ಬೆಂಗಳೂರು : ಈ ವರ್ಷ 26 ವಸತಿ ಶಾಲೆ ಘೋಷಣೆ ಮಾಡಿದ್ದೇನೆ. ಮುಂದಿನ ವರ್ಷ ಎಲ್ಲ ಹೋಬಳಿಗಳಲ್ಲಿ ಶಾಲೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಆಯೋಜಿಸಿದ್ದ 134ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಆಂಧ್ರಪ್ರದೇಶ ಹೋಬಳಿಗೊಂದು ವಸತಿ ಮಾದರಿ ಶಾಲೆ, ಮೈಸೂರು ವಿ.ವಿ.ಯಲ್ಲಿ ಅಂಬೇಡ್ಕರ್ ಸಂವಿಧಾನ ಅಧ್ಯಯನ ಪೀಠ, ಮ್ಯೂಸಿಯಂ ಬೆಂಗಳೂರಲ್ಲಿ ಆಂಧ್ರಪ್ರದೇಶ ಮಾದರಿ ಅಂಬೇಡ್ಕರ್ ಮ್ಯೂಸಿಯಂ ನಿರ್ಮಾಣ, ದೇಶದಲ್ಲೇ ದೊಡ್ಡ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಪ್ರಕಟಿಸಿದರು.
ಈ ವರ್ಷ 26 ವಸತಿ ಶಾಲೆ ಘೋಷಣೆ ಮಾಡಿದ್ದೇನೆ. ಮುಂದಿನ ವರ್ಷ ಎಲ್ಲ ಹೋಬಳಿಗಳಲ್ಲಿ ಶಾಲೆ ಮಾಡುತ್ತೇವೆ. ಬಜೆಟ್ ಗಾತ್ರ ಹೆಚ್ಚಾದಂತೆ ಎಸ್ ಸಿಎಸ್‌ಪಿ/ಟಿಎಸ್‌ಪಿ ಹಣ ಹೆಚ್ಚಾಗಬೇಕು. ಆದರೆ ಬಿಜೆಪಿ ಸರ್ಕಾರ ಕಡಿಮೆ ಮಾಡಿತ್ತು. ನಾವು ಅಧಿಕಾರಕ್ಕೆ ಬಂದ ಬಳಿಕ ಮತ್ತೆ ಯೋಜನಾಗಾತ್ರಕ್ಕೆ ತಕ್ಕಂತೆ ಹೆಚ್ಚಿಸಿದ್ದೇವೆ. ಈ ಬಾರಿ 42,018 ಕೋಟಿ ರೂ. ತೆಗೆದಿಟ್ಟಿದ್ದೇವೆ ಎಂದು ತಿಳಿಸಿದರು.
8300 ಕೋಟಿ ರೂ. ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ದುರುಪಯೋಗ ಪಡಿಸಿಕೊಂಡಿದ್ದು ಬಿಜೆಪಿ. ಇವರು ನಾಚಿಕೆ ಇಲ್ಲದೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಅಂಬೇಡ್ಕರ್ ಆಶಯಗಳ ಜಾರಿಗಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ನಮ್ಮ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಮನುವಾದಿಗಳು ನಮ್ಮ ಸಂವಿಧಾನವನ್ನು ವಿರೋಧಿಸಿದ್ದು, ಅಂಬೇಡ್ಕರ್ ಅವರು ಮನುಸ್ಮೃತಿಗೆ ಬೆಂಕಿ ಹಾಕಿ ಸುಟ್ಟಿದ್ದು ಏಕೆ? ಎನ್ನುವುದನ್ನು ನಮ್ಮ ಕಾರ್ಯಕರ್ತರು ಸ್ಪಷ್ಟವಾಗಿ ಅರಿತುಕೊಳ್ಳಬೇಕು. ಜನರಿಗೆ, ಇವತ್ತಿನ ಯುವ ಸಮುದಾಯಕ್ಕೆ ಸತ್ಯವನ್ನು ಅರ್ಥ ಮಾಡಿಸಬೇಕು.
ಮನುಸ್ಮೃತಿ ಮತ್ತು ಜಾತಿ ವ್ಯವಸ್ಥೆ ಕಾರಣದಿಂದ ಶೋಷಣೆಗೆ, ದೌರ್ಜನ್ಯಕ್ಕೆ ಒಳಗಾಗಿದ್ದ ಎಲ್ಲಾ ಜಾತಿ, ಸಮುದಾಯಗಳನ್ನು ದೌರ್ಜನ್ಯಮುಕ್ತಗೊಳಿಸಲು ಅಂಬೇಡ್ಕರ್ ಅವರ ಬದುಕು ಮುಡಿಪಾಗಿತ್ತು.
ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗಾಗಿ, ಅಸ್ಪೃಶ್ಯತೆ ಹೋಗಲಾಡಿಸುವುದಕ್ಕಾಗಿ ತಾನು ಶಿಕ್ಷಣ ಪಡೆದದ್ದಾಗಿ ಅಂಬೇಡ್ಕರ್ ಹೇಳಿದ ಮಾತು ಅವರ ಆಶಯ ಎಂಥದ್ದು ಎನ್ನುವುದನ್ನು ತೋರಿಸುತ್ತದೆ.
1952 ರ ಜನವರಿ 18 ರಂದು ಅಂಬೇಡ್ಕರ್ ಅವರು ತಮ್ಮ ಕೈಯಾರೆ ತಮ್ಮದೇ ಹಸ್ತಾಕ್ಷರದಲ್ಲಿ ಒಂದು ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ತಮ್ಮನ್ನು ಚುನಾವಣೆಯಲ್ಲಿ ಸೋಲಿಸಿದ್ದು ಸಾವರ್ಕರ್ ಮತ್ತು ಢಾಂಗೆ ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಆದರೂ ಬಿಜೆಪಿಯವರು ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಎಂದು ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಜನರಿಗೆ ಈ ಸತ್ಯ ಹೇಳುವ ಎದೆಗಾರಿಕೆ ಬೆಳೆಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಅಂಬೇಡ್ಕರ್ ಜಯಂತಿಯಾದ ಇಂದು ಮಹತ್ವದ ನಿರ್ಧಾರ ಕೈಗೊಂಡಿದ್ದೇನೆ.
ಬಾಬಾ ಸಾಹೇಬರ ಜೀವನ ಸಾಧನೆಗಳನ್ನು ಮತ್ತಷ್ಟು ಪ್ರಚುರಪಡಿಸಲು ಬೆಂಗಳೂರಿನಲ್ಲಿ ಅಂಬೇಡ್ಕರ್ ಮ್ಯೂಸಿಯಮ್ ಮತ್ತು ಇಡೀ ದೇಶದಲ್ಲೇ ಅತ್ಯಂತ ಎತ್ತರದ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಯ ಘೋಷಣೆ ಮಾಡಿದ್ದೇನೆ.
ನಮ್ಮ ಅಂಬೇಡ್ಕರ್ ನಮಗೆ ಮಾದರಿ #AmbedkarJayanti2025 pic.twitter.com/tkttTv8n1x
— Siddaramaiah (@siddaramaiah) April 14, 2025
ಆರ್.ಎಸ್.ಎಸ್ ಮತ್ತು ಬಿಜೆಪಿ ಪರಿವಾರ ಹೇಳುವ ಸುಳ್ಳುಗಳನ್ನು ಮೆಟ್ಟಿನಿಂತು, ಸತ್ಯ ಹೇಳುವ ಎದೆಗಾರಿಕೆಯನ್ನು ನಮ್ಮ ಪಕ್ಷದ ಕಾರ್ಯಕರ್ತರು ಬೆಳೆಸಿಕೊಳ್ಳಬೇಕು.
ಕಾಂಗ್ರೆಸ್ ಕಾರ್ಯಕರ್ತರಿಗೆ ಸೈದ್ಧಾಂತಿಕ ಸ್ಪಷ್ಟತೆ ಇರಬೇಕು. ಕಾರಣ ಸೈದ್ಧಾಂತಿಕ ಹೋರಾಟವನ್ನು ನಾವು ನೀವೆಲ್ಲಾ ಈ ದೇಶದ ಭವಿಷ್ಯಕ್ಕಾಗಿ ಮುನ್ನಡೆಸಬೇಕಾಗಿದೆ.ಮನುವಾದಿಗಳು ನಮ್ಮ… pic.twitter.com/cQqwqGcPuK
— Siddaramaiah (@siddaramaiah) April 14, 2025