ಹಾಸನ : ಆನೆ ಸೆರೆ ಹಿಡಿಯುವುದು, ಪಳಗಿಸುವುದರಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಸಚಿವರಾದ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಬೇಲೂರು ತಾಲೂಕು ಬಿಕ್ಕೋಡಿನಲ್ಲಿಂದು ಆನೆ ಕಾರ್ಯಪಡೆಯ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು 40 ಲಕ್ಷ ವೆಚ್ಚದಲ್ಲಿ ಆನೆ ಕಾರ್ಯಪಡೆ ಸುಸಜ್ಜಿತ ಕಚೇರಿಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಆಧುನಿಕ ತಂತ್ರಜ್ಞಾನ ಬಳಸಿ ಆನೆಗಳ ಚಲನವಲನ ಗಮನಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ವನ್ಯಜೀವಿ ಸಂರಕ್ಷಣಾ ಕಾಯಿದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಂದಿರುವ ಹಿನ್ನೆಲೆಯಲ್ಲಿ ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆನೆಗಳ ಸಂಖ್ಯೆಯಲ್ಲಿ ರಾಜ್ಯ ನಂ.1 ಆಗಿದ್ದು, 6395 ಆನೆಗಳಿವೆ. ಹೀಗಾಗಿ ಮಾನವ-ವನ್ಯಜೀವಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದರು.
ಹಾಸನ ಜಿಲ್ಲೆಯಲ್ಲಿ ಕಳೆದ 10-20 ವರ್ಷಗಳಲ್ಲಿ ಆನೆಗಳ ಹಾವಳಿ ಹೆಚ್ಚಳವಾಗಿದ್ದು, ಆನೆಗಳನ್ನು ಸ್ಥಳಾಂತರ ಮಾಡಿದರೂ ಮತ್ತೆ ಅಲ್ಲಿಗೇ ಬರುತ್ತವೆ. ಹಾಸನದ ತೋಟಗಳಲ್ಲಿಯೇ 50-60 ಆನೆಗಳಿವೆ. ಇದೇ ಸಮಸ್ಯೆ ಚಿಕ್ಕಮಗಳೂರು ಮತ್ತು ಕೊಡಗಿನಲ್ಲೂ ಇದೆ ಎಂದರು.
ಅರಣ್ಯ ಹಾಗೂ ಈ ಭಾಗದ ತೋಟಗಳು ಒಂದೇ ರೀತಿ ಇರುವ ಕಾರಣ ಆನೆಗಳು ಇಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತವೆ. ಹೀಗಾಗಿ ಆನೆಗಳು ನಾಡಿಗೆ ಬಾರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್, ಆನೆ ಕಂದಕ, ಸೌರ ತಂತಿಬೇಲಿಯೇ ಮೊದಲಾದ ವಿವಿಧ ಕ್ರಮಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದರು.
ಹಾಸನ ಜಿಲ್ಲೆಯಲ್ಲಿ ಜನರಿಗೆ ತೊಂದರೆ ನೀಡುತ್ತಿರುವ 4 ಪುಂಡಾನೆಗಳನ್ನು ಈಗಾಗಲೇ ಸೆÀರೆಹಿಡಿಯಲಾಗಿದೆ ಎಂದು ತಿಳಿಸಿದ ಸಚಿವರು ಪುಂಡಾನೆ ಸೆರೆಹಿಡಿಯುವ ಪ್ರಕ್ರಿಯೆ ಅತ್ಯಂತ ಅಪಾಯಕಾರಿ ಕಾರ್ಯಾಚರಣೆ, ಅರಣ್ಯ ಇಲಾಖೆ ಯಶಸ್ವಿಯಾಗಿ ಆನೆ ಸೆರೆ ಹಿಡಿಯುತ್ತಿದೆ ಪುಂಡಾನೆ ಕಂಡು ಬಂದಲ್ಲಿ ತತ್‌ಕ್ಷಣ ಸೆರೆಹಿಡಿಯಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಆನೆಗಳ ಸಮಸ್ಯೆ ಹೆಚ್ಚಾಗಿರುವ ಬಿಕ್ಕೋಡು ಭಾಗದಲ್ಲಿ ಒಂದು ಆನೆ ಕಾರ್ಯಪಡೆಯ ಶಿಬಿರವನ್ನೇ ರಚಿಸಬೇಕು. ಇಲ್ಲಿ ಡಿಸಿಎಫ್ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ಆನೆಗಳ ಚಲನವಲನದ ಬಗ್ಗೆ ನಿಗಾ ಇಟ್ಟು, ಸಾರ್ವಜನಿಕರಿಗೆ ಸಕಾಲಿಕ ಮಾಹಿತಿ ನೀಡಬೇಕು ಎಂದು ಸೂಚಿಸಿದ್ದು, ಇಲ್ಲಿ ತಾತ್ಕಾಲಿಕ ಶಿಬಿರ ಮಾಲಾಗಿದೆ. ಈಗ ಇಲ್ಲಿ ಕಟ್ಟಡವನ್ನೇ ನಿರ್ಮಾಣ ಮಾಡುತ್ತಿದ್ದು, ಇದನ್ನು ತಾವೇ ಉದ್ಘಾಟನೆ ಮಾಡುವುದಾಗಿ ಹೇಳಿದರು.
ಆನೆ ಧಾಮ ಅಥವಾ ಸಾಫ್ಟ್ ರಿಲೀಸ್ ಸೆಂಟರ್ ಹೊಸ ಪರಿಕಲ್ಪನೆ ಮತ್ತು ಪ್ರಯೋಗವಾಗಿದ್ದು, ಕರ್ನಾಟಕದಲ್ಲಿ ಮೊದಲ ಬಾರಿಗೆ ರಚಿಸಲಾಗುತ್ತಿದೆ. ಇದು ಸಮರ್ಥವಾಗಿ ಆನೆ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ ಎಂಬುದು ಶೇ.80ರಷ್ಟು ಅಧಿಕಾರಿಗಳ ಅಭಿಪ್ರಾಯವಾಗಿದ್ದರೆ ಉಳಿದ 20ರಷ್ಟು ಅಧಿಕಾರಿಗಳು ಇದು ಸೂಕ್ತವಾದ ಕ್ರಮವಲ್ಲ ಎಂದೂ ಹೇಳುತ್ತಾರೆ. ರಾಜ್ಯ ಸರ್ಕಾರ ಈ ಹೊಸ ಪ್ರಯೋಗ ಮಾಡಲು ಕ್ರಮವಹಿಸಿದೆ ಎಂದರು.
ಆನೆ ಧಾಮ ಸ್ಥಾಪಿಸಲು 15-20 ದಿನಗಳ ಒಳಗಾಗಿ ಟೆಂಡರ್ ಕರೆದು, 2 ತಿಂಗಳ ಒಳಗಾಗಿ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.
ಪ್ರಸಕ್ತ ಸನ್ನಿವೇಶದಲ್ಲಿ ಕಾಡಿನಂಚಿನ ಜನರಿಗೆ ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸುವ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಅದೇ ವೇಳೆ ರೈತರ ಬೆಳೆ ಮತ್ತು ಅಮೂಲ್ಯ ಜೀವಹಾನಿ ಆಗದಂತೆ ತಡೆಯುವ ಅಗತ್ಯವೂ ಇದೆ. ಈ ಕಾರ್ಯವನ್ನು ಅರಣ್ಯ ಇಲಾಖೆ ಪ್ರಮಾಣಿಕವಾಗಿ ಮಾಡಲಿದೆ ಎಂದು ತಿಳಿಸಿದರು.
ಸಂಸದರಾದ ಶ್ರೇಯಸ್ ಪಟೇಲ್, ಶಾಸಕರಾದ ಹೆಚ್.ಕೆ.ಸುರೇಶ್, ಸಿ.ಸಿ.ಎಫ್.ಏಡುಕುಂಡಲ,ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಬ್ ಕುಮಾರ್, ಕ್ಷೀರಸಾಗರ್, ತಹಸೀಲ್ದಾರ್ ಮಮತ, ಮತ್ತಿತರರು ಹಾಜರಿದ್ದರು.