ಬೆಂಗಳೂರು : 2024-25 ನೇ ಸಾಲಿನ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಮುಂಗಾರಿನ ಹಂಗಾಮಿನಲ್ಲಿ ತೊಗರಿ ಖರೀದಿಸಲು ಸರ್ಕಾರದಿಂದ ಆದೇಶ ನೀಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ 6.27 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದ್ದು, ಸುಮಾರು 50 ಲಕ್ಷ ಕ್ವಿಂಟಾಲ್ ಇಳುವರಿ ನಿರೀಕ್ಷಿಸಲಾಗಿದೆ. ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಾಲ್ ತೊಗರಿಗೆ ₹7,550 ನಿಗದಿಪಡಿಸಿದ್ದು, ರಾಜ್ಯ ಸರ್ಕಾರದಿಂದ ಕ್ವಿಂಟಾಲ್ಗೆ ಪ್ರೋತ್ಸಾಹ ಧನ ₹450 ಸೇರಿಸಿ ಪ್ರತಿ ಕ್ವಿಂಟಾಲ್ಗೆ ಒಟ್ಟು ₹8,000 ದರ ನಿಗದಿಪಡಿಸಲಾಗಿದೆ. ಪ್ರತಿ ಎಕರೆಗೆ 4 ಕ್ವಿಂಟಾಲ್ರಂತೆ ಪ್ರತಿ ರೈತರಿಂದ ಗರಿಷ್ಠ 40 ಕ್ವಿಂಟಾಲ್ವರೆಗೆ ಎಫ್.ಎ.ಕ್ಯೂ ಗುಣಮಟ್ಟದ ತೊಗರಿಯನ್ನು ಖರೀದಿಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ದಿ ಮಂಡಳಿ ಕಲಬುರಗಿ ಸಂಸ್ಥೆಗಳನ್ನು ನೋಡಲ್ ಏಜೆನ್ಸಿಯಾಗಿ ನೇಮಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 189 ಖರೀದಿ ಕೇಂದ್ರಗಳನ್ನು ತೆರೆದು, ತೊಗರಿ ಖರೀದಿ ಮಾಡಲಾಗುತ್ತಿದೆ.
ನಿಗದಿತ ಅವಧಿಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಕಲಬುರಗಿ ಸಂಸ್ಥೆಯು 33,518 ರೈತರ ನೋಂದಣಿಯನ್ನು ಕೈಗೊಂಡಿದ್ದು, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ, ಕಲಬುರಗಿ ಸಂಸ್ಥೆಯು 14,730 ರೈತರ ನೋಂದಣಿ ಮಾಡಿಕೊಂಡಿದೆ. ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 48,248 ರೈತರು ನೋಂದಾಯಿಸಿಕೊಂಡಿದ್ದಾರೆ. 34,660 ರೈತರಿಂದ ಒಟ್ಟು 5,21,648 ಕ್ವಿಂಟಾಲ್ ತೊಗರಿಯನ್ನು ಖರೀದಿಸಿ ₹417.31 ಕೋಟಿ ಹಣ ಪಾವತಿಸಲಾಗಿದೆ.
2025ರ ಏಪ್ರಿಲ್ 30ರಂದು ಸರ್ಕಾರ ಹೊರಡಿಸಿರುವ ಪತ್ರದ ಅನ್ವಯ, ಜಿಲ್ಲೆಯಲ್ಲಿ ಈಗಾಗಲೇ ನೋಂದಣಿಯಾಗಿ ತೊಗರಿ ಮಾರಾಟ ಮಾಡದೆ ಬಾಕಿ ಉಳಿದಿರುವ 13,588 ರೈತರಿಂದ 3,22,969 ಕ್ವಿಂಟಾಲ್ ತೊಗರಿ ಖರೀದಿಸಲು ಇರುವ ಕಾಲಾವಧಿಯನ್ನು 2025ರ ಮೇ 31ರವರೆಗೆ ವಿಸ್ತರಿಸಿ ಆದೇಶಿಸಲಾಗಿದೆ. ಈ ಅವಧಿಯಲ್ಲಿ ಹೊಸ ರೈತರ ನೋಂದಣಿಗೆ ಅವಕಾಶ ಇರುವುದಿಲ್ಲ. ಜಿಲ್ಲೆಯ ರೈತಬಾಂಧವರು ತಮ್ಮ ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಥವಾ ರೈತ ಉತ್ಪಾದಕ ಸಂಘಗಳಿಗೆ ಭೇಟಿ ನೀಡಿ, ತೊಗರಿ ಮಾರಾಟ ಮಾಡಿ ಸದರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.