ಬೆಂಗಳೂರು: ಮಕ್ಕಳಿಗೆ ಕಲ್ಪಿಸುವ ಉತ್ತಮ ಭವಿಷ್ಯವೇ ಭಾರತದ ಭವಿಷ್ಯ ಎಂಬ ದೂರದೃಷ್ಟಿಯ ಹಿನ್ನಲೆಯಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಕ್ಕಳ ಕಲ್ಯಾಣ ಮತ್ತು ಅಭಿವೃದ್ದಿಗಾಗಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ.
ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ 0-6 ವರ್ಷದ ಮಕ್ಕಳ ಆರೋಗ್ಯ, ಪೌಷ್ಠಿಕ ಮಟ್ಟವನ್ನು ವೃದ್ಧಿಸುವುದು. ಮಗುವಿನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕುವುದು. ಮಕ್ಕಳಲ್ಲಿ ಸಾವು, ಅನಾರೋಗ್ಯ, ಅಪೌಷ್ಠಿಕತೆ ಮತ್ತು ಶಾಲಾ ಬಿಡುವಿಕೆಯನ್ನು ಕಡಿಮೆಗೊಳಿಸುವುದು ಮುಂತಾದ ಗುರಿ ಹೊಂದಿದೆ. ಶಿಶು ಅಭಿವೃದ್ಧಿ ಕಾರ್ಯಕ್ರಮವನ್ನು ಉತ್ತಮಗೊಳಿಸುವ ಕಾರ್ಯನೀತಿ ಮತ್ತು ಅನುಷ್ಠಾನದ ದಿಸೆಯಲ್ಲಿ ಪರಿಣಾಮಕಾರಿಯಾದ ಸಮನ್ವಯತೆಯನ್ನು ಸಾಧಿಸುವುದು ಯೋಜನೆಯ ಉದ್ದೇಶವಾಗಿದೆ.
ಆರೋಗ್ಯ ಮತ್ತು ಪೌಷ್ಠಿಕತೆಯ ಶಿಕ್ಷಣವನ್ನು ನೀಡುವುದರ ಮೂಲಕ ತಾಯಂದಿರಲ್ಲಿ ತಮ್ಮ ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕತೆಯ ಅಗತ್ಯಗಳನ್ನು ಸರಿಯಾಗಿ ನೋಡಿಕೊಳ್ಳುವ ಸಾಮಥ್ರ್ಯವನ್ನು ಹೆಚ್ಚಿಸುತ್ತಿದೆ.
ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ, ರಾಜ್ಯದಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ 69,919 ಅಂಗನವಾಡಿ ಕೇಂದ್ರಗಳಲ್ಲಿ ಒಟ್ಟು 45 ಲಕ್ಷ ಫಲಾನುಭವಿಗಳಿದ್ದು, ಎಲ್ಲರೂ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಇದರಲ್ಲಿ ಶೇ.99 ರಷ್ಟು ಅಂದರೆ 44.35 ಲಕ್ಷ ಫಲಾನುಭವಿಗಳನ್ನು ಕೇಂದ್ರ ಸರ್ಕಾರದ ಪೋಷಣ್ ಟ್ರ್ಯಾಕ್ಟರ್‍ನಲ್ಲಿ ಆಧಾರ್ ಪರಿಶೀಲನೆ ಮಾಡಿದ್ದು ಇದರಲ್ಲಿ ನಮ್ಮ ರಾಜ್ಯ ದೇಶದಲ್ಲೇ 5ನೇ ರಾಜ್ಯವಾಗಿದೆ.
ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮಗಳಡಿಯಲ್ಲಿ 6 ತಿಂಗಳಿಂದ 6 ವರ್ಷದ ಮಕ್ಕಳು, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಪ್ರಾಯಾ ಪೂರ್ವ ಬಾಲಕಿಯರು, ಗರ್ಭಿಣಿಯರು ಮತ್ತು ಬಾಣಂತಿಯರು ಫಲಾನುಭವಿಗಳಾಗಿರುತ್ತಾರೆ.
ರಾಜ್ಯ ಸರ್ಕಾರದ ಕ್ಷೀರಭಾಗ್ಯ ಯೋಜನೆಯಡಿ ಕೆನೆಭರಿತ ಹಾಲು ವಿತರಣೆ ಸೃಷ್ಟಿ ಯೋಜನೆಯಡಿ ಮೊಟ್ಟೆ ವಿತರಣೆ, ಮಾತೃಪೂರ್ಣ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟ ಒದಗಿಸಲು ಕ್ರಮವಹಿಸಲಾಗಿದ್ದು, ರಾಜ್ಯ ಸರ್ಕಾರದ ಈ ಕ್ರಮದಿಂದಾಗಿ ಕರ್ನಾಟಕ ರಾಜ್ಯಾದ್ಯಂತ ಕಳೆದ 2 ವರ್ಷಗಳಲ್ಲಿ ಅಪೌಷ್ಠಿಕ ಮಕ್ಕಳ ಪೌಷ್ಠಿಕ ಮಟ್ಟದಲ್ಲಿ ಗಮನಾರ್ಹ ಬದಲಾವಣೆ ಕಂಡು ಬಂದಿರುತ್ತದೆ, ಕಳೆದ 2 ವರ್ಷಗಳಲ್ಲಿ ಶೇ. 2.37ರಷ್ಟು ಅಪೌಷ್ಟಿಕ ಮಕ್ಕಳ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿರುತ್ತದೆ.
ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ:
ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳಲ್ಲಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ಆಯ್ದ ಅಂಗನವಾಡಿ ಕೇಂದ್ರಗಳಲ್ಲಿ ದೇಶದಲ್ಲೇ ಪ್ರಪ್ರಥಮ ಬಾರಿಗೆ ಎಲ್‍ಕೆಜಿ/ಯುಕೆಜಿ ತರಗತಿಗಳನ್ನು ಪ್ರಾಯೋಗಿಕವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಇಲ್ಲಿ 259 ಅಂಗನವಾಡಿ ಕೇಂದ್ರಗಳಲ್ಲಿ 4-6 ವರ್ಷದ 3059 ಮಕ್ಕಳೊಂದಿಗೆ ಯಶಸ್ವಿಯಾಗಿ 2024-25ನೇ ಸಾಲಿನಲ್ಲಿ ಪ್ರಾರಂಭಿಸಲಾಗಿರುತ್ತದೆ. ಸದರಿ ತರಗತಿಗಳ ಮೌಲ್ಯಮಾಪನ ವರದಿಯಂತೆ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಏರಿಕೆಯಾಗಿದ್ದು, ಮಕ್ಕಳ ಕಲಿಕಾ ಸಾಮಥ್ರ್ಯವೂ ಕೂಡ ಹೆಚ್ಚಾಗಿದ್ದು, ಅವರ ಮುಂದಿನ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಿದೆ.
ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಯೋಜನೆ:
ಭಾಗ್ಯಲಕ್ಷ್ಮಿ ಯೋಜನೆಯನ್ನು 2006-07 ರಿಂದ ಜಾರಿಗೆ ತರಲಾಗಿದ್ದು, ಹೆಣ್ಣು ಮಗುವಿನ ಜನನವನ್ನು ಪ್ರೋತ್ಸಾಹಿಸಿ ಲಿಂಗಾನುಪಾತವನ್ನು ಉತ್ತಮಗೊಳಿಸುವ ಗುರಿಯನ್ನು ಹೊಂದಿರುತ್ತದೆ. 2019-20ನೇ ಸಾಲಿನವರೆಗೆ ಭಾರತೀಯ ಜೀವ ವಿಮಾ ನಿಗಮವು ಪಾಲುದಾರ ಹಣಕಾಸು ಸಂಸ್ಥೆಯಾಗಿದ್ದು, 2020-21ನೇ ಸಾಲಿನಿಂದ ಆಡಳಿತಾತ್ಮಕ ಕಾರಣಗಳಿಂದ ಭಾಗ್ಯಲಕ್ಷ್ಮಿ ಯೋಜನೆಯನ್ನು ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಾಗಿ ಮರುವಿನ್ಯಾಸಗೊಳಿಸಲಾಗಿದೆ. ಸದರಿ ಯೋಜನೆಯಡಿ 2006-07 ರಿಂದ 23-24ರವರೆಗೆ ಒಟ್ಟು 34.78 ಲಕ್ಷ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗಿರುತ್ತದೆ. 2006-07ನೇ ಸಾಲಿನಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಡಿ ನೋಂದಾಯಿಸಲ್ಪಟ್ಟ ಅಂದಾಜು 2.39 ಲಕ್ಷ ಫಲಾನುಭವಿಗಳಿಗೆ 18 ವರ್ಷ ಪೂರ್ಣಗೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ಯೋಜಿತ ಪರಿಪಕ್ವ ಮೊತ್ತ ರೂ.32.351/-ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ಶಿಶುಪಾಲನಾ ಕೇಂದ್ರಗಳು(ಶಿಶುವಿಹಾರಗಳು)
ಪ್ರತಿ ಜಿಲ್ಲೆಯ ಎರಡು ಸರ್ಕಾರಿ ಕಛೇರಿಗಳಾದ ಜಿಲ್ಲಾ ಪಂಚಾಯತ್, ಜಿಲ್ಲಾಧಿಕಾರಿಗಳು/ಇತರೆ ಕಛೇರಿಗಳಲ್ಲಿ ಹಾಗೂ ಅತೀ ಹೆಚ್ಚು ಮಹಿಳಾ ಕಾರ್ಮಿಕರ ಸಾಂದ್ರತೆಯಿರುವ ಪ್ರದೇಶಗಳ ಎರಡು ತಾಲ್ಲೂಕು ಕೇಂದ್ರಗಳಲ್ಲಿ “ಶಿಶುಪಾಲನಾ ಕೇಂದ್ರ”ಗಳನ್ನು ಪ್ರಾರಂಭಿಸಲಾಗಿರುತ್ತದೆ.
ಜಿಲ್ಲಾ ಹಾಗೂ ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟಗಳು/ಸ್ವಯಂ ಸೇವಾ ಸಂಸ್ಥೆಗಳ ಮೂಲಕ 31 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ 123 ಶಿಶುಪಾಲನಾ ಕೇಂದ್ರಗಳಲ್ಲಿ ದುಡಿಯುವ ಮಹಿಳೆಯರ 0-6 ವರ್ಷದ ಒಳಗಿನ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ, ಪೋಷಣೆ, ಆರೈಕೆ, ಸುರಕ್ಷತೆ, ಕಲಿಕೆಯ ವಾತಾವರಣ, ಆರೋಗ್ಯದ ಸ್ಥಿತಿ ಸುಧಾರಿಸುವಂತಹ ಹಾಗೂ ಮಕ್ಕಳ ದೈಹಿಕ ಅರಿವಿನ ಸಾಮಾಜಿಕ ಹಾಗೂ ಭಾವನಾತ್ಮಕ ಬೆಳವಣಿಗೆಯನ್ನು ಉತ್ತೇಜಿಸುವಂತಹ ಸಮಗ್ರ ಅಭಿವೃದ್ಧಿಯನ್ನು ಕಲ್ಪಿಸಲಾಗಿದೆ.
ಶಿಶುಪಾಲನಾ ಕೇಂದ್ರಗಳಲ್ಲಿ ದಾಖಲಾಗಿರುವ ಸುಮಾರು 2864 ಮಕ್ಕಳಿಗೆ ಪೂರಕ ಪೌಷ್ಟಿಕ, ವೈದ್ಯಕೀಯ ತಪಾಸಣೆ, ಆಟಿಕೆಗಳು ಹಾಗೂ ಶಿಕ್ಷಕಿ-ಸಹಾಯಕಿಯರಿಗೆ ಗೌರವಧನ, ಕೇಂದ್ರದ ಬಾಡಿಗೆ ಹಾಗೂ ಪೀಠೋಪಕರಣ-ಪಾಠೋಪಕರಣಗಳಿಗೆ ಇಲಾಖೆಯಿಂದ ಅನುದಾನ ನೀಡಲಾಗುತ್ತಿದೆ. ಕೇಂದ್ರಗಳಲ್ಲಿ ಸಂಭ್ರಮದಿಂದ ರಾಷ್ಟ್ರೀಯ ಹಾಗೂ ನಾಡ ಹಬ್ಬಗಳು, ಮಕ್ಕಳ ಹುಟ್ಟುಹಬ್ಬಗಳನ್ನು ಆಚರಿಸುವಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಮಿತ ಆರ್
ವಾರ್ತಾ ಸಹಾಯಕರು