ಶಿವಮೊಗ್ಗ : ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿ.ಯು.ಸಿ.ಯಲ್ಲಿ ಅನುತ್ತೀರ್ಣರಾದ ಅಥವಾ ಕಡಿಮೆ ಅಂಕಗಳಿಸಿದ ವಿದ್ಯಾರ್ಥಿಗಳ ಭವಿಷ್ಯದ ಅನುಕೂಲಕ್ಕಾಗಿ ಶುಲ್ಕ ರಹಿತವಾಗಿ ದ್ವಿತೀಯ ಮತ್ತು ತೃತೀಯ ಹಂತದಲ್ಲಿ ಉಚಿತ ಪೂರಕ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.
ಪೂರಕ ಪರೀಕ್ಷೆಗೆ ಹಾಜರಾಗಲಿಚ್ಚಿಸುವ ವಿದ್ಯಾರ್ಥಿಗಳು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ ಎಂದ ಅವರು ಪರೀಕ್ಷೆಯಲ್ಲಿ ಪಡೆದ ಹೆಚ್ಚಿನ ಅಂಕವನ್ನೇ ತಮ್ಮ ಅಂಕಪಟ್ಟಿಯಲ್ಲಿ ನಮೂದಿಸಿ, ವಿದ್ಯಾರ್ಥಿಗಳ ಹಿತ ಮತ್ತು ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ಪರೀಕ್ಷೆಗಳು ಇದೇಏಪ್ರಿಲ್ 24ರಂದು ಹಾಗೂ ಮೇ ಮಾಹೆಯ 09ರಂದು ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಆಸಕ್ತ ವಿದ್ಯಾರ್ಥಿಗಳು ಈ ಸದವಕಾಶದ ಲಾಭ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪೋಷಕರು, ವಿದ್ಯಾರ್ಥಿಗಳು,ಶಿಕ್ಷಣ ತಜ್ಞರಿಂದ ಉತ್ತಮ ಅಭಿಪ್ರಾಯ ಮೂಡಿ ಬಂದಿದೆ. ಪರೀಕ್ಷಾ ಶುಲ್ಕವನ್ನು ಸರ್ಕಾರವೇ ಭರಿಸುತ್ತಿದ್ದು, ಈ ಅವಕಾಶ ಈ ಬಾರಿ ಮಾತ್ರವಾಗಿರಲಿದೆ. ಪೂರಕ ತರಗತಿಗಳು ಎಂದಿನಂತೆ ಶಾಲೆಯಲ್ಲಿ ನಡೆಯಲಿವೆ ಎಂದರು.
ಮುಂದಿನ ಶೈಕ್ಷಣಕ ಸಾಲಿಗೆ ವಿದ್ಯಾರ್ಥಿಗಳ ಪಠ್ಯಚಟುವಟಿಕೆಗಳಿಗೆ ಪೂರಕವಾಗಿ ಈಗಾಗಲೇ ಶಿಕ್ಷಣ ಇಲಾಖೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿಕೊಂಡಿದೆ. ಈಗಾಗಲೇ ಮಕ್ಕಳಿಗೆ ಅಗತ್ಯವಿರುವ ಪಠ್ಯಪುಸ್ತಕ ಮತ್ತಿತರ ಪರಿಕರಗಳನ್ನು ನಿಗಧಿಪಡಿಸಿದ ಅವಧಿಯಲ್ಲಿಯೇ ವಿತರಿಸಲು ಕ್ರಮವಹಿಸಲಾಗುತ್ತಿದೆ ಎಂದರು.