ಮಂಡ್ಯ : ಇಡೀ ವಿಶ್ವವೇ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ರವರ ಸಾಧನೆ ಗುರುತಿಸಿ ಇಬ್ಬರೂ ವಿಶ್ವನಾಯಕರನ್ನಾಗಿ ಒಪ್ಪಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ಹೇಳಿದರು.
ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 134 ನೇ ಅಂಬೇಡ್ಕರ್ ಜಯಂತಿಯ ಕಾರ್ಯಕ್ರಮವನ್ನು ಸಂವಿಧಾನ ಪೀಠಿಕೆ ಬೋದಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಸಮಾಜದ ಉನ್ನತ ವ್ಯಕ್ತಿಯಿಂದ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಭಾರತೀಯ ಸಂವಿಧಾನವನ್ನು ಡಾ: ಬಿ. ಆರ್.ಅಂಬೇಡ್ಕರ್ ಅವರು ರಚಿಸಿದ್ದಾರೆ, ಭಾರತೀಯ ಸಂವಿಧಾನ ಯಾವುದೇ ವರ್ಗ ಮತ್ತು ಸಮಾಜಕ್ಕೆ ಸಿಮಿತವಾಗಿಲ್ಲ ಎಂದು ಹೇಳಿದರು.
ವಿಶ್ವಜ್ಞಾನಿ ಡಾ.ಬಿ.ಆರ್ ಅಂಬೇಡ್ಕರ್ ರಚಿಸಿದ ಭಾರತೀಯ ಸಂವಿಧಾನವನ್ನು ಅತ್ಯಂತ ಶ್ರೇಷ್ಠ ಸಂವಿಧಾನವೆಂದು ವಿಶ್ವವೇ ಹೇಳಿತು, ಸೂರ್ಯ ಚಂದ್ರ ಇರುವವರೆಗೂ ಅವರು ನೀಡಿರುವ ಕೊಡುಗೆಗಳು ಮತ್ತು ಸಾಧನೆ ಅಜರಾಮರ, ತುಳಿತಕ್ಕೊಳಗಾದವರಿಗೆ ಶಕ್ತಿ ತುಂಬುವ ಕೆಲಸವನ್ನು ಬಾಬಾ ಸಾಹೇಬ್ ಮಾಡಿದ್ದಾರೆ ಎಂದು ತಿಳಿಸಿದರು.
ಸಂವಿಧಾನ ಶಿಲ್ಪಿಯಾದ ಡಾ: ಬಿ.ಆರ್ ಅಂಬೇಡ್ಕರ್ ಸರ್ವಕಾಲಕ್ಕೂ ಸರ್ವರೂ ಒಪ್ಪುವಂತಹ ಸಂವಿಧಾನವನ್ನು ನಮಗೆ ನೀಡಿದ್ದಾರೆ, ಅವರು ನಮಗೆ ನೀಡಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮುಂದಿನ ಪೀಳಿಗೆಗೆ ನಾವು ಅವರಂತೆ ಕೊಡುಗೆಗಳು ನೀಡಬೇಕು ಎಂದರು.
ನಮ್ಮ ಸರ್ಕಾರ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಜಾರಿಗೆ ತಂದಿದ್ದು, 2024-25ನೇ ಸಾಲಿನಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಮತ್ತು ಟಿ.ಎಸ್.ಪಿ ಯೋಜನೆಯಡಿ 100.26 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ, ಜಿಲ್ಲೆಯಲ್ಲಿ ಬಾಬು ಜಗಜೀವನ್ ರಾಂ ಭವನ ನಿರ್ಮಾಣ ಮಾಡಲು 3.85 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ವಿಶೇಷ ಉಪನ್ಯಾಸಕರಾಗಿ ಪತ್ರಕರ್ತ ದೀಪಕ್ ಮಾತನಾಡಿ ಜಗತ್ತಿನಾದ್ಯಂತ 100 ಕ್ಕೂ ಹೆಚ್ಚು ದೇಶಗಳು ಆಚರಿಸುವ ಜಯಂತಿ ಎಂದರೆ ಅದು ಡಾ: ಬಿ.ಆರ್ ಅಂಬೇಡ್ಕರ್ ಅವರ ಜಯಂತಿ, ಅಂಬೇಡ್ಕರ್ ರವರು ತಮ್ಮ ಬದುಕಿನುದ್ದಕ್ಕೂ ಶೋಷಿತರ ಏಳಿಗೆಗಾಗಿ ಶ್ರಮಿಸಿದವರು, ಅವರ ಹೋರಾಟ ಮತ್ತು ಅವರು ಸಂಪಾದಿಸಿದ ಜ್ಞಾನಕ್ಕಾಗಿ ಜಗತ್ತು ಅವರನ್ನು ಗೌರವಿಸುತ್ತದೆ, ಬಹುಜನರಿಗೆ ಹಸಿವು, ಶಿಕ್ಷಣ, ಸಾಮಾಜಿಕ ಭದ್ರತೆ ಸಿಗದಿರುವ ಕಾಲದಲ್ಲಿ ಎಲ್ಲರೂ ಸಮಾನರು ಎಂದು ಪ್ರತಿಪಾದಿಸಿದವರು ಡಾ. ಬಿ.ಆರ್.ಅಂಬೇಡ್ಕರ್ ಅವರು ಎಂದರು.
ಇಂದು ಪ್ರಜಾಪ್ರಭುತ್ವ 4 ಅಂಗಗಳಲ್ಲೂ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಕ್ಕೆ ಸೇರಿದವರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರೆ ಅದಕ್ಕೆ ಏಕೈಕ ಕಾರಣ ಡಾ: ಬಿ.ಆರ್. ಅಂಬೇಡ್ಕರ್, ಸ್ವಾತಂತ್ರ್ಯ ನಂತರವೂ ಜನರೂ ವಿದ್ಯಾವಂತರಾದರೂ ಜಾತಿ ತಾರತಮ್ಯ ನಡೆಯುತ್ತಿದೆ ಎಂದರೆ ಜನರು ಸಂಘಟಿತರಾಗಿ ಡಾ: ಬಿ.ಆರ್.ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ಹೋರಾಟ ನಡೆಸಬೇಕು.
ನಾವೆಲ್ಲರೂ ಡಾ. ಬಿ.ಆರ್.ಅಂಬೇಡ್ಕರ್, ಬಸವಣ್ಣ, ಕುವೆಂಪು ರವರ ವಿಚಾರಗಳನ್ನು ತಿಳಿದು ಸಾಗಬೇಕು, ಕುವೆಂಪು ರವರ ವಿಶ್ವಮಾನವ ಸಂದೇಶವನ್ನು ಅರಿತು ಸಾಗಬೇಕು ಎಂದರು.
ಜಿಲ್ಲಾ ವಸತಿ ನಿಲಯದ ವಿದ್ಯಾರ್ಥಿಗಳ ಸಹಾಯವಾಣಿ
ವಿದ್ಯಾರ್ಥಿ ನಿಲಯದ ಕುಂದು ಕೊರತೆಗಳ ತಿಳಿಸಲು ಸಹಾಯವಾಣಿ ಸಂಖ್ಯೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಅವರು ಬಿಡುಗಡೆಗೊಳಿಸಿದರು.
ಜಿಲ್ಲೆಯ ಹಾಸ್ಟೆಲ್ ವಿದ್ಯಾರ್ಥಿನಿಯರು ತಮ್ಮ ಕುಂದು ಕೊರತೆಗಳಿಗೆ ಸಹಾಯವಾಣಿ ತೆರೆಯಲಾಗಿದೆ, ವಿದ್ಯಾರ್ಥಿನಿಯರು ತಮ್ಮ ವಸತಿ ನಿಲಯಗಳಲ್ಲಿ ಯಾವುದೇ ಸಮಸ್ಯೆ ಉಂಟಾದರೆ ದೂ.ಸಂ. 9480872008 ಅನ್ನು ಸಂಪರ್ಕಿಸಬಹುದಾಗಿದೆ,
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ಡಾ.ಬಿ.ಆರ್. ಅಂಬೇಡ್ಕರ್ 134ನೇ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಡ್ಯ ವಿಧಾನಸಭಾ ಶಾಸಕ ಪಿ.ರವಿಕುಮಾರ್, ಮೈಶುಗರ್ ಸಕ್ಕರೆ ಕಂಪನಿ ನಿಯಮಿತ ಅಧ್ಯಕ್ಷ ಸಿ.ಡಿ. ಗಂಗಾಧರ, ಜಿಲ್ಲಾಧಿಕಾರಿ ಡಾ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಉಪಸ್ಥಿತರಿದ್ದರು.
ಚಿತ್ರದುರ್ಗ: ಏ.15ರ ನಾಳೆ ಹಿರಿಯೂರು ತಾಲ್ಲೂಕಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ನಮ್ಮ ಮೆಟ್ರೋ ಪ್ರಯಾಣಿಕರೇ ಗಮನಿಸಿ : ಇಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ4 ಹೆಚ್ಚುವರಿ ರೈಲು ಸಂಚಾರ.!