ಬೆಂಗಳೂರು: ಬಿಬಿಎಂಪಿ ಕಾಯ್ದೆ 2020 ರ ಸೆಕ್ಷನ್ 158 ರಂತೆ ಪಾಲಿಕೆಯ ವ್ಯಾಪ್ತಿಯಲ್ಲಿನ ಯಾವುದೇ ಕಟ್ಟಡ ಅಥವಾ ಭೂಮಿ ಅಥವಾ ರಚನೆ ಅಥವಾ ಗೋಡೆ ಅಥವಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಮುಖ್ಯ ಆಯುಕ್ತರ ಲಿಖಿತ ಅನುಮತಿಯಿಲ್ಲದೆ ಯಾವುದೇ ರೀತಿಯ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿರುತ್ತದೆ.
ಮುಂದುವರೆದು, ಬಿಬಿಎಂಪಿ ಕಾಯ್ದೆ 2020 ರ ಸೆಕ್ಷನ್ 158 ರಂತೆ ಮುಖ್ಯ ಆಯುಕ್ತರ ಲಿಖಿತ ಅನುಮತಿ ಸಲ್ಲಿಸದೇ ಹೊರತು ಯಾವುದೇ ಜಾಹೀರಾತು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಮುದ್ರಣವನ್ನು ಮುದ್ರಿಸದಂತೆ ವಲಯ ಆಯುಕ್ತರುಗಳು ಈಗಾಗಲೇ ಬಿಬಿಎಂಪಿ ಕಾಯ್ದೆ 2020 ರ ಸೆಕ್ಷನ್ 307 ರನ್ವಯ ವ್ಯಾಪಾರ ಪರವಾನಗಿಯ ನಿಯಮಗಳು ಮತ್ತು ಷರತ್ತುಗಳನ್ನು ಸೂಚಿಸಿ ಆದೇಶವನ್ನು ಹೊರಡಿಸಿರುತ್ತಾರೆ.
ಬೆಂಗಳೂರು ನಗರದಲ್ಲಿ ಅನಧಿಕೃತ ಫ್ಲೇಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನೀತರೆ ಜಾಹೀರಾತು ಪ್ರದರ್ಶನಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಈ ಹಿಂದೆ ಉಲ್ಲೇಖ(1) ರಲ್ಲಿ ಹೊರಡಿಸಲಾಗಿದ್ದ ಪ್ರಮಾಣಿತ ಕಾರ್ಯಚರಣಾ ವಿಧಾನ (SoP) ಅನ್ನು ಹಿಂಪಡೆದು ಪರಿಷ್ಕೃತ ಪ್ರಮಾಣಿತ ಕಾರ್ಯಾಚರಣಾ ವಿಧಾನ (SoP) ಅನ್ನು ಈ ಕೆಳಗಿನಂತೆ ಹೊರಡಿಸಲಾಗಿದೆ.
1. ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ / ಅಳವಡಿಸುವ ಫ್ಲೇಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನೀತರೆ ಜಾಹೀರಾತು ಪ್ರದರ್ಶನಗಳನ್ನು ತೆರುವಗೊಳಿಸಲು, ಮಾರ್ಷಲ್ಸ್ ಮತ್ತು ಪ್ರಹರಿಯವರ ಸಹಯೋಗದೊಂದಿಗೆ ಕಿರಿಯ ಅಭಿಯಂತರರು / ಸಹಾಯಕ ಅಭಿಯಂತರರು / ಸಹಾಯಕ ಕಾರ್ಯಪಾಲಕ ಅಭಿಯಂತರರುಗಳ ತಂಡಗಳನ್ನು (ಬಿಬಿಎಂಪಿ ಜಾಹೀರಾತು ನಿಯಂತ್ರಣ ತಂಡ) ವಲಯ ಆಯುಕ್ತರು ರಚಿಸತಕ್ಕದ್ದು.
2. ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಕಟೌಟ್ ಹಾಗೂ ಇನ್ನಿತರೆ ಜಾಹೀರಾತುಗಳನ್ನು ತೆಗೆದುಹಾಕುವ ಹಾಗೂ ಅನಧಿಕೃತವಾಗಿ ಅಳವಡಿಸಲಾಗಿರುವವರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ(ಎಫ್‌ಐಆರ್) ದಾಖಲಿಸುವ ಹಾಗೂ ದಂಡ ವಿಧಿಸುವ ಕಾರ್ಯದ ಮೇಲ್ವಿಚಾರಣೆ ಮಾಡುವ ಅಧಿಕಾರವನ್ನು ಸಂಬಂಧಪಟ್ಟ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ರವರಿಗೆ ನೀಡಲಾಗಿದೆ.
3. ವಾರ್ಡ್‌ನ ಕಿರಿಯ / ಸಹಾಯಕ ಅಭಿಯಂತರರುಗಳು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೇಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನೀತರೆ ಜಾಹೀರಾತು ಅಳವಡಸಿರುವವರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ನೋಂದಣಿಗಾಗಿ ದೂರು ದಾಖಲಿಸುವುದು. ಯಾವುದಾದರೂ ವಾರ್ಡ್‌ನಲ್ಲಿ ಕಿರಿಯ / ಸಹಾಯಕ ಅಭಿಯಂತರರ ಹುದ್ದೆ ಖಾಲಿಯಿದ್ದಲ್ಲಿ, ಸಹಾಯಕ ಕಾರ್ಯಪಾಲಕ ಅಭಿಯಂತರರು ಹೊರಗುತ್ತಿಗೆ ಕಿರಿಯ / ಸಹಾಯಕ ಅಭಿಯಂತರ ಮುಖೇನಾ ಅನಧಿಕೃತ ಫ್ಲೇಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನೀತರೆ ಜಾಹೀರಾತು ಪ್ರದರ್ಶನಗಳನ್ನು ತೆಗೆದುಹಾಕಲು ಕ್ರಮ ವಹಿಸುವುದು ಹಾಗೂ ಸಂಬಂಧಪಟ್ಟ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ದೂರಿನೊಂದಿಗೆ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ನೋಂದಾಯಿಸಲು ಕ್ರಮವಹಿಸತಕ್ಕದ್ದು.
4. ಅನಧಿಕೃತ ಫ್ಲೇಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನೀತರೆ ಜಾಹೀರಾತು ಪ್ರದರ್ಶನದ ಬಗ್ಗೆ ದೂರುಗಳನ್ನು ಸ್ವೀಕರಿಸಲು ಸಹಾಯಕ ಕಾರ್ಯಪಾಲಕ ಅಭಿಯಂತರವರ ಕಚೇರಿಯಲ್ಲಿ ನಿಯಂತ್ರಣ ಕೊಠಡಿಯನ್ನು ತೆರೆಯತಕ್ಕದ್ದು.
5. ಬಿಬಿಎಂಪಿ ಜಾಹೀರಾತು ನಿಂಯತ್ರಣ ತಂಡವು ಸಂಬಂಧಪಟ್ಟ ಪೊಲೀಸ್ ಠಾಣೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತಮ್ಮ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆಯನ್ನು ಪೊಲೀಸ್ ಠಾಣೆಗೆ ನೀಡತಕ್ಕದ್ದು.
6. ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ / ಅಳವಡಿಸುವ ಅನಧಿಕೃತ ಫ್ಲೇಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನೀತರೆ ಜಾಹೀರಾತು ಪ್ರದರ್ಶನಗಳ ಬಗ್ಗೆ ಸಹಾಯ ಆಪ್ (1533) ಮೂಲಕ ಅಥವಾ ಸ್ಥಳೀಯ ನಿಯಂತ್ರಣ ಕೊಠಡಿಯ ಮೂಲಕ ಸ್ವೀಕರಿಸಿದ ದೂರುಗಳನ್ನು ತಕ್ಷಣವೇ ಪರಿಶೀಲಿಸಿ ತೆರವು ಕಾರ್ಯಚರಣೆ ನಡೆಸತಕ್ಕದ್ದು.
7. ವಲಯ ವ್ಯಾಪ್ತಿಯಲ್ಲಿನ ಬಿಬಿಎಂಪಿ ಜಾಹೀರಾತು ನಿಯಂತ್ರಣ ತಂಡಗಳು ಸಂಬಂಧಪಟ್ಟ ಪೊಲೀಸರೊಂದಿಗಿನ ಸಮನ್ವಯದಿಂದ ಈ ಕೆಳಕಂಡಂತೆ ಕಾರ್ಯನಿರ್ವಹಿಸತಕ್ಕದ್ದು.
(i) ರಚಿಸಲಾಗಿರುವ ಬಿಬಿಎಂಪಿ ಜಾಹೀರಾತು ನಿಂಯತ್ರಣ ತಂಡಗಳು 24/7 ಕಾರ್ಯನಿರ್ವಹಿಸತಕ್ಕದ್ದು ಹಾಗೂ ಸದರಿ ತಂಡದ ಕನಿಷ್ಠ ಒಬ್ಬರು ಯಾವುದೇ ಸಮಯದಲ್ಲಿ ಪ್ರತಿ ಪೊಲೀಸ್ ಠಾಣೆಯಲ್ಲಿ ಹಾಜರಿರತಕ್ಕದ್ದು.
(ii) ಕಾರ್ಯನಿರ್ವಾಹಕರ ಹೆಸರು, ಹುದ್ದೆ, ಮೊಬೈಲ್ ಸಂಖ್ಯೆ ಮತ್ತು ನಿಯಂತ್ರಣ ಕೊಠಡಿ ಸಂಖ್ಯೆಯ ವಿವರಗಳುಳ್ಳ ಜಾಹೀರಾತು ನಿಂಯತ್ರಣ ತಂಡದ ಪಟ್ಟಿಯನ್ನು ಸಿದ್ದಪಡಿಸಿ ಪ್ರತಿ ಪೊಲೀಸ್ ಠಾಣೆಗೆ ನೀಡತಕ್ಕದ್ದು ಹಾಗೂ ಸಾರ್ವಜನಿಕರ ಮಾಹಿತಿಗೆ ಪ್ರಕಟಿಸತಕ್ಕದ್ದು.
(iii) ಪಾಲಿಕೆಯ ಜಾಹೀರಾತು ನಿಂಯತ್ರಣ ತಂಡಗಳೊಂದಿಗೆ ಸಮನ್ವಯ ಸಾಧಿಸಲು ಪೊಲೀಸ್ ಇಲಾಖೆಯು ಪ್ರತಿ ಪೊಲೀಸ್ ಠಾಣೆಗೆ ಒಬ್ಬರನ್ನು ನೋಡಲ್ ಅಧಿಕಾರಿಯನ್ನು ನೇಮಿಸಿ, ಅವರ ವಿವರಗಳನ್ನು ಮತ್ತು ದೂರವಾಣಿ ಸಂಖ್ಯೆಯನ್ನು ಹಂಚಿಕೊಳ್ಳುವುದರೊಂದಿಗೆ ಆಯಾ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ಹಾಗೂ ಸಹಾಯಕ ಸಬ್ ಇನ್ಸ್‌ಪೆಕ್ಟರ್ ರವರುಗಳ ವಿವರಗಳನ್ನು ನೀಡತಕ್ಕದ್ದು.
(iv) ಹೊಯ್ಸಳ ಮತ್ತು ಇತರೆ ಪೊಲೀಸ್ ಗಸ್ತು ಸಿಬ್ಬಂದಿಗೆ ಬಿಬಿಎಂಪಿ ಜಾಹೀರಾತು ನಿಂಯತ್ರಣ ತಂಡದವರ ದೂರವಾಣಿ ಸಂಖ್ಯೆ ಮತ್ತು ಕರ್ತವ್ಯ ಚಾರ್ಟ್ ಅನ್ನು ಪೊಲೀಸ್ ಇಲಾಖೆಯು ಸಂಬಂಧಪಟ್ಟ ಪೊಲೀಸ್ ಠಾಣೆಗೆ ನೀಡತಕ್ಕದ್ದು.
(v) ಹೊಯ್ಸಳ ಮತ್ತು ಇತರೆ ಪೊಲೀಸ್ ಗಸ್ತು ಸಿಬ್ಬಂದಿಗಳು ಗಸ್ತು ಸಮಯದಲ್ಲಿ ಯಾವುದಾದರೂ ಅನಧಿಕೃತ ಫ್ಲೇಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನೀತರೆ ಜಾಹೀರಾತು ಅಳವಡಿಸಿರುವುದು ಹಾಗೂ ಅಳವಡಿಸುತ್ತಿರುವುದು ಕಂಡು ಬಂದಲ್ಲಿ ತಕ್ಷಣವೇ ತಮ್ಮ ಪೊಲೀಸ್ ಠಾಣೆಗೆ ನಿಯೋಜಿಸಲಾದ ಬಿಬಿಎಂಪಿ ಜಾಹೀರಾತು ನಿಂಯತ್ರಣ ತಂಡವನ್ನು ಸಂಪರ್ಕಿಸಿ ಮಾಹಿತಿ ನೀಡತಕ್ಕದ್ದು.
(vi) ಮಾಹಿತಿ ಸ್ವೀಕರಿಸಿದ ತಕ್ಷಣವೇ ಬಿಬಿಎಂಪಿ ಜಾಹೀರಾತು ನಿಯಂತ್ರಣ ತಂಡವು ಸ್ಥಳಕ್ಕೆ ತೆರಳಿ ಅನಧಿಕೃತ ಫ್ಲೇಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನೀತರೆ ಜಾಹೀರಾತುಗಳನ್ನು ತೆರವುಗೊಳಿಸತಕ್ಕದ್ದು ಹಾಗೂ ಪೊಲೀಸ್ ಕಾರ್ಯವಿಧಾನದನ್ವಯ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ನೋಂದಾಯಿಸಲು ಕ್ರಮವಹಿಸತಕ್ಕದ್ದು.
(vii) ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ಯನ್ನು ಅನಧಿಕೃತ ಫ್ಲೇಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನೀತರೆ ಜಾಹೀರಾತುಗಳನ್ನು ಅಳವಡಿಸಿರುವವರ ವಿರುದ್ದ ಹಾಗೂ ಫಲಾನುಭವಿಯ ವಿರುದ್ಧ ದಾಖಲಿಸತಕ್ಕದ್ದು.
(viii) ಪೊಲೀಸರು ಈ ರೀತಿ ದೂರುಗಳನ್ನು ಪರಿಗಣಿಸಿ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ಯನ್ನು ದಾಖಲಿಸಿ ಹಾಗೂ ಅಂತಹವರ ವಿರುದ್ದ ಬಂಧನ ಸೇರಿದಂತೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳತಕ್ಕದ್ದು. ಅನಧಿಕೃತ ಫ್ಲೇಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನೀತರೆ ಜಾಹೀರಾತುಗಳ ಫಲಾನುಭವಿಯ ವಿರುದ್ಧ ಪೊಲೀಸರು ತನಿಖೆ ನಡೆಸತಕ್ಕದ್ದು, ಸದರಿ ಕಾರ್ಯದಲ್ಲಿ ಅವರ ಪಾಲ್ಗೊಳ್ಳುವಿಕೆ ಇದ್ದಲ್ಲಿ ಆರೋಪಣಾ ಪಟ್ಟಿಯಲ್ಲಿ ಅವರ ಹೆಸರನ್ನು ಸೇರ್ಪಡೆ ಮಾಡತಕ್ಕದ್ದು.
(ix) ಅನಧಿಕೃತ ಫ್ಲೇಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನೀತರೆ ಜಾಹೀರಾತುಗಳನ್ನು ಅಳವಡಿಸುತ್ತಿರುವುದು ಕಂಡು ಬಂದಲ್ಲಿ ಪೊಲೀಸರು ಅಪರಾಧಿಗಳನ್ನು ಕಾನೂನಿನ ಪ್ರಕಾರ ಸ್ಥಳದಲ್ಲೇ ಬಂಧಿಸತಕ್ಕದ್ದು ಮತ್ತು ಬಿಬಿಎಂಪಿ ಜಾಹೀರಾತು ನಿಯಂತ್ರಣ ತಂಡವು ಸ್ಥಳಕ್ಕೆ ತೆರಳಿ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) / ಪ್ರಕರಣ ದಾಖಲಿಸಲು ಕ್ರಮವಹಿಸಿ, ವಶಪಡಿಸಿಕೊಂಡ ವಸ್ತುಗಳನ್ನು ಕಾನೂನಿನ ಪ್ರಕಾರ ವಿಲೇವಾರಿ ಮಾಡತಕ್ಕದ್ದು.
(x) ಅನಧಿಕೃತ ಫ್ಲೇಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನೀತರೆ ಜಾಹೀರಾತುಗಳನ್ನು ಮುದ್ರಿಸಿದ ಮುದ್ರಕರು ಕಂಡು ಬಂದಲ್ಲಿ ಅಂತಹವರ ವಿರುದ್ದ ಪ್ರಚೋದನೆ ಹಾಗೂ ಸಹ-ಸಂಚುಕೊರರೆಂದು ಪರಿಗಣಿಸಿ ಕ್ರಿಮಿನಲ್ ಮೊಕದ್ದಮೆ ಹೂಡತಕ್ಕದ್ದು ಹಾಗೂ ಪ್ರಥಮ ವರ್ತಮಾನ ವರದಿ(ಎಫ್‌ಐಆರ್) ಯಲ್ಲಿ ಅವರ ಹೆಸರನ್ನು ಸೇರಿಸತಕ್ಕದ್ದು.
(xi) ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ಯ ನೋಂದಾಯಿಸುವ ಸಮಯದಲ್ಲಿ ಈ ಕೆಳಕಂಡ ಕಾಯ್ದೆಗಳ ನಿಬಂಧನೆಗಳನ್ನು ಸೇರಿಸತಕ್ಕದ್ದು.
a. ಬಿಬಿಎಂಪಿ ಕಾಯ್ದೆ 2020 (ಸೆಕ್ಷನ್ 254, 326 ಸೇರಿದಂತೆ)
b. ಕರ್ನಾಟಕ ಮುಕ್ತ ಸ್ಥಳಗಳು (ವಿರೂಪಗೊಳಿಸುವಿಕೆ ತಡೆಗಟ್ಟುವಿಕೆ) ಕಾಯ್ದೆ 1981,
c. ಭಾರತೀಯ ನ್ಯಾಯ ಸಂಹಿತಾ,
d. ಆಸ್ತಿ ನಾಶ ಮತ್ತು ನಷ್ಟ ತಡೆಗಟ್ಟುವಿಕೆ ಕಾಯ್ದೆ, 1981,
e. ಸಾರ್ವಜನಿಕ ಆಸ್ತಿಗೆ ಹಾನಿ ತಡೆಗಟ್ಟುವಿಕೆ ಕಾಯ್ದೆ, 1984
f. ಯಾವುದೇ ಇತರ ಅನ್ವಯವಾಗುವ ಕಾನೂನು.
8. ಪ್ರತಿಯೊಂದು ಅನಧಿಕೃತ ಫ್ಲೆಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನಿತರೆ ಜಾಹೀರಾತುಗಳನ್ನು ತೆಗೆದುಹಾಕಲು ತಗಲುವ ವೆಚ್ಚವನ್ನು ಅನಧಿಕೃತ ಫ್ಲೆಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನೀತರೆ ಜಾಹೀರಾತುಗಳನ್ನು ಅಳವಡಿಸಿದ ವ್ಯಕ್ತಿಗಳಿಂದ 2024 ರಲ್ಲಿ ತಿದ್ದುಪಡಿ ಮಾಡಲಾದ ಬಿಬಿಎಂಪಿ ಕಾಯ್ದೆ 2020 ರ ಸೆಕ್ಷನ್ 161 ರ ಪ್ರಕಾರ ಆಸ್ತಿ ತೆರಿಗೆ ಬಾಕಿಗಳನ್ನು ವಸೂಲಿ ಮಾಡಲು ಕ್ರಮ ಜರುಗಿಸಲಾಗುತ್ತಿರುವ ಮಾದರಿಯಲ್ಲಿ ಬಡ್ಡಿ ಮತ್ತು ದಂಡಗಳೊಂದಿಗೆ ವಸೂಲಿ ಮಾಡತಕ್ಕದ್ದು. ಸಹಾಯಕ ಕಾರ್ಯಪಾಲಕ ಅಭಿಯಂತರರು ತೆರವು ಕಾರ್ಯಚರಣೆಗೆ ತಗಲಿರುವ ವೆಚ್ಚಗಳನ್ನು ಮತ್ತು ದಂಡಗಳನ್ನು ಸಂಬಂಧಪಟ್ಟವರಿಂದ ವಸೂಲಾತಿ ಮಾಡುವ ಬಗ್ಗೆ ಕ್ರಮ ವಹಿಸತಕ್ಕದ್ದು.
9. ಅನಧಿಕೃತ ಫ್ಲೇಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನೀತರೆ ಜಾಹೀರಾತುಗಳನ್ನು ತೆಗೆದುಹಾಕಲು ಮಾಡಿದ ವೆಚ್ಚಗಳನ್ನು ದಂಡದೊಂದಿಗೆ ಅನಧಿಕೃತ ಫ್ಲೇಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನೀತರೆ ಜಾಹೀರಾತುಗಳನ್ನು ಅಳವಡಿಸಿರುವವರಿಂದ ವಸೂಲಿಗೆ ಬಾಕಿ ಇದ್ದಲ್ಲಿ ಅದನ್ನು ಆಸ್ತಿ ತೆರಿಗೆ ಬಾಕಿಯಾಗಿ ವಸೂಲಿ ಮಾಡತಕ್ಕದ್ದು, ಈ ಬಗ್ಗೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ಪ್ರತಿ ಮತ್ತು ಸಂಗ್ರಹಿಸಬೇಕಾದ ಬಾಕಿಗಳ ವಿವರಗಳನ್ನು ವಸೂಲಾತಿಗಾಗಿ ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಕಳುಹಿಸತಕ್ಕದ್ದು.
10. ಪೊಲೀಸರು ತಮ್ಮ ಸಂಪೂರ್ಣ ಸಹಕಾರವನ್ನು ನೀಡತಕ್ಕದ್ದು ಮತ್ತು ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ಗಳನ್ನು ತ್ವರಿತವಾಗಿ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳತಕ್ಕದ್ದು.
11. ಈ ಪ್ರಮಾಣಿತ ಕಾರ್ಯಾಚರಣಾ ವಿಧಾನ (SoP) ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರತಕ್ಕದ್ದು ಹಾಗೂ SoP ಅನುಷ್ಠಾನಕ್ಕೆ ವಲಯದ ಜಂಟಿ ಆಯುಕ್ತರನ್ನು ನೋಡಲ್ ಅಧಿಕಾರಿಯನ್ನಾಗಿ ಹಾಗೂ ವಲಯ ಆಯುಕ್ತರನ್ನು ಒಟ್ಟಾರೆ ಮೇಲ್ವಿಚಾರಣೆ ಅಧಿಕಾರಿಯನ್ನಾಗಿ ನೇಮಿಸಿದೆ.
12. ಪ್ರಮಾಣಿತ ಕಾರ್ಯಾಚರಣಾ ವಿಧಾನ (SoP) ಅನ್ವಯ ಕಾರ್ಯಗೊಳಿಸಲು ಅನಧಿಕೃತ ಫ್ಲೆಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನೀತರೆ ಜಾಹೀರಾತು ಪ್ರದರ್ಶನಗಳನ್ನು ತಡೆಗಟ್ಟಲು ವಲಯ ಆಯುಕ್ತರು ತಮ್ಮ ಅಧಿಕಾರ ವ್ಯಾಪ್ತಿಯ Deputy Police Commissioner ಮತ್ತು ಪಾಲಿಕೆಯ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಭೆಗಳನ್ನು ನಡೆಸತಕ್ಕದ್ದು.
14. ಪೊಲೀಸ್ ಆಯುಕ್ತರು ಈ ಪ್ರಮಾಣಿತ ಕಾರ್ಯಾಚರಣಾ ವಿಧಾನ (SoP) ವನ್ನು ಪಾಲಿಕೆಯ ಸಮನ್ವಯದೊಂದಿಗೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಬೆಂಗಳೂರು ನಗರಕ್ಕೆ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಿಸತಕ್ಕದ್ದು ಹಾಗೂ ಪೊಲೀಸ್ ಠಾಣೆವಾರು ನೋಡಲ್ ಅಧಿಕಾರಿಯನ್ನು ನೇಮಿಸಿ ಅವರ ಹೆಸರು, ಹುದ್ದೆ ಮತ್ತು ಮೊಬೈಲ್ ಸಂಖ್ಯೆಯ ವಿವರಗಳನ್ನೊಳಗೊಂಡ ಲಿಖಿತ ಆದೇಶವನ್ನು ಹೊರಡಿಸತಕದ್ದು.
15. ವಿಶೇಷ ಆಯುಕ್ತರು (ಜಾಹೀರಾತು) ರವರಿಗೆ ಸಹಾಯ ಮಾಡಲು ಉಪ ಆಯುಕ್ತರು (ಜಾಹೀರಾತು) ರವರನ್ನು ಬಿಬಿಎಂಪಿ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.
16. ಮುಖ್ಯ ಆಯುಕ್ತರು, ಬಿಬಿಎಂಪಿ ಹಾಗೂ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರುಗಳು ಈ ಪ್ರಮಾಣಿತ ಕಾರ್ಯಾಚರಣೆ ವಿಧಾನ (SoP) ವು ಸರಿಯಾಗಿ ಅನುಷ್ಠಾನಗೊಳ್ಳುತ್ತಿರುವ ಬಗ್ಗೆ ನಿಯತಕಾಲಿಕವಾಗಿ ಪರಿಶೀಲಿಸತಕ್ಕದ್ದು.
ಭಯೋತ್ಪಾದನೆಯ ಬಗ್ಗೆ ಜಗತ್ತಿಗೆ ಸಂದೇಶ ತಲುಪುವಂತೆ ಪ್ರಧಾನಿ ಮೋದಿ ಇಂಗ್ಲಿಷ್ ನಲ್ಲೇ ಭಾಷಣ: ವಿಡಿಯೋ ವೈರಲ್
BREAKING : ‘ಭೂಮಿಯ ತುದಿಯವರೆಗೂ ಬೆನ್ನಟ್ಟಿ ಹುಡುಕಿ ಉಗ್ರರನ್ನು ಹೊಡೆಯುತ್ತೇವೆ’ : ಪ್ರಧಾನಿ ಮೋದಿ ಗುಡುಗು!