ಬಳ್ಳಾರಿ : ರಾಜ್ಯ ಸರ್ಕಾರವು ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆ ಜನಪರ ಆಡಳಿತಕ್ಕೆ ಸಾಕ್ಷಿಯಾಗಿ ಕಂದಾಯ ಗ್ರಾಮಗಳ 1 ಲಕ್ಷ ಕುಟುಂಬಗಳಿಗೆ ಶಾಶ್ವತ ಡಿಜಿಟಲ್ ಹಕ್ಕುಪತ್ರ ವಿತರಿಸಲು ಉದ್ದೇಶಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಾಡಿ, ಹಟ್ಟಿ, ತಾಂಡಾಗಳು ಸೇರಿದಂತೆ ಜನ ವಸತಿ ಪ್ರದೇಶಗಳು ಕಂದಾಯ ಗ್ರಾಮಗಳಾಗಿ ಅಂಗೀಕರಿಸದ ಕಾರಣ ಅಲ್ಲಿನ ನಿವಾಸಿಗಳು ಅನೇಕ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹಟ್ಟಿ, ತಾಂಡಾ ನಿವಾಸಿಗಳ ಮನೆಗಳಿಗೆ ಕಾನೂನಿನ ಆಸರೆ ನೀಡಬೇಕು. ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹಟ್ಟಿ, ಹಾಡಿ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಕಾರ್ಯ ತ್ವರಿತಗತಿಯಲ್ಲಿ ನಡೆಯಬೇಕು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದಕ್ಕೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಪ್ರತಿಕ್ರಿಯಿಸಿ, ಕಂದಾಯ ಗ್ರಾಮಗಳ ರಚನೆಗೆ ಜಿಲ್ಲೆಯಲ್ಲಿ ಒಟ್ಟು 74 ಗ್ರಾಮಗಳ ಗುರುತಿಸಲಾಗಿದ್ದು, ಈಗಾಗಲೇ 71 ಪ್ರಾಥಮಿಕ ಸೂಚನೆ ಹಾಗೂ ಸರ್ಕಾರದಿಂದ 51 ಗ್ರಾಮಗಳು ಅಂತಿಮ ಅಧಿಸೂಚನೆ ಹೊರಡಿಸಿದ್ದು, 1 ಗ್ರಾಮವು ಅಂತಿಮ ಅಧಿಸೂಚನೆಗೆ ಸಲ್ಲಿಕೆಯಾಗಿದೆ. ಇನ್ನೂ 19 ಗ್ರಾಮಗಳು ಅಂತಿಮ ಅಧಿಸೂಚನೆಗೆ ಬಾಕಿ ಇರುವ ಗ್ರಾಮಗಳಾಗಿವೆ ಎಂದು ಮಾಹಿತಿ ನೀಡಿದರು.
ಕಂದಾಯ ಗ್ರಾಮಗಳ ರಚನೆ ಕುರಿತಂತೆ ಜೂನ್ 30 ರ ಗಡುವನ್ನು ನಿಗದಿಪಡಿಸಲಾಗಿದ್ದು, ಹೊಸ ಕಂದಾಯ ಘಟಕಗಳ ರಚನೆಗೆ ನಿಷೇಧ ಅನ್ವಯ ಆಗಲಿದೆ. ಈ ನಿಷೇಧ ತೆರವಾಗಲು ಎರಡು ವರ್ಷ ಆಗಬಹುದು. ಹೀಗಾಗಿ ಬಾಕಿ ಇರುವ ಎಲ್ಲ ಕಂದಾಯ ಗ್ರಾಮಗಳ ರಚನೆ ಕಾರ್ಯ ಜೂ. 30 ರ ಒಳಗಾಗಿ ಪೂರ್ಣಗೊಳ್ಳಬೇಕು ಎಂದು ತಾಕೀತು ಮಾಡಿದರು.
ಗ್ರಾಮ ಪಂಚಾಯಿತಿಯಲ್ಲಿ ವಸತಿ ಪ್ರದೇಶಗಳ ಪಟ್ಟಿ ಇದೆ. ಕಂದಾಯ ಗ್ರಾಮಗಳ ಸಂಖ್ಯೆಗಿAತ ವಸತಿ ಪ್ರದೇಶಗಳ ಸಂಖ್ಯೆ ಹೆಚ್ಚಿದೆ. ಇಲ್ಲಿ ದಾಖಲೆ ರಹಿತ ವಸತಿ ಪ್ರದೇಶಗಳ ನಮೂದಾಗಿರುತ್ತವೆ. ಕಂದಾಯ ಇಲಾಖೆಯ ಬಳಿ ದಾಖಲೆ ಸಹಿತ ಗ್ರಾಮಗಳ ಮಾಹಿತಿ ಇರುತ್ತದೆ ಎಂದು ತಿಳಿಸಿದ ಅವರು, ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಗಮನಿಸಿ, ಗ್ರಾಮ ರಚನೆ ಮಾಡಬೇಕು. ದಾಖಲೆ ರಹಿತ ಇದ್ದಲ್ಲಿ ಅವರಿಗೆ ಒಂದು ದಾಖಲೆ ಕಲ್ಪಿಸಿ, ಬದುಕು ಕಲ್ಪಿಸಿಕೊಡಬೇಕಿದೆ ಎಂದರು.
ಗ್ರಾಮದ 1 ಕಿ.ಮೀ ವ್ಯಾಪ್ತಿ ಒಳಗೆ ಇದ್ದು, 10 ಮನೆಗಳಿಗಿಂತಲೂ ಹೆಚ್ಚು ಇದ್ದರೆ ಉಪ ಗ್ರಾಮ ರಚನೆ ಮಾಡಲು ಅವಕಾಶ ಇದೆ. ಜನರಿಗೆ ನಾವು ಸ್ಥಿರ ಬದುಕು ನೀಡಬೇಕು. ಬಿಟ್ಟು ಹೋಗಿರುವ ಕಂದಾಯ ಗ್ರಾಮಗಳ ರಚನೆ ಹಾಗೂ ಗುರುತಿಸುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಯಾದವ ಹಾಗೂ ತಾಂಡಾ ಸಂಘದವರಿAದ ಮಾಹಿತಿ ಪಡೆದು ಗ್ರಾಮ ಪಂಚಾಯಿತಿಯಿAದ ಜನವಸತಿ ಪಟ್ಟಿ ಪಡೆಯುವಂತೆ ಸಚಿವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಸುಮಾರು 70 ಸಾವಿರ ಜಮೀನುಗಳು ಮೃತ ಹೊಂದಿರುವವರ ಹೆಸರಿನಲ್ಲಿ ಮುಂದುವರೆದಿದ್ದು, ಇಂತಹ ದಾಖಲೆಗಳು ಸಕಾಲದಲ್ಲಿ ಆಪ್‌ಡೇಟ್ ಆಗಬೇಕು. ಇಲ್ಲದಿದ್ದರೆ ವಾರಸುದಾರರಿಗೆ ನಾನಾ ರೀತಿಯ ತೊಂದರೆಗಳಾಗಲಿವೆ. ಹಾಗಾಗಿ ಪೌತಿ ಆಗದೇ ಉಳಿದಿರುವಂತಹ ಜಮೀನುಗಳನ್ನು ತಕ್ಷಣವೇ ಅಭಿಯಾನ ಕೈಗೊಳ್ಳಲಾಗುವುದು. ಈ ಅಭಿಯಾನದಲ್ಲಿ ಅಂತಹ ಕುಟುಂಬಗಳು ಭಾಗವಹಿಸಿದಲ್ಲಿ ಪೌತಿ ಖಾತೆ ಮಾಡಿಕೊಡಲಾಗುವುದು ಎಂದು ಸಚಿವರು ಹೇಳಿದರು.
ಭೂ ಸುರಕ್ಷಾ ಯೋಜನೆಗೆ ವೇಗ ನೀಡಿ:
ಭೂ ಸುರಕ್ಷಾ ಯೋಜನೆಯನ್ನು ಭೂ ಕಂದಾಯ ಇಲಾಖೆಯ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿದ್ದು, ಈ ಯೋಜನೆ ತ್ವರಿತಗತಿಯಲ್ಲಿ ಆಗಬೇಕು. ಜಿಲ್ಲೆಯಲ್ಲಿ ಸರಾಸರಿ 10 ಸಾವಿರ ಪುಟಗಳ ಸ್ಕಾö್ಯನ್ ಹಾಗೂ ಅಪ್‌ಲೋಡ್ ಆಗಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಸರ್ಕಾರದಿಂದ 1 ಲಕ್ಷ ಕುಟುಂಬಗಳಿಗೆ ಡಿಜಿಟಲ್ ಹಕ್ಕುಪತ್ರ ವಿತರಣೆ:
ರಾಜ್ಯ ಸರ್ಕಾರವು ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆ ಜನಪರ ಆಡಳಿತಕ್ಕೆ ಸಾಕ್ಷಿಯಾಗಿ ಕಂದಾಯ ಗ್ರಾಮಗಳ 1 ಲಕ್ಷ ಕುಟುಂಬಗಳಿಗೆ ಶಾಶ್ವತ ಡಿಜಿಟಲ್ ಹಕ್ಕುಪತ್ರ ವಿತರಿಸಲು ಉದ್ದೇಶಿಸಲಾಗಿದೆ. ಇದೇ ಮೇ 20ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಕ್ಕುಪತ್ರ ವಿತರಿಸಲಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದರು.
ಸಭೆಯಲ್ಲಿ ಸಂಸದ ಈ.ತುಕಾರಾಮ್, ಸಂಡೂರು ಶಾಸಕರಾದ ಈ.ಅನ್ನಪೂರ್ಣ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಸಹಾಯಕ ಆಯುಕ್ತ ಪಿ.ಪ್ರಮೋದ್ ಸೇರಿದಂತೆ ಜಿಲ್ಲೆಯ ಐದು ತಾಲ್ಲೂಕುಗಳ ತಹಶೀಲ್ದಾರರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.