ಬೆಂಗಳೂರು : 15 ದಿನಗಳ ಮಟ್ಟಿಗೆ ಗ್ರಾಮ ಪಂಚಾಯಿತಿ ಉಪ ಚುನಾವಣೆ ಮುಂದೂಡಿಕೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶವನ್ನು ಪ್ರಕಟಿಸಿದೆ.
ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ.?
ರಾಜ್ಯ ಚುನಾವಣಾ ಆಯೋಗವು ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಆದೇಶದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 308ಎಎ ಮತ್ತು 308ಎಬಿ ರನ್ವಯ ಹಾಗೂ ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು, 1993ರ ನಿಯಮ 12 ರನ್ವಯ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯತಿ ಖಾಲಿ ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿರುತ್ತದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (2) ಮತ್ತು (3) ರಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಮತ್ತು ಕೆಲವು ಜಿಲ್ಲೆಯ ಜಿಲ್ಲಾಧಿಕಾರಿಗಳು ತಮ್ಮ ಮನವಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಪಾಲಿಸಲು ಹಾಗೂ ಇತರೆ ಸಮಸ್ಯೆಗಳ ಹಿನ್ನೆಲೆಯಲ್ಲಿ ಕಾಲಾವಕಾಶವನ್ನು ಕೋರಿ ಗ್ರಾಮ ಪಂಚಾಯತಿ ಉಪ-ಚುನಾವಣೆಯನ್ನು ಮುಂದೂಡುವಂತೆ ಮನವಿ ಮಾಡಿಕೊಂಡಿರುತ್ತಾರೆ.
ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳ ಉಪ-ಚುನಾವಣೆಗೆ ಸಂಬಂಧಿಸಿದಂತೆ ಈ ಕೆಳಕಂಡಂತೆ ಅದೇಶಿಸಿದೆ.ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳನ್ನು ಪರಿಗಣಿಸಿ, ಚುನಾವಣೆ ಸಿದ್ಧತೆಗೆ ಕಾಲಾವಕಾಶ ನೀಡುವುದು ಸೂಕ್ತವೆಂದು ಕಂಡುಬಂದಿರುವ ಹಿನ್ನೆಲೆಯಲ್ಲಿ, ಭಾರತ ಸಂವಿಧಾನದ ಅನುಚ್ಛೇದ 243K ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 308 ರಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಗ್ರಾಮ ಪಂಚಾಯಿತಿಗಳ ಉಪ-ಚುನಾವಣೆಯನ್ನು 15 ದಿನಗಳ ಮಟ್ಟಿಗೆ ಮುಂದೂಡಿ ಆದೇಶಿಸಿದೆ.