ನವದೆಹಲಿ: ಪಂಜಾಬ್ನಲ್ಲಿ ನಡೆದ 14 ಗ್ರೆನೇಡ್ ದಾಳಿಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ಹರ್ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಸಿಯಾನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.
ಹರ್ಪ್ರೀತ್ ಸಿಂಗ್ ಎರಡು ಅಂತರರಾಷ್ಟ್ರೀಯ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಮತ್ತು ಅಕ್ರಮವಾಗಿ ಯುಎಸ್ಗೆ ಪ್ರವೇಶಿಸಿದ್ದಾನೆ ಎಂದು ಎಫ್ಬಿಐ ಹೇಳಿದೆ. ಎಫ್ಬಿಐ ಪ್ರಕಾರ, ಬಂಧನವಾಗುವುದನ್ನು ತಪ್ಪಿಸಲು ಅವನು ಬರ್ನರ್ ಫೋನ್ಗಳನ್ನು ಬಳಸಿದ್ದಾನೆ.
ಕಳೆದ ಏಳು ತಿಂಗಳಲ್ಲಿ ಪಂಜಾಬ್ 16 ಗ್ರೆನೇಡ್ ದಾಳಿಗಳಿಂದ ತಲ್ಲಣಗೊಂಡಿದೆ. ಪೊಲೀಸ್ ಠಾಣೆಗಳು, ಧಾರ್ಮಿಕ ಸ್ಥಳಗಳು ಮತ್ತು ಬಿಜೆಪಿ ಮುಖಂಡ ಮನೋರಂಜನ್ ಕಾಲಿಯಾ ಸೇರಿದಂತೆ ಸಾರ್ವಜನಿಕ ವ್ಯಕ್ತಿಗಳ ನಿವಾಸಗಳನ್ನು ಗುರಿಯಾಗಿಸಿಕೊಂಡು ಈ ದಾಳಿಗಳು ನಡೆದಿವೆ.
ಇಂತಹ ಕನಿಷ್ಠ ೧೪ ದಾಳಿಗಳ ತನಿಖೆಯ ಸಮಯದಲ್ಲಿ ಪಸ್ಸಿಯಾ ಹೆಸರು ಕೇಳಿಬಂದಿದೆ.
ಈ ವರ್ಷದ ಆರಂಭದಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) 2024 ರ ಚಂಡೀಗಢ ಗ್ರೆನೇಡ್ ದಾಳಿ ಪ್ರಕರಣದಲ್ಲಿ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ನ ನಾಲ್ವರು ಭಯೋತ್ಪಾದಕ ಕಾರ್ಯಕರ್ತರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿತ್ತು.
ಚಂಡೀಗಢದ ವಿಶೇಷ ಎನ್ಐಎ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಪಸಿಯಾ, ಪಾಕಿಸ್ತಾನ ಮೂಲದ ನಿಯೋಜಿತ ಭಯೋತ್ಪಾದಕ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ ಅವರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.