ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾದ ಅರ್ಹ ಮಹಿಳಾ ಫಲಾನುಭವಿಯ ಖಾತೆಗೆ ರೂ.2000 ಗಳನ್ನು ಡಿ.ಬಿ.ಟಿ ಮೂಲಕ ಪ್ರತಿ ತಿಂಗಳು ಸರ್ಕಾರ ವರ್ಗಾವಣೆ ಮಾಡುತ್ತಿದೆ. ಈ ಹಣವನ್ನು ಸದ್ಭಳಕೆ ಮಾಡಿಕೊಂಡ ನಾರಿಯರು ತಮ್ಮ ಜೀವನದಲ್ಲಿ ಖುಷಿ, ನೆಮ್ಮದಿ ಹಾಗೂ ಸ್ವಾವಲಂಬನೆಯನ್ನು ಕಂಡುಕೊಂಡಿದ್ದು, ಪರೋಪಕಾರಕ್ಕೂ ಗೃಹಲಕ್ಷ್ಮಿ ಹಣ ಸದ್ಬಳಕೆ ಮಾಡುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಧನಸಹಾಯದಿಂದ ಮಾಂಗಲ್ಯ ಖರೀದಿ ಮಾಡಿದ್ದಾರೆ. ಒಂದು ಹೊತ್ತು ಊಟಕ್ಕಾಗಿ ಬೆವರು ಸುರಿಸುವ ಮಹಿಳೆಯರಿಗೆ ಚಿನ್ನದ ಖರೀದಿ ದೂರದ ಮಾತು. ಗೃಹಲಕ್ಷ್ಮಿ ಹಣದಿಂದ ಮಕ್ಕಳ ವಿದ್ಯಾಭ್ಯಾಸದಿಂದ ಹಿಡಿದು ಬದುಕು ಕಟ್ಟಿಕೊಳ್ಳಲು ಈ ಹಣ ಅದೆಷ್ಟೋ ಕುಟುಂಬಗಳ ಖುಷಿಗೆ ಕಾರಣವಾಗಿದೆ.
ಗೃಹಲಕ್ಷ್ಮಿ ಯೋಜನೆಯ ಹಣದಿಂದ ಗ್ರಾಮಸ್ಥರಿಗೆ ಹೋಳಿಗೆ ಊಟ:
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಸುಟ್ಟಟ್ಟಿ ಗ್ರಾಮದ ಅಜ್ಜಿ ಶ್ರೀಮತಿ ಅಕ್ಕಾತಾಯಿ ಲಂಗೋಟಿ ಎಂಬ ಮಹಿಳೆಯು ಗೃಹಲಕ್ಷ್ಮಿ ಯೋಜನೆಯ ಧನಸಹಾಯದಿಂದ ಊರಿನ ಜನರಿಗೆ ಹೋಳಿಗೆ ಊಟ ಹಾಕಿಸಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ದೇವಿಗೆ ಬೆಳ್ಳಿ ಕಿರೀಟ:
ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಹೂವಿನಹಳ್ಳಿ ಗ್ರಾಮದ ಮಹಿಳೆ ಶ್ರೀಮತಿ ಭಾಗಮ್ಮ ಗುರುಶಾಂತಗೌಡ ಬಿರಾದಾರ ತಾವು ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಬೆಳ್ಳಿ ಕಿರೀಟ ಮಾಡಿಸಿ ನವರಾತ್ರಿ ನಿಮಿತ್ತ ಗ್ರಾಮದಲ್ಲಿ ಪ್ರತಿಷ್ಟಾಪನೆ ಮಾಡಲಾಗಿರುವ ದೇವಿಯ ಮೂರ್ತಿಗೆ 25 ತೊಲೆ ಬೆಳ್ಳಿ ಕರೀಟವನ್ನು ಮಾಡಿಸಿರುವುದು ವಿಶೇಷವಾಗಿದೆ.
-ಸ್ಮಿತ ಆರ್
ವಾರ್ತಾ ಸಹಾಯಕರು