ನವದೆಹಲಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆಯಲ್ಲಿ ಭಾರತೀಯ ಸೇನೆಯೂ ಚೈನಾ ನಿರ್ಮಿತ ಕ್ಷಿವಣಿ, ಚೈನಾ ನಿರ್ಮಿತ ಶಸ್ತ್ರ ಸಹಿತ ಡ್ರೋನ್ ಗಳನ್ನು ಧ್ವಂಸ ಮಾಡಿರುವುದಾಗಿ ಏರ್ ಮಾರ್ಷಲ್ ಎ.ಕೆ ಭಾರ್ತಿ ಮಾಹಿತಿ ನೀಡಿದರು.
ಭಾರತೀಯ ಸಶಸ್ತ್ರ ಪಡೆಗಳು ಸೋಮವಾರ ಆಪರೇಷನ್ ಸಿಂಧೂರ್ ಕುರಿತು ಪತ್ರಿಕಾಗೋಷ್ಠಿಯನ್ನು ನಡೆಸಿದವು. ಪತ್ರಿಕಾಗೋಷ್ಠಿಯನ್ನು ಮಿಲಿಟರಿ ಕಾರ್ಯಾಚರಣೆಗಳ (ಡಿಜಿಎಂಒ) ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ವಾಯು ಕಾರ್ಯಾಚರಣೆಗಳ ಏರ್ ಮಾರ್ಷಲ್ ಎಕೆ ಭಾರ್ತಿ ಮತ್ತು ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕ ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಉದ್ದೇಶಿಸಿ ಮಾತನಾಡಿದರು.
ನಮ್ಮ ಹೋರಾಟ ಪಾಕಿಸ್ತಾನ ಸೇನೆಯ ವಿರುದ್ಧವಲ್ಲ, ಭಯೋತ್ಪಾದನೆಯ ವಿರುದ್ಧ. ಪಾಕಿಸ್ತಾನ ಸೇನೆಯು ಭಯೋತ್ಪಾದಕರನ್ನು ಬೆಂಬಲಿಸಿತು ಎಂದು ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎಕೆ ಭಾರ್ತಿ ಹೇಳಿದರು.
ಭಾರತದಲ್ಲಿ ಮತ್ತು ಅದರ ಗಡಿಗಳಲ್ಲಿ ಎಲ್ಲಾ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿರುವ ಭಾರತೀಯ ಸಶಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳೇ ಮಹಾನಿರ್ದೇಶಕರು.
ಆಪರೇಷನ್ ಸಿಂಧೂರ್ ಅಡಿಯಲ್ಲಿ, ಭಾರತೀಯ ಸೇನೆಯು ಮುರಿಯ್ಕೆಯಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಯ ಮರ್ಕಜ್ ತೈಬಾ, ಬಹಾವಲ್‌ಪುರದಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಯ ಮರ್ಕಜ್ ಸುಭಾನ್ ಅಲ್ಲಾ, ಸಿಯಾಲ್‌ಕೋಟ್‌ನಲ್ಲಿರುವ ಹಿಜ್ಬುಲ್ ಮುಜಾಹಿದ್ದೀನ್‌ನ ಮೆಹಮೂನಾ ಜೋಯಾ ಸೌಲಭ್ಯ ಮತ್ತು ಬರ್ನಾಲಾದ ಮರ್ಕಜ್ ಅಹ್ಲೆ ಹದೀಸ್‌ನಲ್ಲಿರುವ ಎಲ್‌ಇಟಿಯ ನೆಲೆ ಮತ್ತು ಮುಜಫರಾಬಾದ್‌ನ ಶವಾಯಿ ನಲ್ಲದಲ್ಲಿರುವ ಅದರ ಶಿಬಿರವನ್ನು ಗುರಿಯಾಗಿಸಿಕೊಂಡಿತು ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.