ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಿದ್ದು, ಅವರು ತಮ್ಮ ಮಾತನ್ನು ಸಾಬೀತುಪಡಿಸಿದರೆ ನಾನು ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡುವುದಲ್ಲದೆ, ರಾಜಕೀಯದಿಂದ ನಿವೃತ್ತಿ ಘೋಷಿಸುತ್ತೇನೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸವಾಲು ಹಾಕಿದ್ದಾರೆ.
ಬಿಜೆಪಿ ಕಾರ್ಯಾಲಯದ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಯರಾಮ್ ರಮೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ ಖರ್ಗೆ ಅವರು, ಚುನಾವಣೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರರನ್ನು ಕಾಂಗ್ರೆಸ್ ಸೋಲಿಸಿಲ್ಲ. ಬಾಬಾಸಾಹೇಬರನ್ನು ಸೋಲಿಸಿದ್ದು ಕಮ್ಯುನಿಸ್ಟ್ ಪಕ್ಷದ ಡಾಂಗೆ ಮತ್ತು ಆರ್‍ಎಸ್‍ಎಸ್‍ನ ಸಾವರ್ಕರ್ ಎಂದು ಹೇಳಿದ್ದಾರೆ. ಈ ನಾಲ್ವರು ಮುಖಂಡರು ತಮ್ಮ ಮಾತನ್ನು ಸಾಬೀತುಪಡಿಸಿದರೆ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯದಿಂದ ನಿವೃತ್ತಿ ಘೋಷಿಸಲು ಸಿದ್ಧ ಎಂದು ಪ್ರಕಟಿಸಿದರು.
ಕಾಂಗ್ರೆಸ್ ನಾಯಕರು ಬಾಬಾಸಾಹೇಬ್ ಅಂಬೇಡ್ಕರ್ ರವರ ಸೋಲಿನ ಸಂಬಂಧ ತಮ್ಮ ಮಾತನ್ನು ಸಾಬೀತುಪಡಿಸಿದರೆ ನನ್ನ ಸ್ವಂತ ವೇತನದಲ್ಲಿ ಒಂದು ಲಕ್ಷದ ಒಂದು ರೂಪಾಯಿಯನ್ನು ಬಹುಮಾನವಾಗಿ ನೀಡುತ್ತೇನೆ. ಒಂದು ವೇಳೆ ಸಾಬೀತುಪಡಿಸುವಲ್ಲಿ ವಿಫಲರಾದರೆ ಮೇಲಿನ ನಾಲ್ವರು ಮುಖಂಡರು ರಾಜೀನಾಮೆ ನೀಡಲು ಮತ್ತು ರಾಜಕೀಯದಿಂದ ನಿವೃತ್ತಿ ನೀಡಲು ಸಿದ್ದರಿದ್ದಾರೆಯೇ? ಎಂದು ಪ್ರಶ್ನಿಸಿದರು.
ಖರ್ಗೆ ಯವರು ಮತ್ತು ಅವರ ಮಗ ಡಬಲ್ ಇಂಜಿನ್ ಸುಳ್ಳುಗಾರರು. ಇಂತಹ ಖರ್ಗೆಗಳಿಂದ ಬಾಬಾಸಾಹೇಬ್ ಮತ್ತು ದಲಿತರಿಗೆ ಅನ್ಯಾಯವಾಗಿದೆ. ಅಂಬೇಡ್ಕರ್ ರವರಿಗೆ ಈ ದೇಶದಲ್ಲಿ ನ್ಯಾಯ ಸಿಗಲಿಲ್ಲವೆಂದು ಹೇಳಿದ್ದು, ಕಾಂಗ್ರೆಸ್ ಪಕ್ಷವು 65 ವರ್ಷ ಆಳ್ವಿಕೆ ಮಾಡಿ ಏಕೆ ನ್ಯಾಯ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರು ಸಂವಿಧಾನ ಕಾಪಾಡುವುದು ನಮ್ಮ ಹಕ್ಕು ಎಂದು ಹೇಳುತ್ತಾರೆ. ಸಂವಿಧಾನ ಕಾಪಾಡುವುದು ಮಾತ್ರ ಕಾಂಗ್ರೆಸ್ ನವರ ಹಕ್ಕು ಮಾತ್ರವೇ? ಎಂದು ಕೇಳಿದರು. ಸಂವಿಧಾನವನ್ನು ಕಾಪಾಡುವುದು ಈ ರಾಜ್ಯದ ಮತ್ತು ದೇಶದ ಜನರ ಹಕ್ಕಾಗಿದೆ. ಬಾಬಾಸಾಹೇಬರ ಸಂವಿಧಾನದಿಂದ ಈ ದೇಶದ ಚಹಾ ಮಾರುವ ವ್ಯಕ್ತಿ ಪ್ರಧಾನಿಯಾಗಿದ್ದಾರೆ ಎಂದು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ರವರು ಹೇಳಿದ್ದು, ಕಾಂಗ್ರೆಸ್ ನಾಯಕರ ಬಾಯಿಯಲ್ಲಿ ಇಂತಹ ಮಾತುಗಳು ಬಂದಿರುವುದಿಲ್ಲ. ಸಂವಿಧಾನಕ್ಕೆ ನಿಜವಾದ ಅಪಮಾನ ಮಾಡಿರುವುದು ಅದು ಕಾಂಗ್ರೆಸ್ ನವರ ಕಾಲದಲ್ಲಿ ಎಂದು ಟೀಕಿಸಿದರು.
ಈ ದೇಶದ ವಿರೋಧ ಪಕ್ಷದ ನಾಯಕರಾದ ಮಾನ್ಯ ರಾಹುಲ್ ಗಾಂಧಿ ಅÀವರು ಈ ದೇಶದ ಸಂವಿಧಾನ ಸಾವಿರ ವರ್ಷಗಳ ಹಿಂದೆ ಬಂದಿದೆ ಎಂದು ಹೇಳಿಕೆ ನೀಡುತ್ತಾರೆ. ಅವರಿಗೆ ಬುದ್ಧಿ ತಲೆಯಲ್ಲಿ ಇದೆಯೋ ಅಥವಾ ಪಾದಗಳಲ್ಲಿ ಇದೆಯೋ ಎಂದು ನನಗೆ ಅರ್ಥವಾಗುತ್ತಿಲ್ಲ. ಈ ರೀತಿ ಹೇಳಿಕೆ ನೀಡಿದ ರಾಹುಲ್ ಗಾಂಧಿ ಯವರು ವಿರುದ್ಧ ಕಾಂಗ್ರೆಸ್ ನಾಯಕರು ಯಾವುದೇ ಮಾತನಾಡದಿರುವುದು ಸಂವಿಧಾನ ಮತ್ತು ಬಾಬಾಸಾಹೇಬರಿಗೆ ಅಪಚಾರ; ನೀವು ಹೇಗೆ ಸಂವಿಧಾನವನ್ನು ಕಾಪಾಡುತ್ತೀರಿ ಎಂದು ತಿಳಿಸಿದರು.
ಮೀಸಲಾತಿಗೆ ಬಿಜೆಪಿ ಮತ್ತು ಆರ್‍ಎಸ್‍ಎಸ್ ವಿರೋಧÀವಿತ್ತು ಎಂದು ಖರ್ಗೆ ರವರು ಹೇಳಿಕೆ ನೀಡಿದ್ದು, ವಿರೋಧ ಯಾವತ್ತು ಇತ್ತು?; ಮೊದಲು ಈ ದೇಶವನ್ನು ಆಳಿದವರು ಬಿಜೆಪಿ ಮತ್ತು ಆರ್‍ಎಸ್‍ಎಸ್ ರವರೇ?. ಈ ದೇಶದಲ್ಲಿ ಸಮಾನತೆ ಬರುವವರೆಗೆ ಮೀಸಲಾತಿ ಇರಬೇಕು ಎಂದು ಆರ್‍ಎಸ್‍ಎಸ್ ರವರು ಹೇಳಿದ್ದಾರೆ. ಹಾಗೆಯೇ ಎಂದಿಗೂ ಮೀಸಲಾತಿಯನ್ನು ತೆಗೆಯುವುದಿಲ್ಲವೆಂದು ಬಿಜೆಪಿ ಹೇಳುತ್ತದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಹೆಚ್ಚಿಸಿದ್ದು ಯಾರು ಎಂದು ಪ್ರಶ್ನಿಸಿದರು. ಪ್ರಸ್ತುತ ಒಳಮೀಸಲಾತಿಯನ್ನು ಜಾರಿಗೆ ತರಲು ನಿಮಗೆ ಯೋಗ್ಯತೆ ಇಲ್ಲ; ಇನ್ನೂ ಮೀನಾಮೇಷ ಮಾಡುತ್ತಿದ್ದೀರಿ. ಒಳಮೀಸಲಾತಿ ಜಾರಿ ಮಾಡಲು ನ್ಯಾಯಾಲಯಗಳೇ ಹೇಳಿzರೂ ನೀವು ಮಾಡುತ್ತಿಲ್ಲ ಎಂದು ಆರೋಪಿಸಿದರು.
ಬಾಬಾಸಾಹೇಬರಿಗೆ ಗೌರವ ಸಿಕ್ಕಿರುವುದು ಬಿಜೆಪಿ ಕಾಲದಲ್ಲಿ. ಬಾಬಾಸಾಹೇಬರು ಸತ್ತಾಗ ಆರಕ್ಕೆ ಮೂರು ಜಾಗ ನೀಡಲು ನೀವು ಯೋಗ್ಯರಿರಲಿಲ್ಲ. ಕಾಂಗ್ರೆಸ್ಸಿನ ಗುಲಾಮಗಿರಿಯಲ್ಲಿ ನೀವು ಅವರಿಗೆ ನೂರಾರು ಎಕರೆ ಭೂಮಿಗಳನ್ನು ನೀಡಿದ್ದು, ಬಾಬಾಸಾಹೇಬರಿಗೆ ಯಾಕೆ ನೀಡಲಿಲ್ಲ ಹಾಗೂ ಅವರ ಪಂಚ ಕ್ಷೇತ್ರಗಳನ್ನು ಏಕೆ ರಾಷ್ಟ್ರೀಯ ಸ್ಮಾರಕಗಳನ್ನಾಗಿ ಮಾಡಲಿಲ್ಲ. ಬಿಜೆಪಿ ಯವರು ನಿಮ್ಮನ್ನು ಕೇಳಬೇಕಿತ್ತೇ ಬಾಬಾಸಾಹೇಬರಿಗೆ ಗೌರವ ನೀಡಲು. ಈ ವಿಷಯವನ್ನು ಏಕೆ ಖರ್ಗೆ ರವರು ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.
ಬಿಹಾರದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಜನ ಸೇರಿಲ್ಲವೆಂದು ಖರ್ಗೆಯವರು ಬಿಹಾರ್ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರನ್ನು ಅಮಾನತು ಮಾಡುತ್ತಾರೆ. ಇಂತಹ ಗುಲಾಮಗಿರಿ ಪರಿಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದರು.
ಸುಹಾಸ್ ಶೆಟ್ಟಿ ಹತ್ಯೆಗೆ ಮುಂಚೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದರು. ಆದರೆ ಪೊಲೀಸ್ ಅಧಿಕಾರಿಗಳು ನಿನಗೆ ಬೆದರಿಕೆ ಇದೆ; ನಾವು ನಿನಗೆ ಯಾವುದೇ ರಕ್ಷಣೆ ನೀಡುವುದಿಲ್ಲ ಹಾಗೂ ನಿನ್ನ ಮನೆ ಮತ್ತು ಕಾರಿನಲ್ಲಿ ಯಾವುದೇ ಆಯುಧಗಳನ್ನು ಇಟ್ಟುಕೊಳ್ಳಬಾರದು ಎಂದು ಸುಹಾಸ್‍ಗೆ ಹೇಳುತ್ತಾರೆ. ಇದು ಪೊಲೀಸ್ ನೀಡುವ ಹೇಳಿಕೆಯೇ?. ಪೊಲೀಸ್ ಅಧಿಕಾರಿಗಳು ಸುಹಾಸ್ ಶೆಟ್ಟಿಗೆ ರಕ್ಷಣೆ ನೀಡದೆ ಹಂತಕರಿಗೆ ಮಾಹಿತಿಯನ್ನು ಪೊಲೀಸ್ ರವರೇ ನೀಡಿದಂತಿದೆ ಎಂದು ಆರೋಪಿಸಿದರು.
ಸುಹಾಸ್ ಶೆಟ್ಟಿ ಹತ್ಯೆಯಾದ ನಂತರ ತಕ್ಷಣ ಎಫ್‍ಐಆರ್ ಹಾಕದೆ, ಇಬ್ಬರು ಹಿಂದೂಗಳನ್ನು ಎಫ್‍ಐಆರ್‍ನಲ್ಲಿ ಸೇರಿಸುವ ಸಂಬಂಧ ನಿಧಾನವಾಗಿ ಎಫ್‍ಐಆರ್ ಹಾಕಲಾಗಿದೆ ಎಂದು ಜನ ಮಾತನಾಡುತ್ತಿದ್ದಾರೆ. ಇದಕ್ಕೆ ನಿಮ್ಮ ಉತ್ತರವೇನು?. ಇವತ್ತು ಹಂತಕರು ಸಾಮಾಜಿಕ ಜಾಲತಾಣದಲ್ಲಿ ಮತ್ತಿಬ್ಬರನ್ನು ಹತ್ಯೆ ಮಾಡಲು ಗುರಿ ಮಾಡಿದ್ದು, ಅವರ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಳಿದ್ದಲ್ಲದೆ, ಅಂದರೆ ರಕ್ತಪಾತ ಆಗಲಿ ಎನ್ನುವ ಉದ್ದೇಶವಿದೆ ಹಾಗೂ ಹಿಂದೂ ಕಾರ್ಯಕರ್ತರನ್ನು ನೀವೇ ಗುರಿ ಮಾಡುತ್ತಿದ್ದೀರಿ. ನಿಮ್ಮ ಕುಮ್ಮಕ್ಕಿನಿಂದ ಈ ರೀತಿಯ ಹತ್ಯೆಗಳು ನಡೆಯುತ್ತಿದೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಸರ್ಕಾರದ ಆಡಳಿತದ ಪರಿಣಾಮವಾಗಿ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಶೂನ್ಯವಾಗಿದೆ. ಕೆಪಿಎಸ್‍ಸಿ ಯ ಸಭೆಗೂ ಮತ್ತು ಅತೀಕ್ ಎಂಬ ನಿವೃತ್ತ ಅಧಿಕಾರಿಗೂ ಏನು ಸಂಬಂಧ. ಅತೀಕ್ ರವರು ಖಾಸಗಿ ಹೋಟೆಲ್‍ನಲ್ಲಿ ಸಭೆ ನಡೆಸಿ ಅಭ್ಯರ್ಥಿಗಳಿಗೆ 8 ಗಂಟೆ ರಾತ್ರಿಯಲ್ಲಿ 12 ಗಂಟೆ ಒಳಗಡೆ ಪರೀಕ್ಷೆಯ ಪ್ರವೇಶ ಪತ್ರ ತೆಗೆದುಕೊಳ್ಳಲು ಅವರು ಸೂಚಿಸುತ್ತಾರೆ. ಎಲ್ಲಾ ನಿರ್ಧಾರಗಳನ್ನು ಅತೀಕ್ ರವರೇ ತೆಗೆದುಕೊಳ್ಳುತ್ತಾರೆ ಎಂದು ಕೆಪಿಎಸ್‍ಸಿ ಸದಸ್ಯರು ಹೇಳಿಕೆ ನೀಡುತ್ತಾರೆ. ಮುಖ್ಯಮಂತ್ರಿಗಳೇ ನಿಮಗೆ ಅವರ ಮೇಲೆ ಬಹಳ ಅಭಿಮಾನವಿದ್ದರೆ ಮತ್ತು ಅವರನ್ನು ಆತ್ಮೀಯರಾಗಿ ಬಳಕೆ ಮಾಡಬೇಕೆಂದರೆ ನಿಮ್ಮ ಮುಖ್ಯಮಂತ್ರಿ ಸ್ಥಾನವನ್ನು ಅವರಿಗೆ ನೀಡಿ ಎಂದು ಆಗ್ರಹಿಸಿದರು.
ಸುಹಾಸ್ ಹತ್ಯೆಗೆ ಸರ್ಕಾರದಿಂದಲೇ ಫಾಝಿಲ್ ತಮ್ಮನಿಗೆ ಸುಫಾರಿಗೆಂದು 5 ಲಕ್ಷ ರೂ ನೀಡಿದ್ದಾರೆ ಪೊಲೀಸ್ ಆಯುಕ್ತರ ವರದಿಯಲ್ಲಿ ತಿಳಿಸಿದ್ದು, ಆದರೆ ಈ ವರದಿಯನ್ನು ಸಮರ್ಥಿಸಿಕೊಳ್ಳಲು ವಿಧಾನಸಭಾ ಅಧ್ಯಕ್ಷರಾದ ಮಾನ್ಯ ಯು.ಟಿ ಖಾದರ್ ರವರು ಹೋಗಿ ಅವರೇ ಬೆತ್ತಲಾಗಿದ್ದಾರೆ. ನನ್ನ ಅನಿಸಿಕೆಯ ಪ್ರಕಾರ ಯು.ಟಿ ಖಾದರ್ ರವರು ಈ ವಿಷಯದಲ್ಲಿ ಮೂಗು ತೂರಿಸಬಾರದಿತ್ತು. ಈ ರೀತಿ ಸಮರ್ಥಿಸಿಕೊಂಡಿರುವ ಯು.ಟಿ ಖಾದರ್ ರವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರವು ಒಳಮೀಸಲಾತಿ ನೀಡುತ್ತದೆ ಎಂದು ನನಗೆ ನಂಬಿಕೆ ಇಲ್ಲ. ಆದರೆ ಕೇಂದ್ರ ಸರ್ಕಾರವು ಜನಗಣತಿ ಸಮೀಕ್ಷೆಗೆ ಆದೇಶ ಮಾಡುತ್ತಿದೆ. ಜನಗಣತಿÀ ಮಾಡುವುದಕ್ಕೆ ಯಾವುದೇ ರಾಜ್ಯ ಸರ್ಕಾರಗಳಿಗೆ ಅಧಿಕಾರವಿಲ್ಲ. ಇಂತಹ ಸಮಯದಲ್ಲಿ ಅಧಿಕಾರವಿರುವ ಕೇಂದ್ರ ಸರ್ಕಾರ ಸಮೀಕ್ಷೆ ಮಾಡಿದ ನಂತರ ರಾಜ್ಯದ ಅಂಕಿಅಂಶಗಳ ಸಮೀಕ್ಷೆಗೂ ಮತ್ತು ಕೇಂದ್ರ ಅಂಕಿಅಂಶಗಳ ಸಮೀಕ್ಷೆಗೂ ವ್ಯತ್ಯಾಸವಾದರೆ ಯಾರು ಉತ್ತರ ಕೊಡುತ್ತಾರೆ ಎಂದು ಪ್ರಶ್ನಿಸಿದರು.
ಜನರಿಗೆ ಕಷ್ಟ ಬಂದಾಗ ಮತ್ತು ಸರ್ಕಾರವನ್ನು ಪ್ರಶ್ನಿಸಲು ವಿರೋಧ ಪಕ್ಷದವರಾಗಿ ನಾವು ಸ್ಥಳಕ್ಕೆ ಹೋಗಬೇಕು. ಆದರೆ ಕಾಂಗ್ರೆಸ್ ಸರ್ಕಾರವು ಅದನ್ನು ರಾಜಕೀಯವೆಂದು ವಿಶ್ಲೇಷಿಸುತ್ತದೆ ಎಂದು ಆರೋಪಿಸಿದರು.