ನವದೆಹಲಿ: ಮಂಗಳವಾರ (ಏಪ್ರಿಲ್ 8, 2025) ಬೆಳಿಗ್ಗೆ ಹೌರಾಗೆ ಹೋಗುವ ಫಲಕ್ನುಮಾ ಎಕ್ಸ್ಪ್ರೆಸ್ನ ಎರಡು ಎಸಿ ಬೋಗಿಗಳು ತುಂಡಾದಾ ಘಟನೆ ನಡೆದಿದ್ದು, ನೂರಾರು ಪ್ರಯಾಣಿಕರು ಶ್ರೀಕಾಕುಳಂ ಜಿಲ್ಲೆಯ ಪಲಾಸಾ ಬಳಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.
ಸುಮ್ಮದೇವಿ ಮತ್ತು ಮಂದಸ ಗ್ರಾಮಗಳ ನಡುವೆ ಈ ಘಟನೆ ನಡೆದಿದ್ದು, ಎರಡು ಗಂಟೆಗೂ ಹೆಚ್ಚು ಕಾಲ ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಗಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಘಟನೆ ನಡೆದ ಕೂಡಲೇ ಹೌರಾಗೆ ಹೋಗುವ ರೈಲನ್ನು ನಿಲ್ಲಿಸಲಾಯಿತು. ರೈಲ್ವೆ ಅಧಿಕಾರಿಗಳು ತಂತ್ರಜ್ಞರೊಂದಿಗೆ ಸ್ಥಳಕ್ಕೆ ತಲುಪಿ ಬೋಗಿಗಳನ್ನು ರೈಲಿಗೆ ಜೋಡಿಸಿದರು ಎನ್ನಲಾಗಿದೆ.
ಘಟನೆಯೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಒಂದು ಟ್ರ್ಯಾಕ್ ಅನ್ನು ನಿರ್ಬಂಧಿಸಿದ್ದರಿಂದ ಈ ಮಾರ್ಗದಲ್ಲಿ ಇತರ ರೈಲುಗಳ ಸಂಚಾರ ವಿಳಂಬವಾಯಿತು. ರೈಲು ಹಳಿ ತಪ್ಪಿದೆ ಎಂದು ಪ್ರಯಾಣಿಕರು ಆರಂಭದಲ್ಲಿ ಭಯಭೀತರಾಗಿದ್ದರು. ಎರಡು ಬೋಗಿಗಳು ರೈಲುಗಳಿಂದ ಬೇರ್ಪಟ್ಟಿವೆ ಎಂದು ತಿಳಿದ ನಂತರ ಅವರು ನೆಮ್ಮದಿಯ ನಿಟ್ಟುಸಿರು ಬಿಟ್ಟರು ಎನ್ನಲಾಗಿದೆ.








