ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಲಾಸ್ಯಾ ನಾಗರಾಜ್ ಅವರ ತಾಯಿ ಮೇಲೆ ಹಲ್ಲೆ ಲಾಸ್ಯಾ ನಾಗರಾಜ್ ತಾಯಿ ಡಾ. ಸುಧಾ ನಾಗರಾಜ್ ಅವರ ಮೇಲೆ ತಂಗಿಯಿಂದಲೇ ಹಲ್ಲೆ ನಡೆದಿದೆ.
ಬೆಂಗಳೂರಿನ ಬಸವೇಶ್ವರನಗರ ನಿವಾಸದಲ್ಲಿ ಘಟನೆ ನಡೆದಿದೆ. ಸುಧಾ ನಾಗರಾಜ್ ಅವರ ಸಹೋದರಿ ಮಂಗಳಾ ಶಶಿಧರ್ ಮತ್ತು ಅವರ ಪತಿ ಶಶಿಧರ್ ಡ್ಯಾನ್ಸ್ ಕ್ಲಾಸ್ ವಿಚಾರಕ್ಕೆ ಜಗಳವಾಡಿ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.
ಈ ಘಟನೆ ಬೆಂಗಳೂರಿನ ಬಸವೇಶ್ವರನಗರದ ನಿವಾಸದಲ್ಲಿ ಇಂದು ಬೆಳಗ್ಗೆ ನಡೆದಿದೆ. ಒಂದೇ ಕಟ್ಟಡದ ಎರಡು ಮಹಡಿಗಳಲ್ಲಿ ಅಕ್ಕ-ತಂಗಿಯ ಕುಟುಂಬದವರು ವಾಸ ಮಾಡುತ್ತಿದ್ದಾರೆ. ಅಕ್ಕ ಸುಧಾ ನಾಗರಾಜ್ ಮೊದಲ ಮಹಡಿಯಲ್ಲಿ ಮತ್ತು ತಂಗಿ ಮಂಗಳ ಶಶಿಧರ್ ಕೆಳ ಮಹಡಿಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಮನೆಯ ಮುಂದಿನ ಜಾಗದ ವಿಚಾರವಾಗಿ ತಂಗಿ ಹಾಗೂ ತಂಗಿಯ ಗಂಡ ಸೇರಿಕೊಂಡು ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಘಟನೆಯ ನಂತರ ಸುಧಾ ನಾಗರಾಜ್ ಅವರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದು, ಚೇತರಿಕೆ ನಂತರ ಹಲ್ಲೆಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.