ಸಾಗರ : ಅತವಾಡಿ ಗ್ರಾಮದ ಮುಸ್ಲೀಂ ಕುಟುಂಬವೊಂದರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣವನ್ನು ಸಾಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಖಂಡಿಸಿದ್ದಾರೆ.
ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಆತವಾಡಿ ಗ್ರಾಮದ ಅಬ್ದುಲ್ ಮುಹೀಬ್, ಆತನ ಪತ್ನಿ ಜುಬೇದಾ ಅವರ ಮೇಲೆ ಸಾಗರ ಪಟ್ಟಣದ ಪರಶುರಾಮ್ ಮತ್ತು ಅವರ ಪತ್ನಿ ಸವಿತಾ ಸೇರಿಕೊಂಡು ಇಪ್ಪತ್ತು ಜನರ ತಂಡ ಕಟ್ಟಿಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು.
ಅಬ್ದುಲ್ ಮುಹೀಬ್ ಕುಟುಂಬ ಆತವಾಡಿ ಗ್ರಾಮದಲ್ಲಿ 1.12 ಎಕರೆ ಜಾಗವನ್ನು ಹೊಂದಿದ್ದು, ಬಡತನದ ನಡುವೆಯೂ ಜೀವನ ಸಾಗಿಸುತ್ತಿದ್ದಾರೆ. 2015ರಿಂದಲೂ ಸಾಗರ ಪಟ್ಟಣದ ಪರಶುರಾಮ್ ಎಂಬಾತ ಈ ಜಮೀನು ಕಬಳಿಸಲು ಪ್ರಯತ್ನ ನಡೆಸುತ್ತಿದ್ದರು. ಇದಕ್ಕೆ ಮುಹೀಬ್ ಕುಟುಂಬ ಒಪ್ಪಿರಲಿಲ್ಲ. ಪದೇಪದೇ ಪರಶುರಾಮ್ ಅವರು ತಮ್ಮ ಸಂಗಡಿಗರೊಂದಿಗೆ ಸ್ಥಳಕ್ಕೆ ತೆರಳಿ ಬೆದರಿಕೆ ಹಾಕಿದ್ದಾರೆ ಎಂದರು.
ಈಚೆಗೆ ಪರಶುರಾಮ್, ಸವಿತಾ ಅವರು ತಮ್ಮ ಜೊತೆ 20 ಜನರ ತಂಡವನ್ನು ತೆಗೆದುಕೊಂಡು ಹೋಗಿ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಅಬ್ದುಲ್ ಮುಹೀಬ್ ಮತ್ತು ಜುಬೇದಾ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಗೊಳಗಾದ ಕುಟುಂಬ ಶಾಸಕರ ಬಳಿ ಬಂದು ತಮ್ಮ ನೋವು ತೋಡಿಕೊಂಡಿತ್ತು. ಶಾಸಕರು ತಕ್ಷಣ ಸ್ಪಂದಿಸಿ ತಪ್ಪಿತಸ್ತರ ವಿರುದ್ದ ಸೂಕ್ತ ಕಾನೂನುಕ್ರಮ ತೆಗೆದುಕೊಳ್ಳಬೇಕು. ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ಆತವಾಡಿ ಗ್ರಾಮದಲ್ಲಿ ನಡೆದ ಘಟನೆ, ಈಚೆಗೆ ಸಾಗರದ ಎಲ್.ಐ.ಸಿ.ಪಕ್ಕದ ರಸ್ತೆಯಲ್ಲಿ ಬೆಂಕಿನ ವಿಷಯಕ್ಕೆ ನಡೆದ ಹಲ್ಲೆಯಂತಹ ಘಟನೆಯನ್ನು ಕಾಂಗ್ರೇಸ್ ಪಕ್ಷ ತೀವೃವಾಗಿ ಖಂಡಿಸುತ್ತದೆ. ಯಾವುದೇ ಧರ್ಮದವರ ಮೇಲೆ ಹಲ್ಲೆ ನಡೆಸುವುದನ್ನು ಕಾಂಗ್ರೇಸ್ ಪಕ್ಷ ಸಹಿಸುವುದಿಲ್ಲ. ತಪ್ಪು ಮಾಡಿದವರು ಯಾರೇ ಆದರೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಐ.ಎನ್.ಸುರೇಶಬಾಬು ಮಾತನಾಡಿ, ಗೋಪಾಲಕೃಷ್ಣ ಬೇಳೂರು ಶಾಸಕರಾಗಿ ಎರಡು ವರ್ಷವಾಗಿದೆ. ಅಂದಿನಿಂದ ಇಂದಿನವರೆಗೆ ತಾಲ್ಲೂಕಿನಲ್ಲಿ ನೈತಿಕ ಪೊಲೀಸ್‌ಗಿರಿ, ಗೂಂಡಾಗಿರಿ ಸಂಪೂರ್ಣ ನಿಂತು ಹೋಗಿದೆ. ಅಲ್ಲಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ಇದನ್ನು ಶಾಸಕರು ಗಂಭೀರವಾಗಿ ಪರಿಗಣಿಸಿದ್ದಾರೆ. ಪರಸ್ಪರ ಸೌಹಾರ್ದದಿಂದ ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಹಲ್ಲೆಯಂತಹ ಕೃತ್ಯದಲ್ಲಿ ತೊಡಗಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.
ಈ ಸುದ್ದಿಗೋಷ್ಟಿಯಲ್ಲಿ ಕಾಂಗ್ರೇಸ್ ಪರಿಶಿಷ್ಟ ವಿಭಾಗದ ಅಧ್ಯಕ್ಷ ಎಲ್.ಚಂದ್ರಪ್ಪ, ಯುವ ಕಾಂಗ್ರೇಸ್ ಅಧ್ಯಕ್ಷ ಸದ್ದಾಂ ದೊಡ್ಮನೆ, ಕನ್ನಪ್ಪ ಉಪಸ್ಥಿತರಿದ್ದರು.
BREAKING: ನಾಳೆ ಬೆಳಗ್ಗೆ 10 ಗಂಟೆಯವರೆಗೆ PGCET-25ಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ | PGCET-2025 Exam