ರಂಜಿತ
ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ಚರ್ಚಾಸ್ಪದ ವಕ್ಫ್ ತಿದ್ದುಪಡಿ ಮಸೂದೆ-2025ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ನಿನ್ನೆ ಶನಿವಾರ ಅಂಕಿತ ಹಾಕಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆ, 2025 ಕ್ಕೆ ಒಪ್ಪಿಗೆ ನೀಡಿದ ಬಳಿಕ ಅದು ಕಾನೂನಾಗಿ ಇಂದಿನಿಂದಲೇ ಭಾರತದಾದ್ಯಂತ ಜಾರಿಗೆ ಬಂದಿದೆ ಎನ್ನಲಾಗಿದೆ.
ಇನ್ನೂ ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆ ಪರವಾಗಿ 128 ಸದಸ್ಯರು ಮತ್ತು 95 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರು. ಅದಕ್ಕೂ ಮುನ್ನ ಗುರುವಾರ ಮುಂಜಾನೆ ಲೋಕಸಭೆಯಲ್ಲಿ ಇದನ್ನು ಅಂಗೀಕರಿಸಲಾಯಿತು, 288 ಸದಸ್ಯರು ಪರವಾಗಿ ಮತ್ತು 232 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರು.
ಈ ನಡುವೆ ವಕ್ಫ್ ತಿದ್ದುಪಡಿಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 16 ರಂದು ನಡೆಸಲಿದೆ. ಈವರೆಗೆ 15 ಅರ್ಜಿಗಳನ್ನು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾಗಿದೆ. ಏತನ್ಮಧ್ಯೆ, ಕೇಂದ್ರವು ಈ ವಿಷಯದಲ್ಲಿ ಕೇವಿಯಟ್ ಸಲ್ಲಿಸಿದೆ. ಕೇವಿಯಟ್ ಎಂದರೆ ವಿಚಾರಣೆಯನ್ನು ನೀಡದೆ ಅಥವಾ ಮುಖ್ಯ ಪ್ರತಿವಾದಿಯಾದ ಕೇಂದ್ರಕ್ಕೆ ನೋಟಿಸ್ ಕಳುಹಿಸದೆ ಯಾವುದೇ ಆದೇಶವನ್ನು ಹೊರಡಿಸಬಾರದು ಎಂದು ಹೇಳುವ ಅರ್ಜಿ. ಕಾಯ್ದೆಯ ಸೆಕ್ಷನ್ 1 (2) ರ ಅಡಿಯಲ್ಲಿ ಹೊರಡಿಸಲಾದ ಅಧಿಸೂಚನೆಯ ಪ್ರಕಾರ, ಏಪ್ರಿಲ್ 8, 2025 ಅನ್ನು ಕಾಯ್ದೆಯ ನಿಬಂಧನೆಗಳು ಜಾರಿಗೆ ಬರುವ ದಿನಾಂಕವಾಗಿ ನೇಮಿಸಲಾಗಿದೆ. ಏಪ್ರಿಲ್ 4 ರಂದು ಸಂಸತ್ತು ಅಂಗೀಕರಿಸಿದ ಕಾಯ್ದೆಗೆ ಏಪ್ರಿಲ್ 5 ರಂದು ರಾಷ್ಟ್ರಪತಿಗಳ ಅನುಮೋದನೆ ಸಿಕ್ಕಿತು.