ಪುಟಾಣಿ ಮಕ್ಕಳು ಇವತ್ತಿನ ದಿನಗಳಲ್ಲಿ ನಡೆದಾಡಲು ಕಷ್ಟಪಡುವ ಬೊಚ್ಚಿನಿಂದ ಬಳಲುತ್ತಿದ್ದಾರೆ. ಸಣ್ಣ ವಯಸ್ಸಿನ ಮಕ್ಕಳು ಹೃದಯಾಘಾದಿಂದ ಸಾವಿಗೀಡಾದ ಅನೇಕ ಘಟನೆಗಳು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿವೆ. ಇದು ಮಕ್ಕಳ ಸ್ಥಿತಿಯಾದ್ರೆ, ಇನ್ನೂ ದೊಡ್ಡವರದ್ದು ದೊಡ್ಡ ಕಥೆಯೇ ಇದೆ. ಮಧ್ಯ ವಯಸ್ಸಿನಲ್ಲಿ ಹೃದಯಾಘಾತ, ಸ್ಟ್ರೋಕ್ ನಂತಹ ಗಂಭೀರ ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗಿ ಅರ್ಧಕ್ಕೆ ಜೀವನ ಪಯಣ ಮುಗಿಸುತ್ತಿದ್ದಾರೆ. ಏನಿದರ ಇಂದಿನ ಸತ್ಯಗಳು. ಇದಕ್ಕೆ ಯಾರ ಹೊಣೆ ?
ನಾವೇ ಮಾಡಿಕೊಂಡ ಸ್ವಯಂ ಕೃತ ಅಪರಾಧಗಳು. ಹೌದು. ಇವತ್ತಿನ ದಿನಗಳಲ್ಲಿ ಎಲ್ಲದಕ್ಕೂ ಬೇರೆಯದ್ದನ್ನೇ ಅವಲಂಬಿಸಿದ್ದೇವೆ. ಓಡಾಡಲಿಕ್ಕೆ ಬೈಕ್ ಕಾರು. ತಿನ್ನಲಿಕ್ಕೆ ಹೋಟೆಲ್‌ಗಳು. ಅದರಲ್ಲೂ ಬಾಯಿ ರುಚಿ ತೀರಿಸುವ ಬೇಕರಿ ತಿಂಡಿಗಳಿಗೆ ಮೊದಲ ಆದ್ಯತೆ. ಇವನ್ನು ನೋಡುತ್ತಿದ್ದರೆ ಆರೋಗ್ಯವಂತ ಬದುಕು ಬಿಟ್ಟು ಅನಾರೋಗ್ಯ ಜೀವನದತ್ತ ವಾಲುತ್ತಿದ್ದೇವೆ ಎನ್ನುವ ಆತಂಕ.
ಈ ಪೀಠಿಕೆ ಹಿಂದಿನ ಸತ್ಯ ಇಷ್ಟೇ. ಪ್ಯಾಕಿಂಗ್ ತಿಂಡಿ ಹಾಗೂ ಬೇಕರಿ ತಿನಿಸು, ಕರಿದ ತಿಂಡಿಗಳಲ್ಲಿ ಕೈಗಾರಿಕೆಗಳಲ್ಲಿ ಉತ್ಪಾದಿಸುವ ಟ್ರಾನ್ಸ್ ಫ್ಯಾಟ್ ಬಳಸುತ್ತಾರೆ. ಫ್ರೆಂಚ್ ಫ್ರೈ, ಚಿಕನ್ ನೆಗಟ್ಸ್, ಡೋನಟ್, ಬಿಸ್ಕೆಟ್, ಕೇಕ್, ಬರ್ಗರ್ ಮತ್ತಿತರ ಆಹಾರ ಪದಾರ್ಥಗಳಲ್ಲಿ ಟ್ರಾನ್ಸ್‌ಫ್ಯಾಟ್ ಇರುತ್ತದೆ. ಈ ಟ್ರಾನ್ಸ್ ಫ್ಯಾಟ್ ತಿನಿಸುಗಳು ದೇಹಕ್ಕೆ ಸೇರಿದರೆ, ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿ ಹೃದಯಾಘಾತ, ಲಕ್ವಾ, ಡಯಾಬಿಟಿಸ್ ನಂತಹ ಕಾಯಿಲೆಗಳಿಗೆ ಒಳಗಾಗಬೇಕಾಗುತ್ತವೆ. ಮಾಂಸ ಹಾಗೂ ಡೈರಿ ಉತ್ಪನ್ನಗಳಲ್ಲಿ ನೈಸರ್ಗಿಕ ಟ್ರಾನ್ಸ್‌ಫ್ಯಾಟ್ ಅಂಶವಿರುತ್ತದೆ. ಇದು ಹೆಚ್ಚು ಸೇರಿದರೂ ಅಪಾಯದ ಸಂಭವ ಇರುತ್ತದೆ. ಆದ್ರೆ, ಕೈಗಾರಿಕೆಗಳಲ್ಲಿ ತಯಾರಾಗಿ ಬರುವ ಎಣ್ಣೆ, ವನಸ್ಪತಿ, ಮಾರ್ಗರಿನ್ ( ಬೆಣ್ಣೆ ಬದಲಿಗೆ ಬಳಸುವ ವಸ್ತು)ಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಪ್ರಮಾಣದ ಟ್ರಾನ್ಸ್‌ಫ್ಯಾಟ್ ಇರುತ್ತದೆ. ಇದು ಜನರ ಆರೋಗ್ಯವನ್ನೇ ಮಲಿನಗೊಳಿಸುತ್ತಿದೆ.
ಸಾಮಾನ್ಯವಾಗಿ ಪ್ಯಾಕಿಂಗ್ ಫುಡ್ ಮತ್ತು ಬೇಕರಿ ತಿನಿಸುಗಳ ಬಳಕೆ ಅವಧಿ ( ಶೆಲ್ ಲೈಫ್) ಹೆಚ್ಚಿಸಲಿಕ್ಕೆ ಹೈಡ್ರೋಜನೇಷನ್ ಪ್ರಕ್ರಿಯೆ ಮಾಡಿ ಟ್ರಾನ್ಸ್‌ಫ್ಯಾಟ್ ಉತ್ಪಾದಿಸುತ್ತಾರೆ. ದ್ರವ ರೂಪದಲ್ಲಿರುವ ಎಣ್ಣೆ ಪದಾರ್ಥಗಳನ್ನು ಘನ ರೂಪಕ್ಕೆ ಪರಿವರ್ತಿಸಲು ಹೈಡ್ರೋಜನೇಷನ್ ಪ್ರಕ್ರಿಯೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಟ್ರಾನ್ಸ್‌ಫ್ಯಾಟ್ ಎಂಬ ಉಪ ವಸ್ತು ಉತ್ಪಾದನೆಯಾಗುತ್ತವೆ. ಇನ್ನು ಟ್ರಾನ್ಸ್‌ಫ್ಯಾಟ್ ನ್ನೇ ಪ್ರತ್ಯೇಕವಾಗಿ ಉತ್ಪಾದಿಸುವ ಕಂಪನಿಗಳು ನಮ್ಮಲ್ಲಿವೆ. ಈ ಟ್ರಾನ್ಸ್‌ಫ್ಯಾಟ್‌ನನ್ನು ತುಪ್ಪದ ಬದಲಿಗೆ ವನಸ್ಪತಿ, ಬೆಣ್ಣೆ ಬದಲಿಗೆ ಮಾರ್ಗರಿನ್ ಬಳಕೆ ಮಾಡುತ್ತಾರೆ. ಇದು ದೇಹಕ್ಕೆ ಭಾರೀ ಅಪಾಯಕಾರಿ ಎಂಬ ಅಂಶ ಗೊತ್ತಿದ್ದರೂ ಎಲ್ಲಡೆ ಬಳಸಲಾಗುತ್ತಿದೆ.
ವೆಜಿಟೆಬಲ್ ಆಯಿಲ್ ( ಎಣ್ಣೆ )ನಲ್ಲಿ ಇನ್‌ಫ್ಯೂರಿಟಿ ತೆಗೆಯಲು ಮಾಡುವ ಪ್ರಕ್ರಿಯೆಯಲ್ಲಿ ಸಹ ಟ್ರಾನ್ಸ್‌ಫ್ಯಾಟ್ ಉತ್ಪತ್ತಿಯಾಗುತ್ತದೆ. ಅದೇ ರೀತಿ ಅಡುಗೆ ಎಣ್ಣೆಯನ್ನು ಶೇ. 150 – 190 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಕಾಯಿಸಿ ಅದರಲ್ಲಿ ಆಹಾರ ಪದಾರ್ಥಗಳನ್ನು ಬೇಯಿಸುವಾಗ ಸಾಮಾನ್ಯವಾಗಿ ಟ್ರಾನ್ಸ್‌ಫ್ಯಾಟ್ ಉತ್ಪತ್ತಿಯಾಗುತ್ತದೆ. ಈಗೆ ಉತ್ಪತ್ತಿಯಾಗುವ ಟ್ರಾನ್ಸ್‌ಫ್ಯಾಟ್ ಆಹಾರ ಪದಾರ್ಥಗಳ ಮೂಲಕ ಜನರ ದೇಹ ಸೇರಿ ಅನಾರೋಗ್ಯಕ್ಕೆ ಎಡೆ ಮಾಡಿಕೊಡುತ್ತದೆ.
ಈ ಟ್ರಾನ್ಸ್‌ಫ್ಯಾಟ್ ದೇಹ ಸೇರಿದಾಗ ಬೊಚ್ಚು, ಹೃದಯ ಸಂಬಂಧಿ ಕಾಯಿಲೆಗಳು ಆವರಿಸಿಕೊಳ್ಳುತ್ತವೆ. ಅದರಲ್ಲೂ ಕೈಗಾರಿಕೆಯಲ್ಲಿ ಉತ್ಪಾದಿಸುವ ಟ್ರಾನ್ಸ್‌ಫ್ಯಾಟ್ ಭಾರೀ ಅಪಾಯಕಾರಿಯಾಗಿದ್ದು, ಪ್ರತಿ ವರ್ಷ ಜಾಗತಿಕವಾಗಿ 2.78 ಲಕ್ಷ ಮಂದಿ ಸಾವಿಗೀಡಾಗುತ್ತಿದ್ದಾರೆ. ಟ್ರಾನ್ಸ್‌ಫ್ಯಾಟ್ ನಿಂದ ಕಾಯಿಲೆ ಬಂದಲ್ಲಿ ಶೇ. 34 ರಷ್ಟು ಮಂದಿ ಗುಣಮುಖರಾಗದೇ ಸಾವಿಗೀಡಾಗುತ್ತಿದ್ದಾರೆ. ಟ್ರಾನ್ಸ್‌ಫ್ಯಾಟ್‌ನಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಿ ಸಾವಿಗೀಡಾಗುತ್ತಿರುವ ಸಂಖ್ಯೆ ಶೇ. 28 ರಷ್ಟು ಹೆಚ್ಚಾಗಿದೆ. ಟ್ರಾನ್ಸ್‌ಫ್ಯಾಟ್‌ನಿಂದ ಕಾಯಿಲೆಗಳಿಗೆ ತುತ್ತಾಗುವರ ಪೈಕಿ ಜಾಗತಿಕವಾಗಿ 5 ಲಕ್ಷ ಮಂದಿ ಅವಧಿಗಿಂತಲೂ ಮೊದಲೇ ಸಾವಿಗೀಡಾಗುತ್ತಿದ್ದಾರೆ ಎಂಬ ಸತ್ಯ ಜಾಗತಿಕ ಸಮೀಕ್ಷಾ ವರದಿಗಳಿಂದ ಹೊರ ಬಿದ್ದಿವೆ. ವಿಶ್ವ ಆರೋಗ್ಯ ಸಂಸ್ಥೆ ಭಾರತೀಯರು ದಿನ ನಿತ್ಯ 2.2 ಗ್ರಾಂಗಿಂತಲೂ ಹೆಚ್ಚು ಸೇವನೆ ಮಾಡಬಾರದು ಎಂದು ಹೇಳಿದೆ. ಈ ಮೂಲಕ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾಯುವ ಪ್ರಮಾಣ ಕಡಿಮೆ ಮಾಡಬಹುದು ಎಂದು ಸಲಹೆ ಮಾಡಿದೆ.
ಈ ಟ್ರಾನ್ಸ್‌ಫ್ಯಾಟ್‌ನಿಂದ ದೂರ ಉಳಿಯಲು ಜನ ಏನು ಮಾಡಬೇಕು?
1. ಯಾವುದೇ ಪ್ಯಾಕೆಟ್ ತಿನಿಸು ತೆಗೆದುಕೊಂಡರೆ, ಅದರಲ್ಲಿ ಬರೆದಿರುವ ಪೌಷ್ಠಿಕಾಂಶದ ಮಾಹಿತಿಯನ್ನು ಓದಬೇಕು. ಆರೋಗ್ಯವಂತ ಎಣ್ಣೆ ಬಳಕೆ ಅಥವಾ ಟ್ರಾನ್ಸ್‌ಫ್ಯಾಟ್ ಪ್ರಮಾಣದ ಬಗ್ಗೆ ತಿಳಿದುಕೊಳ್ಳಬೇಕು.
2. ಪ್ಯಾಕೆಟ್ ಎಣ್ಣೆ ಅಥವಾ ತಿನಿಸು ಖರೀದಿಸುವಾಗ ಅದರಲ್ಲಿನ ಪೌಷ್ಠಿಕಾಂಶ ಪ್ರಮಾಣವನ್ನು ಗಮನಿಸಬೇಕು.
3. ಪ್ಯಾಕಿಂಗ್ ಆಹಾರ ತನಿಸು ಮತ್ತು ಪ್ಯಾಕಿಂಗ್ ಎಣ್ಣೆ ಪದಾರ್ಥಗಳ ಬಳಕೆ ಆದಷ್ಟು ಕಡಿಮೆ ಮಾಡಬೇಕು.
4. ಶೇ. 2 ಕ್ಕಿಂತಲೂ ಕಡಿಮೆ ಪ್ರಮಾಣ ಟ್ರಾನ್ಸ್‌ಫ್ಯಾಟ್ ಇರುವ ಪ್ಯಾಕೆಟ್ ತಿನಿಸು ಮತ್ತು ಎಣ್ಣೆಗಳನ್ನು ಬಳಸಬೇಕು.
5. ಅಡುಗೆ ಎಣ್ಣೆಯಲ್ಲಿ ಟ್ರಾನ್ಸ್‌ಫ್ಯಾಟ್ ಇಲ್ಲದ ಲೇಬಲ್ ಹಾಕಿರುವ ಎಣ್ಣೆಯನ್ನು ಬಳಸಬೇಕು.
6. ಪದೇ ಪದೇ ಬಳಸಿದ ಅಡುಗೆ ಎಣ್ಣೆಯಲ್ಲಿ ತಯಾರಿಸಿದ ಪದಾರ್ಥಗಳ ಸೇವನೆಯಿಂದ ದೂರ ಉಳಿಯಬೇಕು.
7. ಮನೆಯಿಂದ ಹೊರಗೆ ಊಟ ಮಾಡುವಾಗ, ಟ್ರಾನ್ಸ್ ಫ್ಯಾಟ್ ಇಲ್ಲದ ಆಯಿಲ್ ಬಳಕೆ ಮಾಡಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ಅಂತಹ ಆಹಾರ ಪದಾರ್ಘಗಳನ್ನು ಸೇವಿಸಲು ಅದ್ಯತೆ ನೀಡಬೇಕು.
8. ಆಲೂ ಚಾಟ್, ಪ್ರೆಂಚ್ ಫ್ರೈ, ಸಮೋಸ, ಗೋಬಿ ಮಂಚೂರಿ, ಬಚ್ಚಿ, ಬೋಂಡಾ ಎಣ್ಣೆಯಲ್ಲಿ ತಯಾರಿಸಿದ ಪದಾರ್ಥಗಳಿಂದ ದೂರ ಇರಬೇಕು.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಾಲಿಸಿ ರಿಸರ್ಚ್ ಕರ್ನಾಟಕದಲ್ಲಿ ಹಲವು ಸಾಮಾಜಿಕ ಬದಲಾವಣೆ ತರುವ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುತ್ತಿದೆ. ಅದರಲ್ಲಿ ಅರೋಗ್ಯವಂತ ಜೀವನ ಕಟ್ಟಿಕೊಡುವ ನಿಟ್ಟಿನಲ್ಲಿ ಅಹಾರ ಪದಾರ್ಥಗಳಲ್ಲಿ ಟ್ರಾನ್ಸ್‌ಫ್ಯಾಟ್ ಬಳಕೆ ಪ್ರಮಾಣ ಕಡಿಮೆ ಮಾಡುವುದು, ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುವ ಅತಿಯಾದ ಉಪ್ಪು ಸೇವನೆ ಕಡಿಮೆ, ಹೈಪರ್ ಟೆನ್ಷನ್ ನಿಯಂತ್ರಣ ಮತ್ತಿತರ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುತ್ತಿದೆ. ಭಾರತ ಸರ್ಕಾರದ ಸಹಭಾಗಿತ್ವದಲ್ಲಿ ಕರ್ನಾಟಕದಲ್ಲಿ ಟ್ರಾನ್ಸ್‌ಫ್ಯಾಟ್ ನಿಯಂತ್ರಣ ನಿಯಮ ರೂಪಿಸುವಲ್ಲಿ ಮಹತ್ವದ ಕಾರ್ಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಜನರ ಅರೋಗ್ಯವಂತ ಬದುಕಿಗಾಗಿ ಟ್ರಾನ್ಸ್ ಫ್ಯಾಟ್ ಕಡಿಮೆ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಕೈ ಜೋಡಿಸೋಣ. ಟ್ರಾನ್ಸ್‌ಫ್ಯಾಟ್ ಮುಕ್ತ ಆರೋಗ್ಯ ಕರ್ನಾಟಕ ನಿರ್ಮಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ತುರ್ತು ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕಿದೆ.
ಜನರು ತಮ್ಮ ಮನೆಯ ಮಟ್ಟದಲ್ಲಿ ಟ್ರಾನ್ಸ್‌ಫ್ಯಾಟ್ ಬಳಕೆಗೆ ಕಡಿವಾಣ ಹಾಕಿದರೂ ಸಾಕು, ಎಷ್ಟೋ ಮುಗ್ಧ ಜೀವನಗಳ ಸಾವನ್ನು ತಡೆಯಬಹುದು. ಬಹುಮುಖ್ಯವಾಗಿ ಮಹಿಳೆಯರು ಟ್ರಾನ್ಸ್‌ಫ್ಯಾಟ್‌ನ ಅಪಾಯ ಅರಿತು ಮನೆ ಮಂದಿಯನ್ನು ಅದರಿಂದ ದೂರ ಇಡುವ ದಿಟ್ಟ ನಿರ್ಧಾರ ಕೈಗೊಂಡು ಕಾರ್ಯೋನ್ಮುಖವಾಗಬೇಕು.
ಲೇಖಕರು: ಡಾ. ಕೃತಿಕಾ ಎಸ್. ಯೋಜನಾ ಸಂಯೋಜಕರು, ಟ್ರಾನ್ಸ್‌ಫ್ಯಾಟ್ ಪ್ರಾಜೆಕ್ಟ್, ಕರ್ನಾಟಕ
ಸಾಗರದ ಹಿರಿಯ ಶ್ರೇಣಿಯ ನ್ಯಾಯಾಲಯದ ಅಪರ ಸರ್ಕಾರಿ ವಕೀಲರಾಗಿ ವಿ.ಶಂಕರ್ ನೇಮಕ
ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಏ.16ರ ನಾಳೆ ಕಲಬುರ್ಗಿಯಲ್ಲಿ ‘ಬೃಹತ್ ಉದ್ಯೋಗ ಮೇಳ’ ಆಯೋಜನೆ | Job Fair