ಬೆಂಗಳೂರು: ಕರ್ನಾಟಕ ರಾಜ್ಯವು ಮೂಲತಃ ಶುಷ್ಕ ಪ್ರದೇಶವಾಗಿದ್ದು, ಬೇಸಿಗೆ ಸಮಯದಲ್ಲಿ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಹಾಲಿ ಇರುವ ಬಹುತೇಕ ಜಲಮೂಲಗಳು ಬತ್ತಿಹೋಗಿ ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಪರಿಸ್ಥಿತಿಯನ್ನು ಎದುರಿಸಲು 60 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
2025-26ನೇ ಸಾಲಿನಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಅಭಾವ ಉಂಟಾದಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು, ಟ್ಯಾಂಕರ್ಗಳ ಮುಖಾಂತರ ಹಾಗೂ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುವ ಕಾಮಗಾರಿಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಈ ಅನುದಾನವನ್ನು ಬಳಸಿಕೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಗ್ರಾಮೀಣ ಪ್ರದೇಶದ ಜನರಿಗೆ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಅಭಾವ ಉಂಟಾದಲ್ಲಿ ಹಾಗೂ ಕೊಳವೆಬಾವಿಗಳು ಬತ್ತಿ ಹೋದಲ್ಲಿ ಪ್ರಥಮ ಆದ್ಯತೆ ಮೇರೆಗೆ ಮೇಲೆ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದ ಪಡೆಯಲು, ಲಭ್ಯವಿಲ್ಲದಿದ್ದಲ್ಲಿ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡುವುದೇ ಅಲ್ಲದೆ, ಕೊಳವೆ ಬಾವಿಗಳನ್ನು ಫ್ಲಶಿಂಗ್ ಮತ್ತು ಆಳಗೊಳಿಸುವುದರೊಂದಿಗೆ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.
ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಅತ್ಯಗತ್ಯವೆಂದು ಕಂಡು ಬಂದಲ್ಲಿ, ಸಂಬಂಧಪಟ್ಟ ಭೂವಿಜ್ಞಾನಿಗಳ ವರದಿಯ ಅನುಸಾರ ಕೊಳವೆಬಾವಿಗಳನ್ನು ಕೊರೆದು ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಅನುದಾನವನ್ನು ಬಳಸಿಕೊಳ್ಳಬೇಕೆಂದು ಸಚಿವರು ನಿರ್ದೇಶನ ನೀಡಿದ್ದಾರೆ.
BREAKING: BMTC ನಿರ್ವಾಹಕರ ಹುದ್ದೆಯ ಅಂತಿಮ ಆಯ್ಕೆ ಪಟ್ಟಿ ಪ್ರಕಟ | BMTC Recruitment