಿಗೆ ಮನವಿ ಮಾಡುತ್ತಿರುವುದು, ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ರವರು, ಅದಕ್ಕೆ ಸ್ಪಂದನೆ ಮಾಡದೇ ಇರುವುದು, ಸಿಸಿಟಿವಿ ದೃಶ್ಯಾವಳಿಗಳಿಂದ ಕಂಡುಬಂದಿರುತ್ತದೆಂದು, ವರದಿ ಮಾಡಿರುತ್ತಾರೆ. ಮುಂದುವರೆದು, ಪಿಎಸ್ಐ ಹರಿಪ್ರಸಾದ್ ಹಾಗೂ ಪರಿಮಳ ರಾವ್ ರವರು ತಮ್ಮ ಹೇಳಿಕೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ರವರು ಮಮತಾ ರವರ ಕುರಿತು ಮಾತನಾಡಿರುವುದಿಲ್ಲವೆಂದು ಹೇಳಿಕೆ ನೀಡಿರುವುದಾಗಿ, ವರದಿ ಮಾಡಿರುತ್ತಾರೆ. ದೂರುದಾರರಿಗೆ ಹಾಗೂ ಅವರ ಸ್ನೇಹಿತಿಗೆ, ಪೊಲೀಸ್ ಇನ್ಸ್ಪೆಕ್ಟರ್ ರವರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆಂಬ ಬಗ್ಗೆ ಅವರ ಹೇಳಿಕೆಯನ್ನು ಹೊರತುಪಡಿಸಿ, ಯಾವುದೇ ಸಾಕ್ಷಾಧಾರಗಳು ಕಂಡುಬಂದಿರುವುದಿಲ್ಲವೆಂದು, ವರದಿ ಮಾಡಿರುತ್ತಾರೆ. ದೂರುದಾರರಿಂದ, ಅವರ ಕಾರನ್ನು ಹಾಗೂ ಏರ್ಗನ್ ಅನ್ನು ವಶಕ್ಕೆ ಪಡೆದುಕೊಂಡ ಬಗ್ಗೆ, ಠಾಣಾ ಎಸ್ಹೆಚ್ಡಿ ಯಲ್ಲಿ ನಮೂದು ಮಾಡಿರುವುದಿಲ್ಲ ಎಂಬುದು, ಕಂಡುಬರುತ್ತದೆ. ದೂರುದಾರರು, ಕಲಂ 92(ಒ) ಕೆ.ಪಿ ಆಕ್ಟ್ ಅಡಿ, ತಾವು ಯಾವುದೇ ದಂಡ ಕಟ್ಟಿರುವುದಿಲ್ಲವೆಂದು ಹೇಳಿಕೆ ನೀಡಿರುವುದಾಗಿ, ವರದಿ ಮಾಡಿರುತ್ತಾರೆ. ಪೊಲೀಸ್ ಇನ್ಸ್ಪೆಕ್ಟರ್ ರವರು, ದೂರುದಾರರಿಗೆ ಹಾಗೂ ವಿನುತಾ ರವರಿಗೆ, ಕೆಟ್ಟದಾಗಿ ಮಾತನಾಡಿರುತ್ತಾರೆಂಬ ಬಗ್ಗೆ, ಯಾವುದೇ ಸಾಕ್ಷ್ಯಾಧಾರಗಳು ಕಂಡುಬಂದಿರುವುದಿಲ್ಲವೆಂದು, ವರದಿ ಮಾಡಿರುತ್ತಾರೆ. ಯೋಗೇಶ್ ಹಾಗೂ ವಿನುತಾ ರವರಿಂದ, ಅಪಾಲಜಿ ಬರೆಸಿಕೊಳ್ಳುವಂತಹ, ಯಾವುದೇ ಕಾನೂನು ಇರುವುದಿಲ್ಲವೆಂದು, ಹಾಗೂ ಅದು, ಕಾನೂನು ಮೀರಿದ ಕರ್ತವ್ಯವಾಗಿರುತ್ತದೆಂದು, ತಮ್ಮ ವರದಿಯಲ್ಲಿ ತಿಳಿಸಿರುತ್ತಾರೆ.
ಸದರಿ ವರದಿ ಪ್ರತಿಯನ್ನು ದೂರುದಾರರಿಗೆ ಕಳುಹಿಸಲಾಗಿ, ದೂರುದಾರರು ಅದಕ್ಕೆ ತಮ್ಮ ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಿರುವುದಿಲ್ಲ.
ಈ ಎಲ್ಲಾ ಹಿನ್ನೆಲೆಯಲ್ಲಿ, ಈ ಪ್ರಕರಣದಲ್ಲಿ ದಾಖಲಾದ ದೂರು, ಪೊಲೀಸ್, ಮಹಾನಿರೀಕ್ಷಕರು, ಕರಾಮಾಹ ಆಯೋಗ, ಬೆಂಗಳೂರು ರವರು ಸಲ್ಲಿಸಿದ ವಿಚಾರಣಾ ವರದಿ ಹಾಗೂ ಕಡತದಲ್ಲಿ ಲಭ್ಯವಿರುವ, ಎಲ್ಲಾ ದಾಖಲೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಲಾಯಿತು. ದೂರಿನಲ್ಲಿ ಮಾಡಿರುವ ಆರೋಪ ಎಂದರೆ, ಬಸವನಗುಡಿ ಪೊಲೀಸ್ ಇನ್ಸ್ಪೆಕ್ಟರ್ ಸುಬ್ರಹ್ಮಣ್ಯ ರವರು, ದೂರುದಾರರಿಗೆ ಹಾಗೂ ವಿನುತಾ ಇವರಿಗೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಅನುಚಿತವಾಗಿ ವರ್ತನೆ ಮಾಡಿದರೆಂಬ ಆರೋಪದ ಬಗ್ಗೆ, ಯಾವುದೇ ನಿಖರವಾದ ಸಾಕ್ಷ್ಯಾಧಾರಗಳು, ಕಂಡುಬರುವುದಿಲ್ಲ. ದೂರುದಾರರ ಹಾಗೂ ಅವರ ಸ್ನೇಹಿತೆ, ಕುಮಾರಿ ವಿನುತಾ ರವರ ಹೇಳಿಕೆ ಹೊರತುಪಡಿಸಿ, ಬೇರೆ ಯಾವುದೇ ಸಾಕ್ಷಾಧಾರಗಳು, ದೂರಿನಲ್ಲಿ ಮಾಡಿದ ಆರೋಪಗಳನ್ನು ಪುಷ್ಟಿಕರಿಸಲು, ಕಂಡುಬರುವುದಿಲ್ಲ, ಮುಂದುವರೆದು, ದೂರುದಾರರು ಹಾಗೂ ಅವರ ಸ್ನೇಹಿತೆ, ದಿ.6.7.2023ರಂದು ರಾತ್ರಿ 10.30 ಗಂಟೆ ಸುಮಾರಿಗೆ, ಬಸವನಗುಡಿ ಬುಲ್ ಟೆಂಪಲ್ ಹತ್ತಿರ ಕಾರಿನಲ್ಲಿ ಕುಳಿತಿರುವಾಗ, ಪೊಲೀಸ್ ಸಿಬ್ಬಂದಿಯವರು, ಅವರಿಗೆ ವಿಚಾರಿಸಿ, ಠಾಣೆಗೆ ಕರೆದುಕೊಂಡು ಬಂದಿದ್ದು, ಕಂಡುಬರುತ್ತದೆ. ಠಾಣೆಯಲ್ಲಿ, ಪೊಲೀಸ್ ಇನ್ಸ್ಪೆಕ್ಟರ್ ರವರ ಕೊಠಡಿಯಲ್ಲಿ ದೂರುದಾರರನ್ನು ವಿಚಾರಣೆಗೆ ಒಳಪಡಿಸಿದ್ದರೂ ಸಹಿತ, ಪೊಲೀಸರು, ಅವರ ಜೊತೆ, ಅನುಚಿತವಾಗಿ ವರ್ತಿಸಿದರು ಎಂಬ ಬಗ್ಗೆ ಸಾಕ್ಷ್ಯಾಧಾರಗಳು ಕಂಡುಬರುವುದಿಲ್ಲ. ಆದಾಗ್ಯೂ ಸಹಿತ, ದೂರುದಾರರನ್ನು ಠಾಣೆಗೆ ಕರೆಸಿದಾಗ, ಅವರಿಗೆ, ಕುರ್ಚಿಯಲ್ಲಿ ಕೂಡಲು ಅವಕಾಶ ನೀಡದೇ ಇರುವುದು, ಮೇಲ್ನೋಟಕ್ಕೆ ಕಂಡುಬರುತ್ತದೆ. ಆದುದರಿಂದ, ಯಾವುದೇ ಸಾರ್ವಜನಿಕರು ಠಾಣೆಗೆ ಬಂದಾಗ, ಅವರ ಜೊತೆ ಅನುಚಿತವಾಗಿ ವರ್ತಿಸದಂತೆ, ಹಾಗೂ ಅವರ ಮಾನವ ಹಕ್ಕುಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುವಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಗೆ, ಸೂಕ್ತ ನಿರ್ದೇಶನ ನೀಡಬೇಕೆಂದು ರಾಜ್ಯದ ಡಿಜಿ ಅಂಡ್ ಐಜಿಪಿ, ಬೆಂಗಳೂರು ನಗರ ರವರಿಗೆ ಆದೇಶಿಸಿ. ಈ ಪ್ರಕರಣವನ್ನು ಮುಕ್ತಾಯಗೊಳಿಸಲು ಆದೇಶಿಸಿದೆ.