ಬೆಂಗಳೂರು: ನಾನು ಈ ಬಗ್ಗೆ ತುಂಬಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಲು ಕಾರಣ, ಇತ್ತೀಚಿನ ದಿನಗಳಲ್ಲಿ ಅಪಘಾತದ ಬಗ್ಗೆ ಭಯ ಮತ್ತು ಸಂವೇದನಾ ಶೀಲತೆ ಇಲ್ಲದಂತಾಗಿರುವುದು. ನೂರು ಅಪಘಾತಗಳಲ್ಲಿ ನನ್ನದೊಂದು ಎಂಬ ಅಸಹನೀಯ ಭಾವನೆ ಚಾಲನಾ ಸಿಬ್ಬಂದಿಗಳಲ್ಲಿ ಇರಬಾರದು ಎಂಬುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನಾ ಸಿಬ್ಬಂದಿಗಳಿಗೆ ಎಚ್ಚರಿಸಿದರು.
ಇಂದು ನೂತನವಾಗಿ ಆಯ್ಕೆಯಾದಂತ 2,286 ಬಿಎಂಟಿಸಿ ನಿರ್ವಾಹಕರಿಗೆ ನೇಮಕಾತಿ ಆದೇಶ ಪತ್ರವನ್ನು ವಿತರಿಸಿ ಮಾತನಾಡಿದಂತ ಅವರು, ಅಪಘಾತಗಳಿಗೆ ಕಾರಣರಾದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದರು.
ಕಳೆದ 15 ದಿವಸಗಳ ಹಿಂದೆ ಅಪಘಾತದಲ್ಲಿ ಕಾಲುಕಳೆದುಕೊಂಡ ಚಾಲನಾ ಸಿಬ್ಬಂದಿಯೊಬ್ಬರಿಗೆ ರೂ.25 ಲಕ್ಷ ಪರಿಹಾರ ಹಣವನ್ನು ನಾವು ನೀಡುವಾಗ ನನಗೆ ಅರ್ಥವಾಗಿದ್ದು ಒಂದೇ ವಿಷಯ, ಯಾವುದೇ ಆರ್ಥಿಕ ಸೌಲಭ್ಯವು ಆ ಸಿಬ್ಬಂದಿಗೆ ತನ್ನ ಹಿಂದಿನ ಸಂತೋಷದ ಜೀವನ ತಂದುಕೊಡುವುದಿಲ್ಲ. ಬೇರೆಯವರನ್ನು ನೋಡಿದಾಗ ಅವನಿಗಾಗುವ ಮಾನಸಿಕ ವೇದನೆ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಬಸ್ಸು ರಸ್ತೆಯಲ್ಲಿ ಸಂಚರಿಸುವ ದೊಡ್ಡ ವಾಹನ, ಆದ್ದರಿಂದ ನಮ್ಮ ಚಾಲಕರು ಮತ್ತಷ್ಟು ತಾಳ್ಮೆ, ಜಾಗ್ರತೆ ಮತ್ತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ನಿರ್ವಾಹಕರು ಚಾಲಕರಿಗೆ ವೇಗ ತಗ್ಗಿಸಲು, ಜಾಗ್ರತೆ ವಹಿಸಲು ಮನವರಿಕೆ ಮಾಡಿಕೊಡಬೇಕು. ಕೆಲ ಸಂದರ್ಭಗಳಲ್ಲಿ ಬಸ್ಸುಗಳ ಅಪಘಾತಕ್ಕೆ ಬಸ್ಸುಗಳ ಸ್ಥಿತಿಗತಿಗಳು/ತಾಂತ್ರಿಕ ದೋಷಗಳು ಕಾರಣವಿರಬಹುದು. ಆ ನಿಟ್ಟಿನಲ್ಲಿಯೂ ನಾವು ಗಮನವಹಿಸಬೇಕು ತಾಂತ್ರಿಕ ಇಲಾಖೆಯ ಅಧಿಕಾರಿಗಳು,ಮೇಲ್ವಿಚಾರಕ ಸಿಬ್ಬಂದಿಗಳ ಅಜಾಗರೂಕತೆ, ನಿರ್ಲಕ್ಷತೆ ಕಾರಣವಾಗಿರುತ್ತದೆ ಎಂದರು.
ಇನ್ಮುಂದೆ ಅಪಘಾತಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳದೆ ಅನ್ಯ ಮಾರ್ಗವಿಲ್ಲದಂತಾಗಿದೆ. ಅಪಘಾತಗಳನ್ನು ತಗ್ಗಿಸಲು ಕಠಿಣ ಕ್ರಮಗಳನ್ನು ಸಹ ಕೆಲವೊಮ್ಮೆ ಜಾರಿಗೊಳಿಸುವುದು ಪ್ರಯಾಣಿಕರ ಹಿತದೃಷ್ಟಿಯಿಂದ ಅಗತ್ಯವಾಗಿರುತ್ತದೆ. ಅಪಘಾತಗಳು ಆಕಸ್ಮಿಕವೇ ಆದರೂ ಅದನ್ನು ತಡೆಗಟ್ಟಲು ಎಲ್ಲಾ ರೀತಿಯ ಕ್ರಮಗಳನ್ನು ತೆಗದುಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
BREAKING: 2025-26ನೇ ಸಾಲಿನ ‘ಸರ್ಕಾರಿ ನೌಕರರ ವರ್ಗಾವಣೆ’ಗೆ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ