ಸಾಗರ : ತಾಲ್ಲೂಕಿನ ಸೊರಬ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಮರ್ತೂರು ಗ್ರಾಮ ಪಂಚಾಯ್ತಿ ಆಲಳ್ಳಿ-ಶಿರೂರು ಗ್ರಾಮದಲ್ಲಿ ಬಾರ್ ಎಂಡ್ ರೆಸ್ಟೋರೆಂಟ್ ತೆರೆಯಲು ಮುಂದಾದ ಕ್ರಮ ಖಂಡಿಸಿ ಸೋಮವಾರ ಆಲಳ್ಳಿ-ಶಿರೂರು ಗ್ರಾಮದಲ್ಲಿ ಗ್ರಾಮಸ್ಥರು ಸಮಾಲೋಚನಾ ಸಭೆ ನಡೆಸಿ ಯಾವುದೇ ಕಾರಣಕ್ಕೂ ಬಾರ್ ಎಂಡ್ ರೆಸ್ಟೋರೆಂಟ್ ತೆರೆಯದಂತೆ ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.
ಯಾವುದೇ ಕಾರಣಕ್ಕೂ ಆಲಳ್ಳಿ-ಶಿರೂರು ಗ್ರಾಮದಲ್ಲಿ ಬಾರ್ ಎಂಡ್ ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡುವುದಿಲ್ಲ. ಈ ಭಾಗದಲ್ಲಿ ಎಲ್ಲ ಜಾತಿ ಜನಾಂಗದವರು ವಾಸ ಮಾಡುತ್ತಿದ್ದು ಹೆಚ್ಚಿನ ಜನಸಂಖ್ಯೆ ಈಡಿಗ ಸಮುದಾಯದ್ದೆ ಆಗಿರುತ್ತದೆ. ಮದ್ಯದಂಗಡಿ ತೆರೆಯುವುದರಿಂದ ಯುವಜನರು, ಕೂಲಿಕಾರ್ಮಿಕರು ಮದ್ಯದ ಚಟಕ್ಕೆ ಬೀಳುವ ಸಾಧ್ಯತೆ ಇದೆ. ಹಿಂದೆಯೆ ಇಲ್ಲಿ ಬಾರ್ ಎಂಡ್ ರೆಸ್ಟೋರೆಂಟ್ ಮಾಡಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾಗಿ ಸಭೆಯಲ್ಲಿ ಚರ್ಚೆಯಾಯಿತು.
ಈಗಾಗಲೆ ಗ್ರಾಮಸ್ಥರ ವಿರೋಧದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅಂಗಡಿಯವರಿಗೆ ನೋಟಿಸ್ ನೀಡಿದ್ದಾರೆ. ಈ ನೋಟಿಸ್ ಪ್ರಶ್ನಿಸಿ ಅಂಗಡಿ ಮಾಲೀಕರು ಹೈಕೋರ್ಟ್ಗೆ ಹೋಗುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಪರವಾಗಿ ನಾವು ಮೇಲ್ಮನವಿ ಸಲ್ಲಿಸಬೇಕಾಗುತ್ತದೆ. ಸ್ಥಳೀಯರ ವಿರೋಧ ಇದ್ದರೆ ಮದ್ಯದಂಗಡಿ ಬೇರೆಕಡೆ ಸ್ಥಳಾಂತರಿಸಬೇಕು ಎಂದು ಲೈಸೆನ್ಸ್ನಲ್ಲಿ ನಮೂದಿಸಲಾಗಿರುತ್ತದೆ. ಅಂಗಡಿ ಮಾಲೀಕರು ಬಾರ್ ಎಂಡ್ ರೆಸ್ಟೋರೆಂಟ್ ಬೇರೆ ಕಡೆ ಸ್ಥಳಾಂತರಿಸಬೇಕು. ಒಂದೊಮ್ಮೆ ಗ್ರಾಮಸ್ಥರ ವಿರೋಧದ ನಡುವೆ ಅಂಗಡಿ ತೆರೆಯಲು ಬಂದರೆ ಹೋರಾಟಕ್ಕೆ ಎಲ್ಲರೂ ಸಿದ್ದರಾಗುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಅಶೋಕ ಬರದವಳ್ಳಿ, ನ್ಯಾಯವಾದಿ ಎಚ್.ಎನ್.ದಿವಾಕರ್ ಮಾತನಾಡಿದರು. ಗ್ರಾಮ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸುರೇಶ್, ಮರ್ತೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಾಂತಕುಮಾರ್, ಅಣ್ಣಪ್ಪ ಬರದವಳ್ಳಿ, ಹುಚ್ಚಪ್ಪ ಮಂಡಗಳಲೆ, ಕೃಷ್ಣಮೂರ್ತಿ ಇನ್ನಿತರರು ಹಾಜರಿದ್ದರು.