ಕನಕಪುರ: ಈಗಿನ ಮಕ್ಕಳು ಭವಿಷ್ಯದಲ್ಲಿ ಉದ್ಯೋಗ ಪಡೆಯುವುದಕ್ಕಿಂತ ಚೆನ್ನಾಗಿ ಓದಿ ನೀವೇ ನೂರಾರು ಉದ್ಯೋಗ ಸೃಷ್ಟಿ ಮಾಡುವ ಗುರಿಯನ್ನು ಇಟ್ಟುಕೊಳ್ಳಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮಕ್ಕಳಿಗೆ ಕಿವಿಮಾತು ಹೇಳಿದರು.
ಕನಕಪುರದಲ್ಲಿ ಭಾನುವಾರ ದ ರೂರಲ್ ಎಜುಕೇಷನ್ ಸೊಸೈಟಿ ಸ್ಥಾಪಕ ಅಧ್ಯಕ್ಷ, ಮಾಜಿ ಶಾಸಕ ಎಸ್ ಕರಿಯಪ್ಪ ಅವರ 125 ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.
“ಪೂಜ್ಯ ಕರಿಯಪ್ಪನವರ 125ನೇ ಜಯಂತಿ ಕಾರ್ಯಕ್ರಮ ಆಚರಿಸುತ್ತುದ್ದೇವೆ. ಇಂದು ಶ್ರೀರಾಮನವಮಿ. ಸಮಾಜ ಸೇವೆ ಮಾಡುವವರನ್ನು ಗುರುತಿಸುತ್ತದೆ. ಹೀಗಾಗಿ ನಮ್ಮಲ್ಲಿ ರಾಮನ ತಂದೆ ದಶರಥನಿಗಿಂತ ರಾಮನ ಭಂಟ ಹನುಮನಿಗೆ ಹೆಚ್ಚು ದೇವಾಲಯಗಳಿವೆ. ಕರಿಯಪ್ಪನವರು ಸಮಾಜದಲ್ಲಿ ಮಾಡಿರುವ ಸೇವೆ, ಕನಕಪುರಕ್ಕೆ ಅವರು ಕೊಟ್ಟಿರುವ ಶಕ್ತಿ ಅಪಾರ” ಎಂದು ತಿಳಿಸಿದರು.
“ಕರಿಯಪ್ಪನವರು ನಮ್ಮ ತಾಲೂಕಿನಲ್ಲಿ ಜ್ಞಾನದ ಸುಗಂಧವನ್ನು ಹರಡಿದ್ದಾರೆ. ಹೀಗಾಗಿ ನಾವು ಅವರನ್ನು ಸ್ಮರಿಸುತ್ತಿದ್ದೇವೆ. ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಈ ಮೂರರ ನೆನಪು ಮನುಷ್ಯತ್ವದ ಮೂಲ, ಮನುಷ್ಯತ್ವ ಮೋಕ್ಷಕ್ಕೆ ಮೂಲ. ನಾವು ಕರಿಯಪ್ಪನವರನ್ನು ಸ್ಮರಿಸುತ್ತಾ ಅವರ ಮಾರ್ಗದರ್ಶನದಲ್ಲಿ ಸಾಗಿ, ಅವರ ಋಣ ತೀರಿಸಲು ಸೇರಿದ್ದೇವೆ” ಎಂದು ಹೇಳಿದರು.
“ನನಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು ಎಂದು ನಮ್ಮ ಪೋಷಕರು ಬೆಂಗಳೂರಿನಲ್ಲಿ ಎನ್ ಪಿಎಸ್ ಶಾಲೆಗೆ ಸೇರಿಸಿದರು. ನನ್ನ ತುಂಟಾಟ ಹೆಚ್ಚಾಗಿ ನನಗೆ ಅವರು ಟಿಸಿ ಕೊಟ್ಟರು. ಮತ್ತೆ ಅದೇ ಶಾಲೆಗೆ ಸೇರಿಸಬೇಕು ಎಂದು ಶಾಸಕರಾಗಿದ್ದ ಕರಿಯಪ್ಪನವರ ಬಳಿಗೆ ನನ್ನನ್ನು ಕರೆತಂದರು. ನಂತರ ಅವರು ಆಗಿನ ಶಿಕ್ಷಣ ಸಚಿವ ಮಲ್ಲಿಕಾರ್ಜುನ ಸ್ವಾಮಿ ಅವರ ಬಳಿಗೆ ಕರೆದುಕೊಂಡು ಹೋದರು. ಅವರ ಮಾತಿಗೂ ಶಾಲೆಯ ಪ್ರಾಂಶುಪಾಲರಾದ ಗೋಪಾಲಕೃಷ್ಣ ಅವರು ನನಗೆ ಸೀಟು ಕೊಡಲಿಲ್ಲ. ನಂತರ ನಾವು ಸಿಎಂ ದೇವರಾಜ ಅರಸು ಅವರ ಮನೆಗೆ ಹೋದೆವು. ಅವರು ನಮಗೆ ವಿದ್ಯಾವರ್ಧಕ ಶಾಲೆಯಲ್ಲಿ ಸೀಟು ಕೊಡಿಸಿದರು. ಹೀಗೆ ನನ್ನ ಬದುಕಿನಲ್ಲಿ ಬದಲಾವಣೆ ಪಡೆಯಲು ಕರಿಯಪ್ಪನವರು ಕೂಡ ಪಾತ್ರವಹಿಸಿದ್ದರು” ಎಂದು ತಿಳಿಸಿದರು.
“ಈ ಸಮಯದಲ್ಲಿ ಶಾಸಕರು, ಮಂತ್ರಿಗಳು, ಮುಖ್ಯಮಂತ್ರಿಗಳ ಮನೆ ನೋಡಿ ನಾನು ಅವರಂತೆ ಶಾಸಕನಾಗಬೇಕು ಎಂದು ರಾಜಕೀಯಕ್ಕೆ ಬಂದೆ. ಅಲ್ಲಿಂದ ಇಲ್ಲಿಯವರೆಗೆ ಬಂದಿದ್ದು, ನೀವೆಲ್ಲರೂ ನನ್ನ ಬೆಳೆಸಿದ್ದೀರಿ. ಮುಂದೆ ಏನೋ ಗೊತ್ತಿಲ್ಲ. ಕರಿಯಪ್ಪನವರು ನಾಲ್ಕು ಬಾರಿ ಶಾಸಕರಾಗಿದ್ದರು. ನೀವು ನನಗೆ ಎಂಟು ಬಾರಿ ಗೆಲ್ಲಿಸಿದ್ದೀರಿ. ಈ ಶಾಲಾ ಆಡಳಿತ ಮಂಡಳಿ ಶಾಲೆಗೆ ಹೊಸ ರೂಪ ನೀಡುತ್ತಿದೆ. ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಯ್ಕೆಯಲ್ಲಿ ಶಿಕ್ಷಣತಜ್ಞ, ಆಸಕ್ತಿಯಲ್ಲಿ ರಾಜಕಾರಣಿ” ಎಂದರು.
“ಕರಿಯಪ್ಪನವರು ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಆಗಿನ ಕಾಲದಲ್ಲಿ ರೂರಲ್ ಎಜುಕೇಶನ್ ಸೊಸೈಟಿ ಆರಂಭಿಸಿದರು. ಈ ಸಂಸ್ಥೆಯಲ್ಲಿ ಮೊದಲು ರೇಷ್ಮೆ ಅಧ್ಯಯನ ಆರಂಭಿಸಿತು. ಈ ಭಾಗದಲ್ಲಿ ಹಾಲು ಹಾಗೂ ರೇಷ್ಮೆ ಬೆಳೆ ಆಧಾರಸ್ತಂಭ. ನೀವು ಉದ್ಯೋಗವನ್ನೇ ನಂಬಿಕೊಂಡು ಇರಬಾರದು. ನೀವೇ ನೂರು ಉದ್ಯೋಗ ಸೃಷ್ಟಿ ಮಾಡಬೇಕು. ಹೀಗಾಗಿ ಇಲ್ಲಿ ಕೃಷಿ ಕಾಲೇಜು ಆರಂಭಿಸಲು ಸೂಚಿಸಿದೆ” ಎಂದರು.
“ಬಾಂಗ್ಲಾದೇಶ ನೊಬೆಲ್ ಪ್ರಶಸ್ತಿ ವಿಜೇತ ಮೊಹಮದ್ ಯೂನಸ್ ಅವರು ಒಂದು ಮಾತು ಹೇಳಿದ್ದಾರೆ. ನೀವು ಒಬ್ಬ ವ್ಯಕ್ತಿಗೆ ಮೀನನ್ನು ಊಟವಾಗಿ ಕೊಟ್ಟರೆ ಅದು ಆ ಒಂದು ಹೊತ್ತಿಗೆ ಮಾತ್ರ ಸಹಾಯವಾಗುತ್ತದೆ. ಆದರೆ ಅದೇ ವ್ಯಕ್ತಿಗೆ ಮೀನುಗಾರಿಕೆ ಕಳಿಸಿದರೆ,ಅವನ ಇಡೀ ಜೀವನಕ್ಕೆ ನೆರವಾಗುತ್ತದೆ. ಅದೇ ರೀತಿ ನೀವು ಬೇರೆಯವರಿಗೆ ಉದ್ಯೋಗ ನೀಡುವ ಉದ್ಯಮಿಗಳಾಗಿ ಬೆಳೆಯಬೇಕು” ಎಂದು ಸಲಹೆ ನೀಡಿದರು.
“ರುಪರಪಹರಿಸದ, ದಾಯಾದಿ ದಕ್ಕಿಸದ, ನೀರಿನಲ್ಲಿ ನೆನೆಯದ, ಅಗ್ನಿಯಲ್ಲಿ ಸುಡದ ಗುಪ್ತ ನಿಧಿ ಎಂದರೆ ಅದು ವಿದ್ಯೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಈ ಗುಪ್ತ ನಿಧಿ ಸಿಗಬೇಕು ಎಂದು ಆಗಿನ ಕಾಲದಲ್ಲಿ ಕರಿಯಪ್ಪನವರು ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಿದರು. ಕರಿಯಪ್ಪನವರು ಲಕ್ಷಾಂತರ ಜನರಿಗೆ ವಿದ್ಯೆ ನೀಡಿದ ಸರಸ್ವತಿ ಪುತ್ರ. ಇದೇ ಜಿಲ್ಲೆಯಲ್ಲಿ ಕರಿಯಪ್ಪನವರು, ಶ್ರೀ ಶಿವಕುಮಾರಸ್ವಾಮೀಜಿ, ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು, ವೆಂಕಟಪ್ಪನವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ತಂದಿದ್ದಾರೆ” ಎಂದು ಅಭಿಪ್ರಾಯಪಟ್ಟರು.
“ನಾವೆಲ್ಲರೂ ಬೆಂಗಳೂರಿನವರು. ಸಂಗಮ, ಮದ್ದೂರು, ಮಳವಳ್ಳಿ, ತುಮಕೂರು, ಹೊಸಕೋಟೆ ಗಡಿವರೆಗಿನವರೆಲ್ಲರೂ ಬೆಂಗಳೂರಿಗರೆ. ಆಡಳಿತಾತ್ಮಕ ದೃಷ್ಟಿಯಿಂದ ಬೇರೆ ಬೇರೆ ಜಿಲ್ಲೆಯಾಗಿದೆ.
ನಾವು ರಾಜಕಾರಣಿಗಳು ಯುದ್ಧ ನಡೆಸುವಂತೆ ನಡೆದುಕೊಳ್ಳುತ್ತಿದ್ದೇವೆ. ಯುದ್ಧ ಗೆಲ್ಲುವವನು ವೀರ ಅಲ್ಲ. ಜನರ ಮನಸ್ಸನ್ನು ಗೆಲ್ಲುವವನು ನಿಜವಾದ ವೀರ” ಎಂದರು.
“ಮನುಷ್ಯ ಹುಟ್ಟುವಾಗ ತಂದೆ ತಾಯಿ, ದೇವರು, ಗುರು ಹಾಗೂ ಸಮಾಜದ ಋಣದಲ್ಲಿ ಮನುಷ್ಯ ಹುಟ್ಟುತ್ತಾನೆ. ಈ ಋಣವನ್ನು ಧರ್ಮದಿಂದ ತೀರಿಸಬೇಕು ಎಂದು ಮಹಾಭಾರತದಲ್ಲಿ ಭೀಷ್ಮ ಹೇಳಿದ್ದಾರೆ. ಇಲ್ಲಿ ನಾವು ಯಾರೂ ಶಾಶ್ವತವಲ್ಲ. ನಾವು ಹುಟ್ಟು ಸಾವಿನ ಮಧ್ಯೆ ಏನು ಸಾಧನೆ ಮಾಡುತ್ತೇವೋ ಅದೇ ಶಾಶ್ವತ” ಎಂದರು.
“ಶಿಕ್ಷಣ ಪ್ರಬಲವಾದ ಅಸ್ತ್ರ. ಅದನ್ನು ಯಾರೂ ಬೇಕಾದರೂ ಬಳಸಬಹುದು, ಜಗತ್ತನ್ನು ಬದಲಿಸಬಹುದು ಎಂದು ನೆಲ್ಸನ್ ಮಂಡೇಲಾ ಅವರು ಹೇಳಿದ್ದಾರೆ. ನಾನು ಪದವಿ ಓದುವಾಗಲೇ ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಲು ನಮಗೆ ಅವಕಾಶ ಸಿಕ್ಕಿತು. ನಾನು ಪದವಿ ಪೂರ್ಣಗೊಳಿಸಲು ಆಗಲಿಲ್ಲ. ನಂತರ ನನ್ನ 47ನೇ ವಯಸ್ಸಿನಲ್ಲಿ ಮೈಸೂರು ಮುಕ್ತ ವಿವಿಯಲ್ಲಿ ಪದವಿ ಪಡೆದೆ. ನಾನು ಶಾಸಕನಾಗಿ, ಮಂತ್ರಿಯಾಗಿದ್ದಕ್ಕಿಂತ ಹೆಚ್ಚು ಸಂತೋಷಗೊಂಡಿದ್ದು ಪದವಿ ಪಡೆದಾಗ. ನಾನು ಮೊದಲ ಬಾರಿಗೆ ಶಾಸಕನಾಗಿ ವಿಧಾನಸಭೆಗೆ ಹೋದಾಗ ದೊಡ್ಡ ಘಟಾನುಘಟಿ ನಾಯಕರು ಇದ್ದರು. ಅವರ ಮಾತು ಕೇಳಿದಾಗ, ನಾನು ಚೆನ್ನಾಗಿ ಓದಿಕೊಂಡು ಬರಬೇಕಿತ್ತು ಎಂದು ಅನಿಸಿತ್ತು. ಎಲ್ಲದಕ್ಕಿಂತ ಶಿಕ್ಷಣ ದೊಡ್ಡದು ಎಂದು ಆಗ ಅನಿಸಿತು” ಎಂದು ಹೇಳಿದರು.
“ನೀವೆಲ್ಲರೂ ಈ ಸಂಸ್ಥೆಗೆ ಹೆಚ್ಚಿನ ದಾನ ಕೊಡಿಸಿ, ಈ ಸಂಸ್ಥೆಯನ್ನು ಇನ್ನಷ್ಟು ಹೆಮ್ಮರವಾಗಿ ಬೆಳೆಯುವಂತೆ ಮಾಡಿ. ಪ್ರಕೃತಿಯಲ್ಲಿ ಮರ ಗಿಡ, ನದಿ, ಹಸು ಪರೋಪಕಾರಕ್ಕಾಗಿಯೇ ಇವೆ. ನಮ್ಮ ಈ ದೇಹ ಶಾಶ್ವತವಲ್ಲ. ಹೀಗಾಗಿ ನಾವು ಬದುಕಿರುವಷ್ಟು ದಿನ ಬೇರೆಯವರಿಗೆ ಉಪಕಾರ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ನೀವೆಲ್ಲರೂ ಈ ಸಂಸ್ಥೆಯ ಬೆಳವಣಿಗೆಗೆ ಸಹಕಾರ ನೀಡಬೇಕು. ನಾನು ಕೂಡ ಶಿಕ್ಷಣ ಸಂಸ್ಥೆಗಳಿಗಾಗಿ ಸುಮಾರು 25 ಎಕರೆಗಳಷ್ಟು ಜಾಗವನ್ನು ದಾನ ಮಾಡಿದ್ದೇನೆ” ಎಂದು ತಿಳಿಸಿದರು.