ಬೆಂಗಳೂರು : ಕನ್ನಡಿಗರ ಬಗ್ಗೆ ವಿವಾವದತ್ಮಕ ಹೇಳಿಕೆ ನೀಡಿದ್ದ ಗಾಯಕ ಸೋನು ನಿಗಮ್ ವಿರುದ್ದ ವಿರುದ್ಧ ದಾಖಲಾಗಿರುವ ಎಫ್ ಐಆರ್ ರದ್ದು ಕೋರಿ ಸೋನು ನಿಗಮ್ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಗಾಯಕ ಸೋನು ನಿಗಮ್ ಅವರು ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐಆರ್ ರದ್ದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಆವಲಹಳ್ಳಿ ಪೊಲೀಸರು ಹಾಗೂ ದೂರುದಾರ ಧರ್ಮರಾಜ್ ಅನಂತಯ್ಯಗೆ ನೋಟಿಸಿ ನೀಡಿ ವಿಚಾರಣೆಯನ್ನು ಮೇ. 15 ಕ್ಕೆ ಮುಂದೂಡಿದೆ.
ಕನ್ನಡಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 352 (1), 351 (2) ಮತ್ತು 353 ರ ಅಡಿಯಲ್ಲಿ ದ್ವೇಷ, ಕ್ರಿಮಿನಲ್ ಮಾನಹಾನಿ ಮತ್ತು ಭಾಷಾ ಭಾವನೆಗಳನ್ನು ಕೆರಳಿಸಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೋನು ನಿಗಮ್ ಅವರ ಹೇಳಿಕೆಗಳು ಕನ್ನಡಿಗ ಸಮುದಾಯಕ್ಕೆ ತೀವ್ರ ನೋವನ್ನುಂಟು ಮಾಡಿವೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಘಟನೆ ಹಿನ್ನೆಲೆ
ಏಪ್ರಿಲ್ 25 ರಂದು ಬೆಂಗಳೂರಿನ ಕಾಲೇಜೊಂದರಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಹಿಂದಿ ಹಾಡು ಹಾಡುತ್ತಿದ್ದರು. ಆಗ ವಿದ್ಯಾರ್ಥಿಯೊಬ್ಬ ಕನ್ನಡ ಕನ್ನಡ ಎಂದು ಪಟ್ಟುಹಿಡಿಯುವಂತೆ ಬೇಡಿಕೆ ಇಟ್ಟ. ಯುವಕನ ವರ್ತನೆಯಿಂದ ಬೇಸತ್ತ ಸೋನು ನಿಗಮ್ ಅವರು ತಾಳ್ಮೆಕಳೆದುಕೊಂಡು ಈ ಸಮಯದಲ್ಲಿ ಹಾಡನ್ನು ಅರ್ಧಕ್ಕೆ ನಿಲ್ಲಿಸಿದ ಸೋನು ನಿಗಮ್ ʼಪಹಲ್ಗಾಮ್‌ನಲ್ಲಿ ನಡೆದ ಘಟನೆಯ ಕಾರಣ ಇದೇ. ನಿಮ್ಮ ಮುಂದೆ ಯಾರು ನಿಂತಿದ್ದಾರೆ ಎಂದು ನೋಡಿ ಎಂದು ಹೇಳಿದ್ದಾರೆ.
ಕ್ಷಮೆಯಾಚಿಸಿದ್ದ ಸೋನು ನಿಗಮ್
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ನೀಡಿದ ತಮ್ಮ ಹೇಳಿಕೆ ಬಗ್ಗೆ ವಿವಾದಕ್ಕೆ ಕಾರಣವಾಗುತ್ತಲೇ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಕರ್ನಾಟಕದ ಜನರಿಗೆ ಸಾರ್ವಜನಿಕ ಕ್ಷಮೆಯಾಚಿಸಿದ್ದರು. “ಕ್ಷಮಿಸಿ ಕರ್ನಾಟಕ. ನಿಮ್ಮ ಮೇಲಿನ ನನ್ನ ಪ್ರೀತಿ ನನ್ನ ಅಹಂಕಾರಕ್ಕಿಂತ ದೊಡ್ಡದು. ನಿನ್ನ ಮೇಲೆ ಯಾವಾಗಲೂ ಪ್ರೀತಿ” ಎಂದು ಸೋನು ನಿಗಮ್ ತಿಳಿಸಿದ್ದಾರೆ.